ರಾಮನಗರ, ಜೂನ್ 29: ಡಿಸಿಎಂ ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನ ತ್ಯಜಿಸಬೇಕೆಂಬ ಹೇಳಿಕೆ ವಿಚಾರವಾಗಿ ಸಚಿವ ಕೆಎನ್ ರಾಜಣ್ಣ ವಿರುದ್ಧ ಕಾಂಗ್ರೆಸ್ ಮಾಜಿ ಸಂಸದ ಡಿಕೆ ಸುರೇಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉತ್ತಮ ಆಡಳಿತ ನಡೆಸಲಿ ಎಂದು ಹೈಕಮಾಂಡ್ ಜವಾಬ್ದಾರಿ ನೀಡಿದೆ. ಅವರಿಗೆ (ಡಿಕೆಶಿಗೆ) ಯೋಗ್ಯತೆ ಇಲ್ಲ ಎನ್ನುವುದಾದರೆ ಚುನಾವಣೆಗೆ ಹೋಗುವುದು ವಾಸಿ. ನಾವೆಲ್ಲರೂ ಚುನಾವಣೆಗೆ ಹೋಗೋಣ ಎಂದಿದ್ದಾರೆ. ಡಿಕೆ ಶಿವಕುಮಾರ್ ಅವರಿಗೆ ಜವಾಬ್ದಾರಿ ಕೊಟ್ಟಿರುವುದು ಪಕ್ಷದ ವರಿಷ್ಠರು. ವರಿಷ್ಠರ ಮುಂದೆ ಡಿಕೆ ಶಿವಕುಮಾರ್ ಎಲ್ಲವನ್ನೂ ತಿಳಿಸಿದ್ದಾರೆ. ವರಿಷ್ಠರ ಬಳಿ ನೀಡಿದ ಮಾಹಿತಿ ಬೇರೆಯವರಿಗೆ ತಿಳಿಸಲಾಗಲ್ಲ ಎಂದು ಅವರು ಹೇಳಿದರು.
ಯಾರೂ ಶಾಶ್ವತ ಅಲ್ಲ, ಯಾವ ಹುದ್ದೆ ಕೂಡ ಶಾಶ್ವತ ಅಲ್ಲ. ಹೇಳಿಕೆ ಕೊಡುವವರೂ ಹಿಂದೆ ತಿರುಗಿ ನೋಡಿಕೊಳ್ಳಬೇಕು. ಹಿಂದೆ ತಿರುಗಿ ಅವರ ಬೆನ್ನನ್ನು ನೋಡಿಕೊಳ್ಳಬೇಕಾಗುತ್ತದೆ ಎಂದು ರಾಜಣ್ಣ ವಿರುದ್ಧ ವಾಗ್ದಾಳಿ ನಡೆಸಿದರು.
ಡಿಕೆ ಶಿವಕುಮಾರ್ಗೆ ಸಿಎಂ ಸ್ಥಾನ ಬಿಟ್ಟುಕೊಡಿ ಎಂಬ ಸ್ವಾಮೀಜಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದು ಸ್ವಾಮೀಜಿಗಳ ಅಭಿಪ್ರಾಯ. ಸ್ವಾಮೀಜಿ ಅವರ ವೈಯಕ್ತಿಕ ಅಭಿಪ್ರಾಯವನ್ನು ತಿಳಿಸಿದ್ದಾರೆ. ಸಿಎಂ ಸ್ಥಾನದ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ. ಈಗ ರಾಜ್ಯದ ಸಿಎಂ ಆಗಿ ಸಿದ್ದರಾಮಯ್ಯನವರು ಇದ್ದಾರೆ. ರಾಜ್ಯದಲ್ಲಿ ಸಿಎಂ ಸ್ಥಾನ ಖಾಲಿ ಇಲ್ಲ. ಸಿಎಂ ಸ್ಥಾನ ಖಾಲಿಯಾದಾಗ ಇದು ಚರ್ಚೆಗೆ ಬರುತ್ತದೆ ಎಂದರು.
ಡಿಕೆ ಶಿವಕುಮಾರ್ರನ್ನು ಯಾರೂ ಟಾರ್ಗೆಟ್ ಮಾಡಲು ಆಗಲ್ಲ. ಅವರನ್ನು ಟಾರ್ಗೆಟ್ ಮಾಡುತ್ತೇನೆ ಅಂದರೆ ಅದು ಅವರ ಭ್ರಮೆ. ಡಿಕೆ ಶಿವಕುಮಾರ್ ಅವರದ್ದೇ ವ್ಯಕ್ತಿತ್ವದಲ್ಲಿ ಹೋರಾಟದ ಮಾಡುತ್ತಿದ್ದಾರೆ. 35 ವರ್ಷಗಳ ಸುದೀರ್ಘ ರಾಜಕಾರಣ ಮಾಡಿದ್ದಾರೆ. ಯಾರದ್ದೋ ಹೆಸರಿನಲ್ಲಿ ರಾಜಕೀಯಕ್ಕೆ ಬಂದವರಲ್ಲ. ಹೋರಾಟದ ಮೂಲಕ ರಾಜಕಾರಣ ಮಾಡಿಕೊಂಡು ಬಂದವರು ಎಂದು ರಾಜಣ್ಣಗೆ ಸುರೇಶ್ ಪರೋಕ್ಷ ಟಾಂಗ್ ನೀಡಿದರು.