ಹಾವೇರಿ : ಹಿಂದೂ ಮಹಿಳೆಯರ ರಕ್ಷಣೆಗಾಗಿ ಹುಬ್ಬಳ್ಳಿ ಸೇರಿದಂತೆ ರಾಜ್ಯದ ನಾಲ್ಕು ಸ್ಥಳಗಳಲ್ಲಿ ಶ್ರೀರಾಮ ಸೇನೆ ಆರಂಭಿಸಿದ ಹೆಲ್ಪ್‌ಲೈನ್ (ಸಹಾಯ ವಾಣಿ) ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ನೇಹಾ ಹಿರೇಮಠ ಪ್ರಕರಣದ ಬಳಿಕ ಒಂದೇ ವಾರದಲ್ಲಿ ಹುಬ್ಬಳ್ಳಿಯಲ್ಲಿ ಐದು ಪ್ರಕರಣಗಳು ನಡೆದಿವೆ. ತಕ್ಷಣ ಇದನ್ನು ಶ್ರೀರಾಮ ಸೇನೆ ಗಂಭೀರವಾಗಿ ಪರಿಗಣಿಸಿ ಹೆಲ್ಪ್ ಲೈನ್ ಆರಂಭಿಸಿದ ಮೇಲೆ 300 ಕರೆಗಳು ಬಂದಿವೆ. ಕೊಲೆ ಬೆದರಿಕೆ, ಹೆಲ್ಪ್‌ಲೈನ್ ಬಂದ್ ಮಾಡುವಂತೆ ಒತ್ತಡ, ಇದರ ಜತೆಗೆ ಲವ್ ಜಿಹಾದ್‌ನಲ್ಲಿ ಸಿಲುಕಿಕೊಂಡಿರುವ 70 ಸಂತ್ರಸ್ತ ಕುಟುಂಬಗಳ ಕರೆಗಳು ಬಂದಿವೆ. ಕರೆ ಮಾಡಿದವರು ತಮಗಾದ ಸಂಕಷ್ಟ, ಪೊಲೀಸರ ವೈಫಲ್ಯದ ಬಗ್ಗೆ ವಿವರಿಸಿದ್ದಾರೆ’ ಎಂದರು.
ಹೆಲ್ಪ್ ಲೈನ್‌ನಲ್ಲಿ ಐದು ಜನರ ತಂಡವಿದೆ. ತಲಾ ಒಬ್ಬ ವೈದ್ಯ, ನ್ಯಾಯವಾದಿ, ಮಹಿಳೆ ಸೇರಿದಂತೆ ಇನ್ನಿಬ್ಬರು ಕೌನ್ಸೆಲಿಂಗ್ ಮಾಡುತ್ತಾರೆ. ಸಂಕಷ್ಟದಲ್ಲಿರುವ ಮಹಿಳೆಯರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಶ್ರೀರಾಮ ಸೇನೆ ಕಾಯಕರ್ತರು ಮಾಡುತ್ತಿದ್ದಾರೆ. ಲವ್ ಜಿಹಾದ್‌ನಲ್ಲಿ ಸಿಲುಕಿದ ಅನೇಕ ಹಿಂದೂ ಮಹಿಳೆಯರನ್ನು ಶ್ರೀರಾಮ ಸೇನೆ ರಕ್ಷಿಸಿದೆ. ಧಾರವಾಡ ಜಿಲ್ಲೆಯ 50 ವಿದ್ಯಾರ್ಥಿನಿಯರಿಗೆ ತ್ರಿಶೂಲ ದೀಕ್ಷೆ ನೀಡಿದ್ದೇವೆ’ ಎಂದು ಮುತಾಲಿಕ್ ತಿಳಿಸಿದರು.
ರಾಜ್ಯದ ಹಲವೆಡೆಯಿಂದಲೂ ತ್ರಿಶೂಲ ನೀಡುವಂತೆ ಒತ್ತಡಗಳು ಬರುತ್ತಿವೆ. ಇನ್ನೂ ನೂರು ತ್ರಿಶೂಲ ದೀಕ್ಷೆ ಕಾರ್ಯಕ್ರಮ ಮಾಡುವ ಯೋಚನೆ ಇದೆ. ಪ್ರೀತಿ ನೆಪದಲ್ಲಿ ಕೊಲ್ಲುವ ಸಂಸ್ಕೃತಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಮುಂದಾಗಬೇಕು. ಹಿಂದೂ ಮಹಿಳೆಯರಿಗೆ ತೊಂದರೆ ಕೊಡುವವರನ್ನು ಶ್ರೀರಾಮ ಸೇನೆ ಕಾರ್ಯಕರ್ತರು ಸುಮ್ಮನೆ ಬಿಡಲ್ಲ’ ಎಂದು ಎಚ್ಚರಿಸಿದರು.
ಬಂಕಾಪುರದಲ್ಲಿ ಹಾಯ್ದು ಹೋದ ಕಾರವಾರ – ಇಳಕಲ್ಲ ರಸ್ತೆ ಅಗಲೀಕರಣದ ಅಭಿವೃದ್ಧಿಗೆ ಅಡ್ಡಿಯಾದ ಪ್ರಾರ್ಥನಾ ಮಂದಿರ ತೆರವಿಗೆ ಹೈಕೋರ್ಟ್ ಆದೇಶವಿದ್ದರೂ ಸ್ಥಳೀಯ ಅಧಿಕಾರಿ, ರಾಜಕಾರಣಿಗಳು ತೆರವುಗೊಳಿಸುತ್ತಿಲ್ಲ. ಇದರ ವಿರುದ್ಧ ಕಾರ್ಯಕರ್ತರ ಸಭೆ ಮಾಡಿ ಇದೇ ತಿಂಗಳಿನಲ್ಲಿ ‘ಚಲೋ ಬಂಕಾಪುರ’ ಕಾರ್ಯಕ್ರಮ ಹಮ್ಮಿಕೊಳ್ಳುವುದು’ ಎಂದು ಮುತಾಲಿಕ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷರು ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.