ಜುಲೈ 6 ರಂದು ಬಿಜೆಪಿಯ ರಾಜ್ಯ ಕೋರ್ ಕಮಿಟಿ ಮತ್ತು ಕಾರ್ಯಕಾರಿ ಸಮಿತಿ ಸಭೆ ನಿಗದಿಯಾಗಿದೆ. ಇದರಲ್ಲಿ ಭಿನ್ನಾಭಿಪ್ರಾಯದ ಬಗ್ಗೆ ಚರ್ಚೆ ನಡೆಯಲಿದೆ. ಅದಲ್ಲದೇ ಕೋಟಾ ಶ್ರೀನಿವಾಸ್ ಪೂಜಾರಿ ಲೋಕಸಭೆಗೆ ಆಯ್ಕೆಯಾಗಿದ್ದರಿಂದ ತೆರವಾಗಿರುವ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರ ನೇಮಕದ ಬಗ್ಗೆಯೂ ಈ ವೇಳೆ ಚರ್ಚೆ ನಡೆಯಲಿದೆ. ಪರಿಷತ್‌ನ ನೂತನ ವಿಪಕ್ಷ ನಾಯಕರ ಆಯ್ಕೆಗೆ ಶೀಘ್ರದಲ್ಲೇ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕೂಡ ನಡೆಯಲಿದೆ. ಪರಿಷತ್ ವಿಪಕ್ಷ ನಾಯಕ ಸ್ಥಾನಕ್ಕೆ ಸಿಟಿ ರವಿ ಪ್ರಬಲ ಆಕಾಂಕ್ಷಿಯಾಗಿದ್ದಾರೆ.
ಆದರೆ, ವಿಧಾನಸಭೆಯಲ್ಲಿ ಆರ್ ಅಶೋಕ್ ವಿಪಕ್ಷ ನಾಯಕ ಇದ್ದು, ಎರಡು ಕಡೆ ಒಕ್ಕಲಿಗರೇ ಪ್ರಮುಖ ಹುದ್ದೆ ಅಲಂಕರಿಸಿದರೆ ಬಿಜೆಪಿಯ ಜಾತಿ ಸಮೀಕರಣದ ಮೇಲೆ ಪರಿಣಾಮ ಬೀರುತ್ತದೆ. ಇದರ ಹಿಂದೆ ಬಿಎಸ್ ಯಡಿಯೂರಪ್ಪ ವಿರೋಧಿ ಬಣದ ತಂತ್ರ ಅಡಗಿದೆ ಎನ್ನಲಾಗುತ್ತಿದೆ. ಸಿಟಿ ರವಿ ಅವರು ಪ್ರಮುಖವಾಗಿ ವಿಜಯೇಂದ್ರ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ಜೊತೆಗೆ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ.
ಪರಿಷತ್ ವಿಪಕ್ಷ ನಾಯಕನ ಸ್ಥಾನದ ಮೇಲೆ ಕಣ್ಣಿಡುವ ಮೂಲಕ ಬಿಎಸ್‌ವೈ ಟೀಂಗೆ ಸಿಟಿ ರವಿ ಟಾಂಗ್ ನೀಡಿದ್ದಾರೆ. ಈ ಮೂಲಕ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಬಿಎಸ್ ಯಡಿಯೂರಪ್ಪ ಅವರ ನಿಷ್ಠಾವಂತ ಆರ್ ಅಶೋಕ್ ಅವರನ್ನು ಬದಲಿಸಲು ಪ್ಲಾನ್ ಮಾಡಲಾಗಿದೆ. ಇದಾದ ಬಳಿಕ ರಾಜ್ಯಾಧ್ಯಕ್ಷರನ್ನು ಕೂಡ ಬದಲಿಸುವ ತಂತ್ರಗಾರಿಕೆಯನ್ನು ಬಿಎಲ್ ಸಂತೋಷ್ ಟೀಂ ಮಾಡಿದೆ ಎನ್ನಲಾಗಿದೆ. ಇದರೊಂದಿಗೆ ಬಿವೈ ವಿಜಯೇಂದ್ರ ಅವರನ್ನು ಕಟ್ಟಿಹಾಕಲು ಕೆಡ್ಡಾ ತೊಡಲಾಗಿದೆ ಎಂದು ಹೇಳಲಾಗಿದೆ.
ಇದೇ ವಿಚಾರವಾಗಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ ರಾಜೀವ್ ಕೂಡ ಮಾತನಾಡಿದ್ದು, ಪಕ್ಷದಲ್ಲಿನ ಅಶಿಸ್ತನ್ನು ಬಿಜೆಪಿ ಹೈಕಮಾಂಡ್ ಸಹಿಸಲ್ಲ, ಭಿನ್ನಾಭಿಪ್ರಾಯಗಳನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಈ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಇದರೊಂದಿಗೆ ಬಿಜೆಪಿಯಲ್ಲಿ ಏನು ಸರಿಯಿಲ್ಲ ಎಂಬುದನ್ನು ಒಪ್ಪಿಕೊಂಡಿರುವುದು ಸ್ಪಷ್ಟವಾಗುತ್ತದೆ.