ಮಂಡ್ಯ: ಒಂದೇ ಶಾಲೆಯ ಹತ್ತಾರು ವಿದ್ಯಾರ್ಥಿನಿಯರ ಮೇಲೆ ಕಾಮುಕನೊಬ್ಬ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಶಾಲೆಯ ಹಳೇ ವಿದ್ಯಾರ್ಥಿಯಿಂದಲೇ ಈ ಹೀನ ಕೃತ್ಯ ನಡೆದಿದ್ದು, ಈ ಸಂಬಂಧ ಪೋಕ್ಸೊ ಪ್ರಕರಣ ದಾಖಲಿಸಿರುವ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.
ಯೋಗಿ ಬಂಧಿತ ಆರೋಪಿಯಾಗಿದ್ದಾನೆ. ಚಿತ್ರಕಲೆ, ಕ್ರೀಡೆ ಹೇಳಿಕೊಡುವ ನೆಪದಲ್ಲಿ ಸರ್ಕಾರಿ ಪ್ರೌಢ ಶಾಲೆಯೊಂದರ ವಿದ್ಯಾರ್ಥಿನಿಯರ ಮೇಲೆ ಆರೋಪಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಣ್ಣನಂತೆ ನಂಬಿಸಿ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯರ ನಗ್ನ ಚಿತ್ರ ತೆಗೆದು ಬ್ಲ್ಯಾಕ್ ಮೇಲ್ ಮಾಡಿದ್ದಾನೆ ಎನ್ನಲಾಗಿದೆ.
ಈ ಬಗ್ಗೆ ನಾಲ್ವರು ಸಂತ್ರಸ್ತ ಬಾಲಕಿಯರು ನೀಡಿದ ದೂರಿನ ಮೇರೆಗೆ ಯೋಗಿ ಎಂಬಾತನ ವಿರುದ್ಧ ಮೇಲುಕೋಟೆ ಪೊಲೀಸರು ಪೋಕ್ಸೊ ಕೇಸ್ ಜತೆಗೆ ಐಪಿಸಿ ಸೆಕ್ಷನ್ 354 A, 354 D, 509 ಅಡಿ ಕೇಸ್ ದಾಖಲಿಸಿಕೊಂಡು ಬಂಧಿಸಿದ್ದಾರೆ.
ಕ್ರೀಡೆಯಲ್ಲಿ ಆಸಕ್ತಿ ಇದ್ದ ಬಾಲಕಿಯರನ್ನು ಟಾರ್ಗೆಟ್ ಮಾಡುತ್ತಿದ್ದ ಆರೋಪಿ, ಡ್ರಾಪ್ ಕೊಡುವ, ಕ್ರೀಡೆ ಹೇಳಿಕೊಡುವ ನೆಪದಲ್ಲಿ ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಇನ್ನು ವಿದ್ಯಾರ್ಥಿನಿಯರು ಬಟ್ಟೆ ಬದಲಿಸುವಾಗ ಪೋಟೊ ತೆಗೆದು ಅವುಗಳನ್ನ ಹೆತ್ತವರಿಗೆ ಕಳುಹಿಸವುದುದಾಗಿ ಬೆದರಿಸಿ ದೌರ್ಜನ್ಯ ನಡೆಸಿದ್ದ ಎನ್ನಲಾಗಿದೆ. ಹೀಗಾಗಿ ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾ ಘಟಕದ ಅಧಿಕಾರಿಗಳ ಮೂಲಕ ವಿದ್ಯಾರ್ಥಿನಿಯರು ನೀಡಿದ ದೂರಿನನ್ವಯ ಆರೋಪಿ ವಿರುದ್ಧ ಎಫ್ಐಆರ್ ದಾಖಲಾಗಿದೆ.