ಬೆಂಗಳೂರು: ಯುವಕ-ಯುವತಿ ಪರಸ್ಪರ ಪ್ರೀತಿಸುತ್ತಿದ್ದು, ಕಾಲಕ್ರಮೇಣ ಇಬ್ಬರ ನಡುವಿನ ಪ್ರೀತಿ ಕಡಿಮೆಯಾಗಿದೆ ಎಂದ ಮಾತ್ರಕ್ಕೆ ಅವರ ನಡುವಿನ ಒಮ್ಮತದ ದೈಹಿಕ ಸಂಬಂಧವನ್ನು ಅತ್ಯಾಚಾರ ಎಂದು ಪರಿಗಣಿಸಲಾಗದು ಎಂದು ಕರ್ನಾಟಕ ಹೈಕೋರ್ಟ್ ಪುನರುಚ್ಚರಿಸಿದೆ.
ಅಲ್ಲದೆ, ಪ್ರೀತಿಸಿ ದೈಹಿಕ ಸಂಬಂಧ ಬೆಳೆಸಿದ ನಂತರ ಮದುವೆಯಾಗದ ಹಿನ್ನೆಲೆಯಲ್ಲಿ ಯುವತಿಯೊಬ್ಬಳು ಯುವಕನ ವಿರುದ್ಧ ದಾಖಲಿಸಿದ್ದ ಅತ್ಯಾಚಾರ ಪ್ರಕರಣವನ್ನು ನ್ಯಾಯಾಲಯ ರದ್ದುಗೊಳಿಸಿದೆ.
ನಗರದ ಜಗ ಜೀವನ ರಾಮ್‌ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ರದ್ದು ಕೋರಿ ವ್ಯಕ್ತಿಯೊಬ್ಬ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಪುರಸ್ಕರಿಸಿ ಈ ಆದೇಶ ನೀಡಿದೆ.
ವಾದ- ಪ್ರತಿವಾದ ಆಲಿಸಿ, ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ ”ಅರ್ಜಿದಾರ ಹಾಗೂ ದೂರುದಾರೆ ಆರು ವರ್ಷಗಳ ಕಾಲ ಪರಸ್ಪರ ಪ್ರೀತಿಸುತ್ತಿದ್ದರು. ಈ ನಡುವೆ ಇಬ್ಬರೂ ಒಪ್ಪಿಗೆಯಿಂದ ದೈಹಿಕ ಸಂಬಂಧ ಹೊಂದಿದ್ದಾರೆ. ಕಾಲಕ್ರಮೇಣ ಇಬ್ಬರ ನಡುವಿನ ಪ್ರೀತಿ ತಗ್ಗಿದೆ ಎಂದಾಕ್ಷಣ ಅವರ ಒಪ್ಪಿತ ದೈಹಿಕ ಸಂಬಂಧವನ್ನು ಅತ್ಯಾಚಾರವೆಂದು ಪರಿಗಣಿಸಲಾಗದು,” ಎಂದು ಹೇಳಿದೆ.
ಅರ್ಜಿದಾರರ ಪರ ವಕೀಲರು, ಯುವಕ-ಯುವತಿ ಪರಸ್ಪರ ಪ್ರೀತಿಸುವುದರ ಜತೆಗೆ, ಆರು ವರ್ಷಗಳ ಕಾಲ ಜತೆ ಇದ್ದರು. ಈ ನಡುವೆ, ಒಮ್ಮತದ ದೈಹಿಕ ಸಂಪರ್ಕ ಹೊಂದಿದ್ದಾರೆ. ಈ ಪೂರ್ಣ ಪ್ರಕ್ರಿಯೆಯಲ್ಲಿಅರ್ಜಿದಾರರು ಎಲ್ಲಿಯೂ ದೂರುದಾರೆಗೆ ಮದುವೆಯಾಗುವುದಾಗಿ ಭರವಸೆ ನೀಡಿಲ್ಲ,” ಎಂದು ನ್ಯಾಯಪೀಠದ ಗಮನ ಸೆಳೆದರು.