ಕಡಬ : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆ ಸುಬ್ರಹ್ಮಣ್ಯ ಹಾಗೂ ಘಟ್ಟ ಪ್ರದೇಶಗಳಲ್ಲಿ ಕಳೆದ ರಾತ್ರಿಯಿಂದ ಸುರಿದ ನಿರಂತರ ಮಳೆಗೆ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ನದಿ ತುಂಬಿ ಹರಿಯುತ್ತಿದ್ದು, ಸ್ನಾನ ಘಟ್ಟ ಮುಳುಗಡೆಯಾಗಿದೆ.ನಿರಂತರ ಮಳೆಗೆ ನದಿಯಲ್ಲಿ ನೀರಿ ಮಟ್ಟ ಏರಿಕೆಯಾಗಿ ಇದೀಗ ಸ್ನಾನ ಘಟ್ಟ ಮುಳುಗಡೆಯಾಗಿದ್ದು, ನದಿಗಿಳಿಯದಂತೆ ಭಕ್ತರಿಗೆ ಸೂಚಿಸಲಾಗಿದೆ.
ಭಕ್ತರು ನದಿ ದಡದಲ್ಲೇ ತೀರ್ಥ ಸ್ನಾನ ಮಾಡುತ್ತಿದ್ದಾರೆ. ಕುಮಾರಧಾರ ಉಪನದಿ ದರ್ಪಣತೀರ್ಥ ಕೂಡ ತುಂಬಿ ಹರಿಯುತ್ತಿದೆ. ಕುಮಾರಧಾರ ನದಿ ತೀರದಲ್ಲಿ ದೇವಳದ ಭದ್ರತಾ ಸಿಬ್ಬಂದಿಗಳು, ಗೃಹ ರಕ್ಷಕ ದಳ ಸಿಬ್ಬಂದಿಗಳ ನಿಯೋಜಿಸಲಾಗಿದೆ. ಕಳೆದ ರಾತ್ರಿಯಿಂದ ಕುಕ್ಕೆಯಲ್ಲಿ ನಿಂರತರ ಮಳೆ ಆಗುತ್ತಿದೆ.
ಇತಿಹಾಸ ಪ್ರಸಿದ್ಧ ಮಧೂರು ದೇವಸ್ಥಾನ ಜಲಾವೃತ:
ಮಂಗಳೂರು ಗಡಿಭಾಗ ಕಾಸರಗೋಡಿನಲ್ಲೂ ಭಾರೀ ಮಳೆಯಾಗುತ್ತಿದೆ. ಮಳೆ ಅಬ್ಬರಕ್ಕೆ ಇತಿಹಾಸ ಪ್ರಸಿದ್ದ ಮಧೂರು ಮದನಂತೇಶ್ವರ ಸಿದ್ದಿವಿನಾಯಕ ದೇವಸ್ಥಾನ ಜಲಾವೃತಗೊಂಡಿದೆ. ಮಧುವಾಹಿನಿ ನದಿ ತುಂಬಿ ತುಳುಕುತ್ತಿದ್ದು, ದೇವಸ್ಥಾನದ ಒಳಭಾಗದಲ್ಲಿ ನಾಲ್ಕೈದು ಅಡಿ ನೀರು ನಿಂತಿದೆ. ದೇವಸ್ಥಾನ ಸುತ್ತಮುತ್ತಲ ಪ್ರದೇಶ ಜಲಾವೃತವಾಗಿ ದ್ವೀಪದಂತೆ ಗೋಚರಿಸುತ್ತಿದೆ.