ಉಡುಪಿ: ಕರಾವಳಿಯಲ್ಲಿ ವರುಣನ ಅಬ್ಬರ ಮುಂದುವರಿದಿದೆ. ಧಾರಾಕಾರ ಮಳೆಗೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುಡ್ಡ ಕುಸಿದು ಸುಗಮ ವಾಹನ ಸಂಚಾರಕ್ಕೆ ಅಡ್ಡಿಯಾಗಿದ್ದು, ಹೆದ್ದಾರಿಯ ಒಂದು ಬದಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಭಾರೀ ಮಳೆಗೆ ಮಣ್ಣು ಸಡಿಲಗೊಂಡು ಕರ್ನಲ್ ಹಿಲ್ ಗುಡ್ಡ ಕುಸಿದು ರಾಷ್ಟ್ರೀಯ ಹೆದ್ದಾರಿ 66ಕ್ಕೆ ಮಣ್ಣು ಬಿದ್ದಿದೆ. ಹೀಗಾಗಿ ಕುಮಟಾ-ಮಂಗಳೂರು ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಸದ್ಯ ಐಆರ್‌ಬಿ ಸಿಬ್ಬಂದಿ ಹೆದ್ದಾರಿ ಮೇಲೆ ಕುಸಿದ ಮಣ್ಣನ್ನು ತೆರವುಗೊಳಿಸುತ್ತಿದ್ದು, ಹೆದ್ದಾರಿಯ ಒಂದು ಬದಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಅಲ್ಪ ಪ್ರಮಾಣದಲ್ಲಿ ಗುಡ್ಡ ಕುಸಿದ ಹಿನ್ನಲೆಯಲ್ಲಿ ಸಂಚಾರಕ್ಕೆ ಅವಕಾಶ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳಕ್ಕೆ ಹೊನ್ನಾವರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಾದ್ಯಂತ ಕಡಲ ಅಬ್ಬರ ಜೋರಾಗಿದೆ. ಕಡಲತಡಿಯ ನಿವಾಸಿಗಳು ಅಲೆಗಳ ಅಬ್ಬರಕ್ಕೆ ಭಯಭೀತರಾಗಿದ್ದಾರೆ. ಜತೆಗೆ ಕಡಲ್ಕೊರೆತದಿಂದ ತೀರಪ್ರದೇಶದ ಮನೆ ಕುಸಿಯುವ ಅಪಾಯ ಎದುರಾಗಿದೆ. ಅಂಕೋಲಾ ತಾಲೂಕಿನ ಹಾರವಾಡ ಗ್ರಾಮದಲ್ಲಿ ಭಾರೀ ಪ್ರಮಾಣದಲ್ಲಿ ಕಡಲ್ಕೊರೆತ ಕಂಡು ಬಂದಿದ್ದು, 50ಕ್ಕೂ ಅಧಿಕ ಮನೆಗಳು ಸಮುದ್ರ ಪಾಲಾಗುವ ಭೀತಿ ಎದುರಾಗಿದೆ. ಸದ್ಯ ತೀರ ಪ್ರದೇಶದ ನಿವಾಸಿಗಳು ಸಂಬಂಧಿಕರ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ. ತಡೆಗೋಡೆ ಕೊಚ್ಚಿಹೋದ ಪರಿಣಾಮ ಕಳೆದ ಮೂರ್ನಾಲ್ಕು ದಿನಗಳಿಂದ ಕಡಲ್ಕೊರೆತ ತೀವ್ರವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ 3 ದಿನ ನಿರಂತರವಾಗಿ ಸುರಿದ ಮಳೆಗೆ ಇಂದು ಕೊಂಚ ಬಿಡುವು ಸಿಕ್ಕಿದೆ. ಹೀಗಾಗಿ ವೀಕೆಂಡ್ ಎಂಜಾಯ್ ಮಾಡಲು ಪ್ರವಾಸಿಗರರ ದಂಡು ಬೀಚ್ ಕಡೆಗೆ ಮುಖ ಮಾಡಿದೆ. ಆದರೆ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿರುವುದರಿಂದ ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ಉಡುಪಿ ಜಿಲ್ಲೆಯ ಕಾಪು ಬೀಚ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಸಮುದ್ರ ದಡದಲ್ಲಿಯೇ ಸೆಲ್ಫಿ ತೆಗೆದು ಸಮಾಧಾನಪಟ್ಟುಕೊಳ್ಳುತ್ತಿದ್ದಾರೆ. ಪ್ರವಾಸಿಗರಿಗೆ ಸಮುದ್ರಕ್ಕೆ ಇಳಿಯದಂತೆ ಲೈಫ್ ಗಾರ್ಡ್ಸ್ ಎಚ್ಚರಿಕೆ ನೀಡುತ್ತಿದ್ದು, ಬೀಚ್ ಉದ್ದಕ್ಕೂ ಕಣ್ಗಾವಲು ಇಟ್ಟಿದ್ದಾರೆ. ಹೀಗಾಗಿ ಪ್ರವಾಸಿಗರು ದೂರದಲ್ಲಿಯೇ ನಿಂತು ಕಡಲಬ್ಬರವನ್ನು ವೀಕ್ಷಿಸುತ್ತಿದ್ದಾರೆ. ಮಳೆ ನಿಂತ ಹಿನ್ನೆಲೆಯಲ್ಲಿ ಬೀಚ್‌ನಲ್ಲಿ ಸಮಯ ಕಳೆಯುವ ಉದ್ದೇಶದಿಂದ ಆಗಮಿಸಿದ ಪ್ರವಾಸಿಗರು ನಿರಾಸೆಯಿಂದ ವಾಪಸಾಗುತ್ತಿದ್ದಾರೆ.