ಸ್ಥಳೀಯ ಕಾರ್ಯಕ್ರಮವೊಂದಕ್ಕೆ ಶಾಮಿಯಾನ ಹಾಕುವ ವೇಳೆ ಕಬ್ಬಿಣದ ಟ್ರೆಸ್ ವಿದ್ಯುತ್ ತಂತಿಗೆ ಸ್ಪರ್ಶಿಸಿ ಕಾರ್ಮಿಕ ಮೃತಪಟ್ಟ ಘಟನೆ ಕಡೇಶಿವಾಲಯದ ಕಾಡಬೆಟ್ಟುವಿನಲ್ಲಿ ನಡೆದಿದೆ.
ಕಲ್ಲಡ್ಕದ ಶಾಮಿಯಾನ ಸಂಸ್ಥೆಯ 5 ನೌಕರರು ಕಾರ್ಯಕ್ರಮವೊಂದರ ಸಲುವಾಗಿ ಚಪ್ಪರ ಹಾಕಲು ತೆರಳಿದ್ದರು. ಚಪ್ಪರ ಹಾಕುವ ವೇಳೆ ಉದ್ದದ ಕಬ್ಬಿಣದ ಟ್ರೆಸ್ ಪಕ್ಕದಲ್ಲಿ ಹಾದು ಹೋದ ಹೈ ಟೆನ್ಷನ್ ವಿದ್ಯುತ್ ತಂತಿಗೆ ಸ್ಪರ್ಶಿಸಿದೆ. ಈ ವೇಳೆ ತೀವ್ರ ಶಾಕ್ ಗೆ ಒಳಗಾದ ಕಾರ್ಮಿಕ ಕುಂದನ್(18) ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ.
ಇತರರಿಗೆ ಗಾಯವಾಗಿದ್ದು, ಮಂಗಳೂರಿನ ಎ.ಜೆ ಆಸ್ಪತ್ರೆಗೆ ದಾಖಲಿಸಲಾಗಿದೆ.ಮೃತ ಕುಂದನ್ ಬಿಹಾರ ಮೂಲದವನಾಗಿದ್ದಾನೆ. ಗಾಯಗೊಂಡವರ ಪೈಕಿ ಬಬ್ಲೂ ಮತ್ತು ಪ್ರದೀಪ್ ಜಾರ್ಖಂಡ್ ಮೂಲದವರಾಗಿದ್ದರೆ, ಪ್ರದೀಪ್ ಪಶ್ಚಿಮ ಬಂಗಾಳದವರಾಗಿದ್ದಾರೆ.
ಸ್ಥಳೀಯ ಕಾರ್ಮಿಕ ಪ್ರಸನ್ನ ಅಪಾಯದಿಂದ ಪಾರಾಗಿದ್ದಾರೆ. ಉಳಿದಂತೆ ಮೂವರಿಗೆ ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.