ಚನ್ನಪಟ್ಟಣ: ಹೆಚ್ ಡಿ ಕುಮಾರಸ್ವಾಮಿಯವರಿಂದ ತೆರವಾಗಿರುವ ಚನ್ನಪಟ್ಟಣ ಉಪಚುನಾವಣೆ. ಡಿಕೆಶಿ ಎಂಟ್ರಿಯಾಗುತ್ತಿದ್ದಂತೆ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಸುದ್ದಿಗೋಷ್ಠಿ ನಡೆಸಿದ್ದು, ಡಿಕೆಶಿ ಸವಾಲನ್ನು ಸ್ವೀಕರಿಸಲು ಮೈತ್ರಿ ಪಕ್ಷಗಳು ಸಿದ್ಧವಾಗಿವೆ ಎಂದು ತಿಳಿಸಿದ್ದಾರೆ. ಚನ್ನಪಟ್ಟಣ ಉಪಚುನಾವಣೆಗೆ ಡಿಸಿಎಂ ಡಿಕೆಶಿ ಬರ್ತಿದ್ದಾರೆ. ಅವರಿಗೆ ತುಂಬು ಹೃದಯದ ಸ್ವಾಗತ ಕೋರುತ್ತೇನೆ. ಯಾವುದೇ ಚುನಾವಣೆಯಲ್ಲಿ ಸ್ಪರ್ಧೆಗೆ ಪ್ರತಿಸ್ಪರ್ಧೆ ಮುಖ್ಯ. ಹಾಗಾಗಿ ಅವರ ಸ್ಪರ್ಧೆಯನ್ನ ಸ್ವಾಗತಿಸುತ್ತೇವೆ. ಹಿಂದೆ ಚನ್ನಪಟ್ಟಣದ ಎರಡು ಹೋಬಳಿಗಳು ಅವರಿಗೆ ಸೇರಿದ್ದವು. ಆ ಖುಣ ತೀರಿಸಲು ಬರ್ತೀನಿ ಎಂದಿದ್ದಾರೆ, ಬರಲಿ ಬಿಡಿ ಎಂದರು.
ನಿನ್ನೆ ಕನಕಪುರ ಮಾಡೆಲ್ ಬಗ್ಗೆ ಡಿಕೆಶಿ ಮಾತನಾಡಿದ್ದಾರೆ. ಚನ್ನಪಟ್ಟಣವನ್ನ ಕನಕಪುರದ ರೀತಿ ಅಭಿವೃದ್ಧಿ ಮಾಡುತ್ತೇನೆ ಎಂದಿದ್ದಾರೆ. ಕನಕಪುರ ಮಾಡೆಲ್ ಎಂದರೆ ಬೆದರಿಕೆ, ದಬ್ಬಾಳಿಕೆ ಮಾಡೋದಾ? ಜನರನ್ನ ಹೆದರಿಸುವ ತಂತ್ರವೇ ಕನಕಪುರ ಮಾಡೆಲ್? ಚನ್ನಪಟ್ಟಣ ಕ್ಷೇತ್ರದಲ್ಲಿ ಜನ ಸದೃಡವಾಗಿದ್ದಾರೆ. ಕ್ಷೇತ್ರದಲ್ಲಿ ನೀರಾವರಿ, ಹೈನುಗಾರಿಕೆ ಸಮೃದ್ಧವಾಗಿ ನಡೆಯುತ್ತಿದೆ. ಕನಕಪುರಕ್ಕೆ ಚನ್ನಪಟ್ಟಣವನ್ನ ಹೋಲಿಸೋದು ಬೇಡ. ಬೇಕಿದ್ರೆ ಡಿಕೆ ಶಿವಕುಮಾರ್ ಹಗಲು ಹೊತ್ತಿನಲ್ಲಿ ಬಂದು ನಮ್ಮ ಕ್ಷೇತ್ರ ನೋಡಲಿ ಎಂದು ತಿರುಗೇಟು ನೀಡಿದರು.
ನನಗೆ ಭಯವಾಗಯತ್ತಿರುವ ವಿಷಯವೆಂದರೆ ಅವರು ನಿನ್ನೆ ಬಂದು ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ಬಳಿಕ ಚನ್ನಪಟ್ಟಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಬೆದರಿಕೆ ಹಾಕಿದ್ದಾರೆ. ಅಧಿಕಾರಿಗಳನ್ನ ಬೆಂಗಳೂರಿಗೆ ಕರೆಸಿ ಧಮ್ಕಿ ಹಾಕಿದ್ದಾರೆ. ಒಂದು ಸಮುದಾಯದ 7-8ಸಾವಿರ ಮತಗಳನ್ನ ಹೊಸದಾಗಿ ಸೇರಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಧಿಕಾರ ದುರ್ಬಳಕೆ ಮಾಡಿಕೊಂಡು ವಾಮಾಮಾರ್ಗದಲ್ಲಿ ಚುನಾವಣೆಗೆ ಬರುತ್ತಿದ್ದಾರೆ ಎಂದು ಡಿಕೆಶಿ ವಿರುದ್ಧ ಮಾಜಿ ಸಚಿವ ಆರೋಪಿಸಿದ್ದಾರೆ.
ಶಿವಕುಮಾರ್ಗೆ ತಮ್ಮನ ಸೋಲು ಹತಾಶೆ ತಂದಿದೆ. ಅದನ್ನ ಹರಗಿಸಿಕೊಳ್ಳಲು ಅವರಿಗೆ ಆಗುತ್ತಿಲ್ಲ. ಹಾಗಾಗಿ ವಾಮಾಮಾರ್ಗದಲ್ಲಿ ಅಧಿಕಾರ ಹಿಡಿಯಲು ಮುಂದಾಗಿದ್ದಾರೆ. ಅದಕ್ಕಾಗಿ ಚುನಾವಣಾ ಆಯೋಗಕ್ಕೆ ಪಾರದರ್ಶಕವಾಗಿ ಚುನಾವಣೆ ನಡೆಸಲು ಮನವಿ ಮಾಡುತ್ತೇವೆ. ಚುನಾವಣೆ ನಮ್ಮ ಪರವಾಗಿ ಇದೆ. ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಯಿಂದ ಜನ ಬೇಸತ್ತಿದ್ದಾರೆ. ವಾಲ್ಮೀಕಿ ನಿಗಮದ ಭ್ರಷ್ಟಾಚಾರ ಜನರ ಗಮನಕ್ಕಿದೆ. ಹಾಗಾಗಿ ಉಪಚುನಾವಣೆಯಲ್ಲಿ ನಮಗೆ ಗೆಲುವು ಖಚಿತ. ಎನ್ಡಿಎ ಒಕ್ಕೂಟದಿಂದ ಯಾರೇ ಅಭ್ಯರ್ಥಿ ಆದರೂ ನಾವು ಚುನಾವಣೆ ಮಾಡುತ್ತೇವೆ.
ಚನ್ನಪಟ್ಟಣದಿಂದ ಸಿಪಿವೈ ಆಕಾಂಕ್ಷಿ ಎಂಬ ವಿಚಾರದ ಬಗ್ಗೆ ಮಾತನಾಡಿ, ಅಭ್ಯರ್ಥಿ ಆಯ್ಕೆ ಬಗ್ಗೆ ನಮ್ಮ ಪಕ್ಷ ತೀರ್ಮಾನ ಮಾಡುತ್ತದೆ. ಕುಮಾರಸ್ವಾಮಿ ಅವರ ತೀರ್ಮಾನ ಕೂಡಾ ಮುಖ್ಯ. ಎರಡೂ ಪಕ್ಷ ತೀರ್ಮಾನ ಮಾಡಿ ಯಾರೇ ಅಭ್ಯರ್ಥಿ ಮಾಡಿದ್ರೂ ನಾನು ಕೆಲಸ ಮಾಡ್ತೀನಿ. ಕುಮಾರಸ್ವಾಮಿ ಅವರ ನಿರ್ಧಾರ ಇಲ್ಲಿ ಮುಖ್ಯವಾಗುತ್ತದೆ. ಅವರ ತೀರ್ಮಾನಕ್ಕೆ ನಾವು ಬದ್ಧ. ಡಿಕೆ ಸುರೇಶ್ ಇಲ್ಲಿ ನಿಂತರೇ ಇಲ್ಲಿ ಗೆಲ್ಲಲ್ಲ. ಬೇರೆ ಯಾರೇ ನಿಂತರೂ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲುತ್ತದೆ. ಹಾಗಾಗಿ ಡಿಕೆಶಿ ತಾನೇ ಬಂದು ವಾಮಾಮಾರ್ಗದಲ್ಲಿ ಚುನಾವಣೆ ಮಾಡಲು ಬರ್ತಿದ್ದಾರೆ. ಅವರನ್ನ ನಾವು ಸ್ವಾಗತ ಮಾಡ್ತೀವಿ. ಹೊಸ ರಾಜಕೀಯ ಅಧ್ಯಾಯ ಇಲ್ಲಿಂದ ಪ್ರಾರಂಭವಾಗುತ್ತದೆಯೋ ಅಥವಾ ಅಂತ್ಯವಾಗುತ್ತದೇ ಕಾದು ನೋಡಿ ಎಂದರು.