ಪಾಟ್ನಾ : ಬಿಹಾರ ದಲ್ಲಿ ಸೇತುವೆ ಕುಸಿತದ ಪ್ರಕರಣಗಳು ಸದ್ಯ ನಿಲ್ಲುವ ಹಾಗೆ ಕಾಣುತ್ತಿಲ್ಲ.ಇಂದು ಬೆಳಗ್ಗೆ ಸಿವಾನ್ ಜಿಲ್ಲೆಯ ಗಂಡಕಿ ನದಿಯ ಮೇಲಿನ ಸೇತುವೆಯ ಒಂದು ಭಾಗ ಕುಸಿದಿದೆ. ಇದು ಕಳೆದ 15 ದಿನಗಳಲ್ಲಿ ನಡೆದ ಏಳನೇ ಘಟನೆಯಾಗಿದೆ. ಜಿಲ್ಲೆಯ ಡಿಯೋರಿಯಾ ಬ್ಲಾಕ್‌ನಲ್ಲಿದ್ದ ಸಣ್ಣ ಸೇತುವೆ ಮಹರಾಜ್ ಗಂಜ್ ನೊಂದಿಗೆ ಅನೇಕ ಗ್ರಾಮಗಳನ್ನು ಸಂಪರ್ಕಿಸುತಿತ್ತು. ಇಲ್ಲಿಯವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಬ್ಲಾಕ್‌ನ ಹಿರಿಯ ಅಧಿಕಾರಿಗಳು ಈಗಾಗಲೇ ಸ್ಥಳಕ್ಕೆ ತೆರಳಿದ್ದಾರೆ. ಮುಂಜಾನೆ 5 ಗಂಟೆಯ ಸುಮಾರಿಗೆ ಘಟನೆ ನಡೆದಿದೆ ಪ್ರಾಥಮಿಕ ಮಾಹಿತಿಯ ಪ್ರಕಾರ, 1982-83 ರಲ್ಲಿ ನಿರ್ಮಿಸಲಾದ ಸೇತುವೆ ದುರಸ್ತಿ ಕಾರ್ಯ ಕಳೆದ ಕೆಲವು ದಿನಗಳಿಂದ ನಡೆಯುತ್ತಿದೆ ಎಂದು ತಿಳಿದುಬಂದಿದೆ.ಘಟನೆಗೆ ನಿಖರ ಕಾರಣ ತಿಳಿಯಲು ತನಿಖೆ ಪ್ರಗತಿಯಲ್ಲಿದೆ ಎಂದು ಉಪ ಅಭಿವೃದ್ಧಿ ಆಯುಕ್ತ ಮುಕೇಶ್ ಕುಮಾರ್ ತಿಳಿಸಿದ್ದಾರೆ. ಜೂನ್ 22 ರಂದು ದಾರುಂಡಾ ಪ್ರದೇಶದಲ್ಲಿನ ಸೇತುವೆಯೊಂದರ ಭಾಗ ಕುಸಿದಿತ್ತು. ಮಧುಬನಿ, ಅರಾರಿಯಾ, ಪೂರ್ವ ಚಂಪಾರಣ್ ಮತ್ತು ಕಿಶನ್‌ಗಂಜ್‌ನಂತಹ ಜಿಲ್ಲೆಗಳಲ್ಲಿ ಇತ್ತೀಚೆಗೆ ಇದೇ ರೀತಿಯ ಘಟನೆಗಳು ವರದಿಯಾಗಿವೆ.
ಇನ್ನು ಸರಣಿ ಸೇತುವೆ ಕುಸಿತ ಅವಘಡಗಳ ವಿಚಾರವಾಗಿ ವಿರೋಧ ಪಕ್ಷಗಳು ಬಿಜೆಪಿ- ಜೆಡಿಯು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿವೆ. ಬಿಹಾರದಲ್ಲಿನ ಡಬಲ್ ಎಂಜಿನ್ ಸರ್ಕಾರದ ಡಬಲ್ ಪವರ್‌ನಿಂದಾಗಿ ಕೇವಲ 9 ದಿನಗಳಲ್ಲಿ 5 ಸೇತುವೆಗಳು ಮಾತ್ರ ಕುಸಿದಿವೆ ಎಂದು ವಿಧಾನಸಭೆಯಲ್ಲಿನ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಅವರು ನಿತೀಶ್ ಕುಮಾರ್ ಸರ್ಕಾರವನ್ನು ಲೇವಡಿ ಮಾಡಿದ್ದಾರೆ.