ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆದಿದ್ದು, ರಾಜ್ಯ ಸರ್ಕಾರಿ ನೌಕರರ ವೇತನ ಸೇರಿ ಹಲವು ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ಅದರಲ್ಲೂ, ವಿಶ್ವ ಬ್ಯಾಂಕ್‌ನಿಂದ ಸಾಲ ಪಡೆದು ಕರ್ನಾಟಕದ 7,110 ಗ್ರಾಮೀಣ ರಸ್ತೆಗಳನ್ನು ನಿರ್ಮಿಸಲು ತೀರ್ಮಾನಿಸಿರುವುದು ಪ್ರಮುಖ ಸಂಗತಿಯಾಗಿದೆ. ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ 52 ಸಾವಿರ ಕೋಟಿ ರೂ. ವ್ಯಯಿಸುತ್ತಿರುವ ಮಧ್ಯೆಯೇ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಿರುವುದು ಉತ್ತಮ ತೀರ್ಮಾನವಾಗಿದೆ.
ಸಚಿವ ಸಂಪುಟ ಸಭೆಯ ಬಳಿಕ ಸಚಿವ ಎಚ್.ಕೆ.ಪಾಟೀಲ್ ಅವರು ತೀರ್ಮಾನಗಳ ಕುರಿತು ಮಾಹಿತಿ ನೀಡಿದರು. “ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿಯಲ್ಲಿ ರಾಜ್ಯದ 7,110 ರಸ್ತೆಗಳ ಅಭಿವೃದ್ಧಿಗೊಳಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಸುಮಾರು 5,190 ಕೋಟಿ ರೂ. ವೆಚ್ಚದಲ್ಲಿ ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗುತ್ತದೆ. ಇದಕ್ಕಾಗಿ ವಿಶ್ವ ಬ್ಯಾಂಕ್‌ನಿಂದ ಸಾಲ ಪಡೆಯಲಾಗುತ್ತದೆ. ಎರಡು ವರ್ಷಗಳಲ್ಲಿ ಗ್ರಾಮೀಣ ರಸ್ತೆಗಳನ್ನು ನಿರ್ಮಿಸಲಾಗುವುದು” ಎಂಬುದಾಗಿ ತಿಳಿಸಿದರು.
ರಾಜ್ಯ ನೌಕರರಿಗೆ ಗುಡ್ ನ್ಯೂ 7ನೇ ವೇತನ :
ಸಚಿವ ಸಂಪುಟ ಸಭೆಯಲ್ಲಿ ಸಚಿವರ ಸಲಹೆಯನ್ನೂ ಮೀರಿ ಸರ್ಕಾರಿ ನೌಕರರ ವೇತನ ಹೆಚ್ಚಳ ಮಾಡಲು ಸಿಎಂ ಒಲವು ತೋರಿದ್ದಾರೆ. ವೇತನ ಆಯೋಗದ ಶಿಫಾರಸುಗಳನ್ನು ಪೂರ್ಣಗೊಳಿಸುವ ಮಾತನ್ನಾಡಿರುವ ಸಿಎಂ ಸಿದ್ದರಾಮಯ್ಯ, 27%ರಷ್ಟು ವೇತನ ಹೆಚ್ಚಳ ಮಾಡಲು ಸೈ ಎಂದಿದ್ದಾರೆ. ನೌಕರರು ನಿರೀಕ್ಷೆ ಮಾಡಿದ ಹೆಚ್ಚಳ ಜಾರಿಯಾಗುವ ಸಾಧ್ಯತೆಯಿದ್ದು, ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಸಂಪುಟ ಸಭೆ ಸಿಎಂಗೆ ಬಿಟ್ಟಿದೆ.
ಆಯೋಗದ ಶಿಫಾರಸಿನಂತೆ ಸರ್ಕಾರಿ ನೌಕರರ ವೇತನ ಶೇ.25ರಷ್ಟು ಹೆಚ್ಚಳಕ್ಕೆ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಕೆಲ ಸಚಿವರು ಸಲಹೆ ನೀಡಿದ್ದಾರೆ. ಅಂತಿಮವಾಗಿ ಸಂಪುಟ ಸಭೆ ಆಯೋಗದ ಶಿಫಾರಸು ಜಾರಿ ಅಧಿಕಾರವನ್ನ ಸಿಎಂಗೆ ನೀಡಿದ್ದು, ವೇತನ ಶೇ.27ರಷ್ಟು ಹೆಚ್ಚಳಕ್ಕೆ ಸಿಎಂ ಸಿದ್ದರಾಮಯ್ಯ ಸಹ ಒಲವು ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಹೀಗಾಗಿ ರಾಜ್ಯ ಸರ್ಕಾರ ಶೀಘ್ರದಲ್ಲೇ ಅಧಿಕೃತ ನಿರ್ಧಾರ ಪ್ರಕಟಿಸುವ ಸಾಧ್ಯತೆಗಳಿವೆ.ಏಳನೇ ವೇತನ ಆಯೋಗ ಜಾರಿಯಾದರೆ 13.5 ಲಕ್ಷ ಮಂದಿಗೆ ಅನುಕೂಲವಾಗಲಿದೆ. 6 ಲಕ್ಷ ಸರ್ಕಾರಿ ನೌಕರರು ನಿಗಮ-ಮಂಡಳಿ, ಪ್ರಾಧಿಕಾರಿಗಳ 3 ಲಕ್ಷ ಮತ್ತು ಪಿಂಚಣಿ ಪಡೆಯುತ್ತಿರುವ 4.5 ಲಕ್ಷ ನಿವೃತ್ತರಿಗೆ 7ನೇ ವೇತನ ಆಯೋಗ ಅನ್ವಯವಾಗಲಿದೆ.