ಅಮರಾವತಿ : ಚಂದ್ರಬಾಬು ನಾಯ್ಡು ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ, ವೈ.ಎಸ್.ಜಗನ್ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಕಚೇರಿಯ ಮೇಲೆ ಬುಲ್ಡೋಜರ್ ಹರಿದಿದೆ. ಅನಧಿಕೃತ ಎಂದು ಗುಂಟೂರಿನಲ್ಲಿರುವ ನಿರ್ಮಾಣ ಹಂತದ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಕಚೇರಿಯನ್ನು ನೆಲಸಮಗೊಳಿಸಿದೆ.
ಶನಿವಾರ (ಜೂನ್ 22) ಬೆಳಗ್ಗಿನ ಜಾವ ಈ ಕಾರ್ಯಾಚರಣೆ ನಡೆದಿದ್ದು, ಪ್ರತೀಕಾರದ ರಾಜಕೀಯ ಆರಂಭಗೊಂಡಿದೆ ಎಂದು ವೈಎಸ್ಆರ್ ಕಾಂಗ್ರೆಸ್ ಮುಖಂಡರು ಪ್ರತಿಕ್ರಿಯಿಸಿದ್ದಾರೆ. ಅನಧಿಕೃತವಾದ ಜಾಗದಲ್ಲಿ ಕಚೇರಿ ನಿರ್ಮಾಣಗೊಳ್ಳುತ್ತಿತ್ತು ಎಂದು ಅಧಿಕಾರಿಗಳು ಸ್ಪಷ್ಟನೆಯನ್ನು ನೀಡಿದ್ದಾರೆ. ಗುಂಟೂರಿನ ಸೀತಾನಗರಂ ತಾಡೇಪಲ್ಲಿ ಎನ್ನುವಲ್ಲಿ 870 ಚದರಡಿಯಲ್ಲಿ ಈ ಕಚೇರಿ ನಿರ್ಮಾಣಗೊಳ್ಳುತ್ತಿತ್ತು ಎಂದು ದಿ ಹಿಂದೂ ಪತ್ರಿಕೆ ವರದಿ ಮಾಡಿದೆ. ಗುಂಟೂರು ವಿಭಾಗವನ್ನು ಕೇಂದ್ರೀಕರಿಸಿ, ಈ ಕಟ್ಟಡವನ್ನು ಪಕ್ಷದ ಸೆಂಟ್ರಲ್ ಕಚೇರಿಯಾಗಿ ಕಾರ್ಯನಿರ್ವಹಿಸುವ ಯೋಜನೆಯನ್ನು ವೈ.ಎಸ್.ಜಗನ್ ಹಾಕಿಕೊಂಡಿದ್ದರು ಎಂದು ಹೇಳಲಾಗುತ್ತಿದೆ.
” ತೆಲುಗುದೇಶಂ ಪಕ್ಷವು ಪ್ರತೀಕಾರದ ರಾಜಕೀಯವನ್ನು ಆರಂಭಿಸಿದೆ. ಕಟ್ಟಡ ನೆಲಸಮಗೊಳಿಸುವ ವಿಚಾರದಲ್ಲಿ ಶುಕ್ರವಾರವಷ್ಟೇ ನಾವು ಹೈಕೋರ್ಟ್ ಮೊರೆ ಹೋಗಿದ್ದೆವು. ಕಟ್ಟಡ ಧ್ವಂಸಗೊಳಿಸುವುದನ್ನು ಸದ್ಯಕ್ಕೆ ತಡೆ ಹಿಡಿಯಲು ಕೋರ್ಟ್ ಸೂಚಿಸಿತ್ತು ” ಎಂದು ಪಕ್ಷದ ಮುಖಂಡರು ಹೇಳಿದ್ದಾರೆ.
ವೈಎಸ್ಆರ್ ಕಾಂಗ್ರೆಸ್ ಪಕ್ಷದ ಗುಂಟೂರು ಜಿಲ್ಲೆಯ ಅಧ್ಯಕ್ಷರಾಗಿರುವ ಶೇಷಗಿರಿ ರಾವ್ ಅವರು ಆಂಧ್ರ ಪ್ರದೇಶ ಹೈಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ರಾಜ್ಯ ಸರ್ಕಾರ ಮತ್ತು ಸಂಬಂಧಪಟ್ಟ ಪ್ರಾಧಿಕಾರಕ್ಕೆ ಮುಂದಿನ ಸೂಚನೆಯ ವರೆಗೆ ಕಾರ್ಯಾಚರಣೆ ನಡೆಸದಂತೆ ಸೂಚನೆ ನೀಡಬೇಕೆಂದು ಮನವಿ ಮಾಡಲಾಗಿತ್ತು. ಕೋರ್ಟ್ ಕಾರ್ಯಾಚರಣೆಗೆ ತಡೆ ನೀಡಿತ್ತು, ಶನಿವಾರ ಬೆಳಗ್ಗಿನ ಜಾವ 5.30ಕ್ಕೆ ಕಟ್ಟದ ನೆಲಸಮಗೊಳಿಸುವ ಕೆಲಸ ಆರಂಭವಾಗಿದೆ. ಸರ್ವಾಧಿಕಾರಿಯಂತೆ ವರ್ತಿಸಿ, ಚಂದ್ರಬಾಬು ನಾಯ್ಡು ನಮ್ಮ ತಾಡೇಪಲ್ಲಿ ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ ಎಂದು ಮಾಜಿ ಸಿಎಂ ಜಗನ್ಮೋಹನ್ ರೆಡ್ಡಿ ಆಕ್ರೋಶ ಹೊರಹಾಕಿದ್ದಾರೆ.