ನವದೆಹಲಿ: ಕೇಂದ್ರ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆ ಬಂದ ಮೇಲೆ ಭಾರತದಲ್ಲಿ ಹೆಲ್ತ್ ಇನ್ಷೂರೆನ್ಸ್ ವ್ಯಾಪ್ತಿ ಹೆಚ್ಚಿದೆ. ಈ ಸ್ಕೀಮ್ಗೆ ಇನ್ನಷ್ಟು ಒತ್ತು ಕೊಡಲು ಸರ್ಕಾರ ಯೋಜಿಸಿದೆ. ಈ ನಿಟ್ಟಿನಲ್ಲಿ ಜುಲೈ 23ರಂದು ಮಂಡನೆಯಾಗುವ ಬಜೆಟ್ನಲ್ಲಿ ಕೆಲ ಪೂರಕ ಕ್ರಮಗಳನ್ನು ಪ್ರಕಟಿಸುವ ಸಾಧ್ಯತೆ ಇದೆ ಎನ್ನುವ ಮಾತು ಕೇಳಿಬರುತ್ತಿದೆ. ಪಿಟಿಐ ಸುದ್ದಿ ಸಂಸ್ಥೆ ವರದಿ ಪ್ರಕಾರ ಆಯುಷ್ಮಾನ್ ಇನ್ಷೂರೆನ್ಸ್ ಸ್ಕೀಮ್ನ ಮೊತ್ತವನ್ನು ಹೆಚ್ಚಿಸುವುದಲ್ಲದೆ, ಫಲಾನುಭವಿಗಳ ಸಂಖ್ಯೆಯನ್ನು ಈಗಿರುವುದಕ್ಕಿಂತ ಎರಡು ಪಟ್ಟು ಹೆಚ್ಚಿಸುವುದು ಸರ್ಕಾರದ ಗುರಿಯಾಗಿದೆ.
ಮುಂದಿನ ಮೂರು ವರ್ಷದಲ್ಲಿ 70 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ವ್ಯಕ್ತಿಯನ್ನೂ ಆಯುಷ್ಮಾನ್ ಭಾರತ್ ಹೆಲ್ತ್ ಇನ್ಷೂರೆನ್ಸ್ ಸ್ಕೀಮ್ಗೆ ತರಲು ಸರ್ಕಾರ ಚಿಂತನೆ ನಡೆಸಿದೆ. ಇನ್ಷೂರೆನ್ಸ್ ಕವರೇಜ್ ಅನ್ನು ವರ್ಷಕ್ಕೆ 10 ಲಕ್ಷ ರೂಗೆ ಹೆಚ್ಚಿಸುವ ಸಾಧ್ಯತೆ ಇದೆ. ಈ ಬಗ್ಗೆ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (ಎನ್ಎಚ್ಎ) ಮಾಡಿರುವ ಅಂದಾಜು ಪ್ರಕಾರ, ಇನ್ಷೂರೆನ್ಸ್ ಮೊತ್ತದ ಹೆಚ್ಚಳ ಮತ್ತು ಫಲಾನುಭವಿಗಳ ಸಂಖ್ಯೆ ಹೆಚ್ಚಳದಿಂದ ಸರ್ಕಾರಕ್ಕೆ ವರ್ಷಕ್ಕೆ ಸುಮಾರು 12,076 ಕೋಟಿ ರೂನಷ್ಟು ಹೆಚ್ಚುವರಿ ವೆಚ್ಚ ಆಗಬಹುದು.
ಸದ್ಯ ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ್ ಆರೋಗ್ಯ ಯೋಜನೆಯಲ್ಲಿ ಫಲಾನುಭವಿಯ ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷ ರೂ ಇನ್ಷೂರೆನ್ಸ್ ಕವರೇಜ್ ಸಿಗುತ್ತದೆ. ಒಟ್ಟು 12 ಕೋಟಿ ಕುಟುಂಬಕ್ಕೆ ಹೆಲ್ತ್ ಕವರ್ ಇದೆ. ಇದಕ್ಕೆ ವರ್ಷಕ್ಕೆ ಸರ್ಕಾರ 7,200 ಕೋಟಿ ರೂ ಹಣವನ್ನು 2024ರ ಮಧ್ಯಂತರ ಬಜೆಟ್ನಲ್ಲಿ ಎತ್ತಿ ಇಡಲಾಗಿತ್ತು. ಈಗ 70 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರನ್ನೂ ಈ ಸ್ಕೀಮ್ ವ್ಯಾಪ್ತಿಗೆ ತಂದಲ್ಲಿ 4-5 ಕೋಟಿಯಷ್ಟು ಸಂಖ್ಯೆ ಹೆಚ್ಚಳ ಆಗುತ್ತದೆ. ಫಲಾನುಭವಿಗಳ ಸಂಖ್ಯೆ 16-17 ಕೋಟಿಯಷ್ಟಾಗಬಹುದು.
ನೀತಿ ಆಯೋಗ್ ವರದಿ ಪ್ರಕಾರ ಭಾರತದಲ್ಲಿ ಕೆಳಗಿನ ಸ್ತರದ ಶೇ. 50ರಷ್ಟು ಜನರಿಗೆ ಆಯುಷ್ಮಾನ್ ಭಾರತ್ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಯೋಜನೆಗಳ ಮೂಲಕ ಇನ್ಷೂರೆನ್ಸ್ ಕವರೇಜ್ ಇದೆ. ಶೇ. 20ರಷ್ಟು ಜನರಿಗೆ ಖಾಸಗಿ ಹಾಗೂ ಇತರ ಹೆಲ್ತ್ ಇನ್ಷೂರೆನ್ಸ್ ಬಲ ಇದೆ. ಇನ್ನುಳಿದ ಶೇ. 30ರಷ್ಟು ಜನರಿಗೆ ಯಾವ ಇನ್ಷೂರೆನ್ಸ್ ಕವರೇಜ್ ಇಲ್ಲ ಎನ್ನಲಾಗುತ್ತಿದೆ. ಇದು ಕೇವಲ ಅಂದಾಜು ಮಾತ್ರ. ಆರೋಗ್ಯ ವಿಮೆಯಿಂದ ವಂಚಿತರಾಗಿರುವ ಈ ಜನರಿಗೆ ಆಯುಷ್ಮಾನ್ ಭಾರತ್ ಸ್ಕೀಮ್ ಅನ್ನು ತಲುಪಿಸುವುದು ಸರ್ಕಾರದ ಗುರಿಯಾಗಿದೆ.