ಚುನಾವಣಾ ತಂತ್ರಗಾರಿಕೆ ನಿಪುಣ ಪ್ರಶಾಂತ್ ಕಿಶೋರ್ ಹೊಸ ರಾಜಕೀಯ ಪಕ್ಷ ಸ್ಥಾಪಿಸಲು ಮುಂದಾಗಿದ್ದು, ಅಕ್ಟೋಬರ್ 2ರಂದು ಅಧಿಕೃತವಾಗಿ ತಮ್ಮ ನೂತನ ಪಕ್ಷದ ಘೋಷಣೆ ಮಾಡಲಿದ್ದಾರೆ.
ಮುಂದಿನ ವರ್ಷ ಬಿಹಾರ ವಿಧಾನಸಭೆ ಚುನಾವಣೆ ನಡೆಯಲಿದ್ದು, ತಮ್ಮ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಪ್ರಶಾಂತ್ ಕಿಶೋರ್ ತೀರ್ಮಾ ನಿಸಿದ್ದಾರೆ.
ಬಿಜೆಪಿ, ಜೆಡಿಎಸ್, ಆರ್.ಜೆ.ಡಿ.ಗೆ ಪರ್ಯಾಯವಾಗಿ ಬಿಹಾರದಲ್ಲಿ ಹೊಸ ರಾಜಕೀಯ ಪಕ್ಷ ಸ್ಥಾಪಿಸಲು ಪ್ರಶಾಂತ್ ಕಿಶೋರ್ ಮುಂದಾಗಿದ್ದಾರೆ. ಇದಕ್ಕೆ ಪೂರಕವಾಗಿ ಬಿಹಾರದಾದ್ಯಂತ ಜನ ಸೂರಜ್ ಅಭಿಯಾನ ನಡೆಸಿದ್ದಾರೆ.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ರಾಜಕೀಯ ಜೀವನದ ಪರೀಕ್ಷೆಗೆ ಮುಂದಾಗಿರುವ ಅವರು ಎಲ್ಲಾ 243 ಕ್ಷೇತ್ರಗಳಲ್ಲಿಯೂ ಅಭ್ಯರ್ಥಿ ಗಳನ್ನು ಕಣಕ್ಕಿಳಿಸಲು ನಿರ್ಧರಿಸಿದ್ದಾರೆ.
ಈಗಾಗಲೇ ಹೊಸ ಪಕ್ಷದ ರಚನೆಗೆ ಸಂಬಂಧಿಸಿದಂತೆ ರಾಜ್ಯಮಟ್ಟದಲ್ಲಿ 8 ಸಭೆ ನಡೆಸಿದ್ದು, ರೂಪುರೇಷೆ ಸಿದ್ದಪಡಿಸಲಾಗುತ್ತಿದೆ. ಪಕ್ಷದ ನೀತಿ ನಿರೂಪಣೆ, ನಾಯಕತ್ವ ರಚನೆ, ಪಕ್ಷದ ಸಂವಿಧಾನ ರಚನೆ, ಕಾರ್ಯ ಸೂಚಿಗಳ ಕುರಿತಂತೆ ಚರ್ಚೆ ನಡೆಸಲಾಗಿದ್ದು, ರಾಜ್ಯದಲ್ಲಿ 1.5 ಲಕ್ಷ ಜನರನ್ನು ಸದಸ್ಯರಾಗಿ ನೋಂದಾಯಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಮಹಾತ್ಮ ಗಾಂಧಿ ಜಯಂತಿ ಜನ್ಮದಿನದಂದೇ ಹೊಸ ಪಕ್ಷ ಘೋಷಣೆ ಮಾಡಲಾಗುವುದು ಎಂದು ಪ್ರಶಾಂತ್ ಕಿಶೋರ್ ತಿಳಿಸಿದ್ದಾರೆ.