ಬಜೆಟ್ ಮಂಡನೆಗೆ ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದ್ದು, ಈ ನಡುವಲ್ಲೇ ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್ ಘೋಷಿತ 5,300 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತ ಕೇಂದ್ರ ಸರಕಾರಕ್ಕೆ ರಾಜ್ಯ ಸರ್ಕಾರ ಮತ್ತೆ ಮನವಿ ಮಾಡಿಕೊಂಡಿದೆ.
ಬೆಂಗಳೂರು: ಬಜೆಟ್ ಮಂಡನೆಗೆ ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದ್ದು, ಈ ನಡುವಲ್ಲೇ ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್ ಘೋಷಿತ 5,300 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತ ಕೇಂದ್ರ ಸರಕಾರಕ್ಕೆ ರಾಜ್ಯ ಸರ್ಕಾರ ಮತ್ತೆ ಮನವಿ ಮಾಡಿಕೊಂಡಿದೆ.
ಕೇಂದ್ರ ಬಜೆಟ್ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಪರವಾಗಿ ಕರ್ನಾಟಕದಿಂದ ಭಾಗಿಯಾಗಿದ್ದ ಕೃಷ್ಣ ಬೈರೇಗೌಡ ರಾಜ್ಯದ ಅಹವಾಲುಗಳನ್ನು ನೀಡಿದ್ದಾರೆ
ಸರ್ಕಾರದ ಮನವಿ ಇಂತಿದೆ...
- ಮನವಿಯಲ್ಲಿ ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಗೆ ಈಗಾಗಲೇ ಘೋಷಿಸಲಾಗಿರುವ 5300 ಕೋಟಿ ರೂ. ನೆರವನ್ನು ಬಿಡುಗಡೆ ಮಾಡಿ ಮತ್ತು ಅದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಿ,
- ಕರ್ನಾಟಕಕ್ಕೆ ಹಣಕಾಸು ಆಯೋಗ ಶಿಫಾರಸು ಮಾಡಿರುವ 11495 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿ.
- ಸೆಸ್‌ಗಳು ಮತ್ತು ಸರ್‌ಚಾರ್ಜ್‌ಗಳನ್ನು ವಿಭಾಗಿಸಬಹುದಾದ ಪೂಲ್‌ಗೆ ಸೇರಿಸಿ ಇದರಿಂದ ರಾಜ್ಯಗಳು ಕೇಂದ್ರ ತೆರಿಗೆಗಳಲ್ಲಿ ತಮ್ಮ ಸರಿಯಾದ ಪಾಲನ್ನು ಪಡೆಯಬಹುದು.
- ಬೆಂಗಳೂರು ಅಭಿವೃದ್ಧಿ ಮತ್ತು ಕಲ್ಯಾಣ ಕರ್ನಾಟಕ ಅಭಿವೃದ್ಧಿಗಾಗಿ ಎಸ್ಪಿ ಪ್ಯಾಕೇಜ್ ಅನ್ನು ಘೋಷಿಸಿ.
- ಅಂಗನವಾಡಿ, ಆಶಾ ಮತ್ತು ಮಧ್ಯಾಹ್ನದ ಊಟದ ಕಾರ್ಯಕರ್ತೆಯರಿಗೆ ಗೌರವಧನವನ್ನು ಹೆಚ್ಚಿಸಿ.
- ವಸತಿ ಯೋಜನೆಗಳಲ್ಲಿ ಫಲಾನುಭವಿಗಳಿಗೆ ನೀಡಲಾಗುವ ಭಾರತ ಸರ್ಕಾರದ ಪಾಲನ್ನು ನಗರ ಪ್ರದೇಶದಲ್ಲಿ ರೂ. 1.5 ರಿಂದ 5 ಲಕ್ಷಕ್ಕೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ರೂ. 1.2 ರಿಂದ ರೂ. 3 ಲಕ್ಷಕ್ಕೆ ಹೆಚ್ಚಿಸಿ.
- ರಾಯಚೂರಿಗೆ ಎಐಐಎಂಎಸ್ ಘೋಷಿಸಿ.
- ಇದರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿವರವಾದ ಟಿಪ್ಪಣಿಯನ್ನು ಸಹ ಸಲ್ಲಿಕೆ ಮಾಡಲಾಗಿದೆ.
ಹೊಸ ಸರ್ಕಾರ ರಚನೆ ಆಗಿರುವುದಿಂದ ಪ್ರಸಕ್ತ ಆರ್ಥಿಕ ವರ್ಷದ ಕೇಂದ್ರ ಸರ್ಕಾರ ಹೊಸ ಬಜೆಟ್ ಮಂಡಿಸಲಿದೆ. ಅದಕ್ಕಾಗಿ ಇಂದು ಕೇಂದ್ರ ಬಜೆಟ್ ಪೂರ್ವಭಾವಿ ಸಮಾಲೋಚನಾ ಸಭೆ ನಿಗದಿಯಾಗಿತ್ತು. ಮುಂಚೆ ಈ ಸಭೆಗೆ ಕರ್ನಾಟಕದಿಂದ ಸಿಎಂ ಸಿದ್ದರಾಮಯ್ಯ ಅವರಿಗೆ ಭಾಗವಹಿಸುವಂತೆ ನಿರ್ಮಲಾ ಸೀತಾರಾಮನ್ ಪತ್ರದ ಮೂಲಕ ಆಹ್ವಾನ ನೀಡಿದ್ದರು.
ಈ ಹಿನ್ನೆಲೆಯಲ್ಲಿ ನಿರ್ಮಲಾ ಸೀತಾರಾಮನ್ಗೆ ಪತ್ರ ಬರೆದಿದ್ದ ಸಿದ್ದರಾಮಯ್ಯ ಅವರು, ನನ್ನ ಬದಲಿಗೆ ಕೃಷ್ಣ ಬೈರೇಗೌಡ ಅವರು ರಾಜ್ಯದ ಪ್ರತಿನಿಧಿಯಾಗಿ ಬಜೆಟ್ ಪೂರ್ವಭಾವಿ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ. ರಾಜ್ಯದ ಜಿಎಸ್ಟಿಗೆ ಸಂಬಂಧಿಸಿದ ವಿಚಾರಗಳನ್ನು ಅವರು ನಿರ್ವಹಿಸುತ್ತಿರುವುದರಿಂದ ಅವರೇ ಸಭೆಯಲ್ಲಿ ಭಾಗಿಯಾಗುತ್ತಾರೆ ಎಂದು ಪತ್ರ ಬರೆದಿದ್ದರು.
























