ವಯನಾಡ್: ದೇವರನಾಡು ಕೇರಳದಲ್ಲಿ ಭಾರೀ ಮಳೆಗೆ ಭೂಕುಸಿತಕ್ಕೆ ಸಿಲುಕಿ ಸಾವನ್ನಪ್ಪಿದವರ ಸಂಖ್ಯೆ 20ಕ್ಕೆ ಏರಿಕೆ ಆಗಿದ್ದು, ನೂರಾರು ಮಂದಿ ಅವಶೇಷದಡಿಯಲ್ಲಿ ಸಿಲುಕಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಗುಡ್ಡಗಾಡು ಪ್ರದೇಶವಾಗಿರುವ ಮೆಪ್ಪಡಿ ಪ್ರದೇಶದಲ್ಲಿ ಭೀಕರ ಭೂಕುಸಿತ ಸಂಭವಿಸಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ ಆಗುವ ಭೀತಿ ಎದುರಾಗಿದೆ.
ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ) ಫೈರ್‌ಫೋರ್ಸ್ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡಗಳನ್ನು ಪೀಡಿತ ಪ್ರದೇಶಕ್ಕೆ ಸಜ್ಜುಗೊಳಿಸಿದ್ದು, ನೂರಾರು ಮಂದಿ ಸಿಲುಕಿರುವ ಶಂಕೆ ಇದೆ. ಕಣ್ಣೂರು ರಕ್ಷಣಾ ಭದ್ರತಾ ದಳದ ಎರಡು ತಂಡಗಳೊಂದಿಗೆ ಹೆಚ್ಚುವರಿ ಎನ್‌ಡಿಆರ್‌ಎಫ್ ತಂಡ ಕೂಡ ಸಹಾಯಕ್ಕೆ ತೆರಳುತ್ತಿದೆ.
ಇನ್ನು ಎಡೆಬಿಡದೇ ಸುರಿಯುತ್ತಿರುವ ಭಾರೀ ಮಳೆ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಮಲಪ್ಪುರಂ ಜಿಲ್ಲೆಯ ನೀಲಂಬುರ್ ಪ್ರದೇಶದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಚಾಲಿಯಾರ್ ನದಿಯಲ್ಲಿ ಅನೇಕರು ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಮುಂದಕ್ಕೈ ಪ್ರದೇಶದಲ್ಲಿ ಅನೇಕ ಮನೆಗಳು. ಅಂಗಡಿಗಳು ಮತ್ತು ವಾಹನಗಳು ಜಲಾವೃತಗೊಂಡಿವೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಭೂಕುಸಿತದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ, ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಎಲ್ಲರೊಂದಿಗೆ ಭಗವಂತ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಹೇಳಿದ್ದಾರೆ. ಪರಿಸ್ಥಿತಿಗೆ ಸ್ಪಂದಿಸಿ ಕೇಂದ್ರ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ ಎಂದು ಭರವಸೆ ನೀಡಿದರು. ಏತನ್ಮಧ್ಯೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದುಃಖಿತ ಕುಟುಂಬಗಳಿಗೆ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ ಮತ್ತು “ಇನ್ನೂ ಅವಶೇಷಡಿಯಲ್ಲಿ ಸಿಲುಕಿರುವವರನ್ನು ಶೀಘ್ರದಲ್ಲೇ ಸುರಕ್ಷಿತವಾಗಿ ಕರೆತರಲಾಗುವುದು ಎಂದು ನಾನು ಭಾವಿಸುತ್ತೇನೆ. ಪರಿಹಾರ ಕಾರ್ಯಗಳಿಗೆ ಅಗತ್ಯವಿರುವ ಯಾವುದೇ ಸಹಾಯವನ್ನು ನಾವು ನೀಡುತ್ತೇವೆ ಎಂದಿದ್ದಾರೆ.
ಮುಂದಕ್ಕೈ, ಚೂರಲ್‌ಮಾಲಾ, ಅಟ್ಟಮಾಲಾ ಮತ್ತು ನೂಲ್ಪುಳಾ ಗ್ರಾಮಗಳು ಸೇರಿದಂತೆ ಜಿಲ್ಲೆಯ ಹಲವಾರು ಪ್ರದೇಶಗಳಲ್ಲಿ ಭಾರೀ ಮಳೆಗೆ ಭೂಕುಸಿತ ಸಂಭವಿಸಿದೆ. ಮುಂಕ್ಕೈ ಪ್ರದೇಶದಲ್ಲಿ ಅನೇಕ ಜನರನ್ನು ಏರ್‌ಲಿಫ್ಟ್ ಮಾಡುವ ಮೂಲಕ ಸುರಕ್ಷಿತ ಸ್ಥಳಕ್ಕೆ ಸಾಗಿಸಲಾಗಿದೆ. ಎನ್‌ಡಿಆರ್‌ಎಫ್ ತಂಡ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ. ಹಲವಾರು ಜನರನ್ನು ನಿರಾಶ್ರಿತರ ತಾಣಕ್ಕೆ ರವಾನಿಸಲಾಗಿದೆ.
ಭಾರೀ ಭೂಕುಸಿತದ ನಂತರ ಎಲ್ಲಾ ಸರ್ಕಾರಿ ಸಂಸ್ಥೆಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಸಜ್ಜುಗೊಂಡಿವೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳವಾರ ಹೇಳಿದ್ದಾರೆ. ಕಾರ್ಯಾಚರಣೆಯನ್ನು ಸಮನ್ವಯಗೊಳಿಸಲಾಗುವುದು ಮತ್ತು ರಕ್ಷಣಾ ಚಟುವಟಿಕೆಗಳ ನೇತೃತ್ವ ವಹಿಸಲು ರಾಜ್ಯದ ಸಚಿವರು ಗುಡ್ಡಗಾಡು ಜಿಲ್ಲೆಗೆ ತಲುಪಲಿದ್ದಾರೆ ಎಂದು ಮುಖ್ಯಮಂತ್ರಿ ವಿಜಯನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕಣ್ಣೂರು ರಕ್ಷಣಾ ಭದ್ರತಾ ದಳದ ಎರಡು ತಂಡಗಳು ಶೀಘ್ರದಲ್ಲೇ ವಯನಾಡಿನಲ್ಲಿ ರಕ್ಷಣಾ ಕಾರ್ಯಾಚರಣೆಗಾಗಿ ಘಟನಾ ಸ್ಥಳಕ್ಕೆ ತಲುಪಲಿವೆ. ಎರಡು ಹೆಲಿಕಾಪ್ಟರ್‌ಗಳು ವಾಯುಪಡೆಯು ಸೂಲೂರಿನಿಂದ ಹಾರಲಿದೆ ಎಂದು ಅದು ಹೇಳಿದೆ.