ಬೆಂಗಳೂರು: ಟೀಮ್ ಇಂಡಿಯಾ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಸಾರ್ವಕಾಲಿಕ ಶ್ರೇಷ್ಠ ಪ್ಲೇಯಿಂಗ್ 11 ರಚನೆ ಮಾಡಿದ್ದಾರೆ. ಯುವರಾಜ್ ಸಿಂಗ್ ಸಾರಥ್ಯದಲ್ಲಿ ಇಂಡಿಯಾ ಲೆಜೆಂಡ್ಸ್ ತಂಡ ಇತ್ತೀಚೆಗೆ ಅಂತ್ಯಗೊಂಡ ಲೆಜೆಂಡ್ಸ್ ವರ್ಡ್ ಚಾಂಪಿಯನ್‌ಷಿಪ್ ಟೂರ್ನಿಯಲ್ಲಿ ಟ್ರೋಫಿ ಗೆದ್ದಿದೆ. ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿರುವ ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ಜೂನ್ 13ರಂದು (ಶನಿವಾರ) ನಡೆದ ಫೈನಲ್‌ನಲ್ಲಿ ಇಂಡಿಯಾ ಲೆಜೆಂಡ್ಸ್ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಲೆಜೆಂಡ್ಸ್ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿ ಟ್ರೋಫಿ ಎತ್ತಿ ಹಿಡಿಯಿತು.
ಟ್ರೋಫಿ ಗೆಲುವಿನ ಬೆನ್ನಲ್ಲೇ ಮಾತಿಗಿಳಿದ ಯುವರಾಜ್ ಸಿಂಗ್ ತಮ್ಮ ಆಯ್ಕೆಯ ಸಾರ್ವಕಾಲಿಕ ಶ್ರೇಷ್ಠ 11ರ ಬಳಗವನ್ನು ಹೆಸರಿಸಿದ್ದಾರೆ. ಅಚ್ಚರಿಯ ಸಂಗತಿ ಎಂದರೆ ಭಾರತಕ್ಕೆ ಟಿ20 ಮತ್ತು ಒಡಿಐ ವಿಶ್ವಕಪ್ ಗೆದ್ದು ಕೊಟ್ಟ ನಾಯಕ ಎಂಎಸ್ ಧೋನಿ ಅವರನ್ನು ತಮ್ಮ ತಂಡದಿಂದ ಯುವಿ ಕೈಬಿಟ್ಟಿದ್ದಾರೆ. ಇದು ಕ್ರಿಕೆಟ್ ವಲಯದಲ್ಲಿ ದೊಡ್ಡ ಅಚ್ಚರಿಯನ್ನೇ ತಂದೊಡ್ಡಿದೆ.
2007ರ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಮತ್ತು 2011 ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಎರಡೂ ಟೂರ್ನಿಗಳಲ್ಲಿ ಭಾರತ ತಂಡ ಟ್ರೋಫಿ ಗೆಲ್ಲುವಲ್ಲಿ ಬಹುಮುಖ್ಯ ಪಾತ್ರವಹಿಸಿದ ಯುವರಾಜ್ ಸಿಂಗ್ ಮತ್ತು ಎಂಎಸ್ ಧೋನಿ ಅನುವಣ ಮುಸುಕಿನ ಗುದ್ದಾಟ ಆಗಾಗ ಬಹಿರಂಗವಾಗುತ್ತಲೇ ಇದೆ. ಇದೀಗ ಯುವಿ ತಮ್ಮ ಬೆಸ್ಟ್ ತಂಡದಲ್ಲಿ ಧೋನಿಗೆ ಸ್ಥಾನ ನೀಡದೇ ಇರುವುದು ನೆಟ್ ಲೋಕದಲ್ಲಿ ದೊಡ್ಡ ಚರ್ಚೆಗೆ ಕಾರನವಾಗಿದೆ.
ಇನ್ನು ಯುವಿ ಕಟ್ಟಿರುವ ಬೆಸ್ಟ್ ತಂಡದಲ್ಲಿ ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಜೊತೆಗೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇದ್ದಾರೆ. ಆಸ್ಟ್ರೇಲಿಯಾದ ದಿಗ್ಗಜರಾದ ರಿಕಿ ಪಾಂಟಿಂಗ್, ಶೇನ್ ವಾರ್ನ್, ಆಡಮ್ ಗಿಲ್‌ಕ್ರಿಸ್ಟ್ ಮತ್ತು ಗ್ಲೆನ್ ಮೆಗ್ರಾತ್‌ಗೆ ಸ್ಥಾನ ನೀಡಿ, ತಂಡದ ಆಲ್‌ರೌಂಡರ್ ಆಗಿ ಇಂಗ್ಲೆಂಡ್ ಲೆಜೆಂಡ್ ಆಂಡ್ರ್ಯೂ ಫ್ಲಿಂಟಾಫ್ ಅವರನ್ನು ಆಯ್ಕೆ ಮಾಡಿದ್ದಾರೆ. ತಂಡದಲ್ಲಿ ತಮ್ಮನ್ನು ತಾವೇ ಹೊರಗಿಟ್ಟಿರುವ ಯುವಿ, ಶ್ರೀಲಂಕಾದ ದಿಗ್ಗಜ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅವರನ್ನು ತೆಗೆದುಕೊಂಡಿದ್ದಾರೆ. ಏಕೈಕ ಎಡಗೈ ವೇಗಿಯಾಗಿ ಪಾಕಿಸ್ತಾನದ ಮಾಜಿ ನಾಯಕ ವಸೀಮ್ ಅಕ್ರಮ್ ಅವರನ್ನು ಆಯ್ಕೆ ಮಾಡಿದ್ದಾರೆ.
ಯುವರಾಜ್ ಸಿಂಗ್ ಆಯ್ಕೆಯ ಸಾರ್ವಕಾಲಿಕ ಶ್ರೇಷ್ಠ ತಂಡ
01. ಸಚಿನ್ ತೆಂಡೂಲ್ಕರ್ (ಓಪನರ್)
02. ರೋಹಿತ್ ಶರ್ಮಾ (ಓಪನರ್)
03. ರಿಕಿ ಪಾಂಟಿಂಗ್ (ಬ್ಯಾಟರ್)
04. ವಿರಾಟ್ ಕೊಹ್ಲಿ (ಬ್ಯಾಟರ್)
05. ಎಬಿ ಡಿ ವಿಲಿಯರ್ಸ್ (ಬ್ಯಾಟರ್)
06. ಆಡಮ್ ಗಿಲ್‌ಕ್ರಿಸ್ಟ್ (ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್)
07. ಆಂಡ್ರ್ಯೂ ಫ್ಲಿಂಟಾಫ್ (ಆಲ್‌ರೌಂಡರ್)
08. ಶೇನ್ ವಾರ್ನ್ (ಲೆಗ್ ಸ್ಪಿನ್ನರ್)
09. ಮುತ್ತಯ್ಯ ಮರಳೀಧರನ್ (ಆಫ್ ಸ್ಪಿನ್ನರ್)
10. ಗ್ಲೆನ್ ಮೆಗ್ರಾತ್ (ಫಾಸ್ಟ್ ಬೌಲರ್)
11. ವಸೀಮ್ ಅಕ್ರಮ್ (ಎಡಗೈ ವೇಗಿ)