ಬೆಂಗಳೂರು : ದಲಿತ ಸಮುದಾಯದ ಅಭಿವೃದ್ದಿಗೆ ಅಂತ ಮೀಸಲಿಟ್ಟ ಹಣವನ್ನು ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿತ್ತು. ಇದೀಗ ಇದೇ ವಿಚಾರ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮವಾಗಿ ವರ್ಗಾವಣೆ ಪ್ರಕರಣ ಕೂಡ ಚರ್ಚೆ ಆಗುತ್ತಿದೆ. ಹೀಗಾಗಿ ನಗರದಲ್ಲಿ ಜುಲೈ 15ರಂದು ಬಿಜೆಪಿಯಿಂದ ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನಾ ಸಭೆ ನಡೆಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ವಿಪಕ್ಷ ಬಿಜೆಪಿ ನಿರ್ಧಾರ ಮಾಡಿದೆ. ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ವಿಚಾರವಾಗಿ ಪದಾಧಿಕಾರಿಗಳ ಸಭೆ ಬಳಿಕೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪದಾಧಿಕಾರಿಗಳ ಸಭೆಯಲ್ಲಿ ವಾಲ್ಮೀಕಿ ಹಗರಣ ಬಗ್ಗೆ ಚರ್ಚೆಯಾಗಿದೆ. ದಲಿತ ವಿರೋಧಿ ಸರ್ಕಾರದ ವಿರುದ್ಧ ಪ್ರತಿಭಟನೆಗೆ ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.
ಜುಲೈ 15ರಂದು ವಿಧಾನಸೌಧ ಮುತ್ತಿಗೆಗೆ ಕರೆ ನೀಡಲಾಗಿದೆ. ವಾಲ್ಮೀಕಿ ಸಮುದಾಯ ದೊಡ್ಡ ಸಂಖ್ಯೆಯಲ್ಲಿ ಬರಲಿದೆ. ದಲಿತರ ಹಣ ಲೂಟಿ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಮತ್ತು ದಲಿತರಿಗೆ ಕ್ಷಮೆಯಾಚಿಸಬೇಕು ಎಂದು ಹೇಳಿದ್ದಾರೆ.
ಕ್ಯಾಪ್ಟನ್ ಆಗಿ ಸಿದ್ದರಾಮಯ್ಯ ಇಡೀ ಸಚಿವ ಸಂಪುಟ ದಲಿತರ ಹಣ ನುಂಗಲು ತಯಾರಿ ಮಾಡಿಕೊಂಡಿರುವುದು ವಿಷಾದನೀಯ. ಸರ್ಕಾರದ ಯೋಜನೆ ಮೂಲಕ ದಲಿತ ಸಮುದಾಯದ ಏಳಿಗೆ ಮಾಡಬೇಕಿತ್ತು. ಆದರೆ ದಲಿತರಿಗೆ ಮೀಸಲಿಟ್ಟ ಹಣವನ್ನು ಲೂಟಿ ಮಾಡಿದೆ ಅಂತ ಬಿಜೆಪಿ ಒತ್ತಿ ಹೇಳಲಿದೆ. ವಾಲ್ಮೀಕಿ ಹಗರಣ, ಕಾರ್ಮಿಕರ ಇಲಾಖೆ ಹಗರಣ, ಎಸ್ಸಿಪಿ-ಟಿಎಸ್ಪಿ ಹಗರಣಗಳ ಸರಮಾಲೆಯ ಸರ್ಕಾರ ಇದಾಗಿದೆ ಎಂದು ವಾಗ್ದಾಳಿ ಮಾಡಿದ್ದಾರೆ.
ರಾಜ್ಯ ಸರ್ಕಾರ ಎಸ್ಸಿಪಿ, ಟಿಎಸ್ಪಿ ಯೋಜನೆ ಹಣವನ್ನು ಗ್ಯಾರಂಟಿಗಳಿಗೆ ಡೈವರ್ಟ್ ಮಾಡಿದ್ದು ರಾಷ್ಟ್ರೀಯ ಚರ್ಚೆಗೆ ಗ್ರಾಸವಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಎಸ್ಸಿಪಿ, ಟಿಎಸ್ಪಿ ಕಾಯ್ದೆಯಡಿ ಮೀಸಲಿಟ್ಟ ಹಣ ಬಳಕೆ ವಿಚಾರವಾಗಿ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ ಮಧ್ಯಪ್ರವೇಶ ಮಾಡಿದೆ. ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ವಿವರಣೆ ಕೇಳಿದೆ. ಇನ್ನು 7 ದಿನಗಳ ಒಳಗಾಗಿ ಸಂಪೂರ್ಣ ವರದಿ ನೀಡುವಂತೆ ಸೂಚಿಸಲಾಗಿದೆ.