ವಾಹನ ಸವಾರರಿಗೆ ಥ್ರಿಲ್ ನೀಡುವ ಚಾರ್ಮಾಡಿ ಘಾಟ್ನಲ್ಲಿ ಪ್ರತಿ ವರ್ಷವೂ ಮಳೆಯಾದಾಗ ಗುಡ್ಡ ಕುಸಿತ ಆಗುತ್ತಲೇ ಇರುತ್ತದೆ. ಇದೀಗ ರಾಷ್ಟ್ರೀಯ ಹೆದ್ದಾರಿ 173 ರಲ್ಲಿರುವ ಚಾರ್ಮಾಡಿ ಘಾಟಿಯಲ್ಲಿ ಮತ್ತೆ ಗುಡ್ಡ ಕುಸಿತ ಸಂಭವಿಸಿದೆ. ಗುಡ್ಡ ಕುಸಿದು ರಸ್ತೆಗೆ ಅಡ್ಡಲಾಗಿ ಮಣ್ಣು, ಮರ ಬಿದ್ದಿದೆ. ಹೀಗಾಗಿ ಚಾರ್ಮಾಡಿ ಘಾಟ್ ರಸ್ತೆ ಸಂಚಾರ ಬಂದ್ ಮಾಡಲಾಗಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ ಸೇರಿದಂತೆ ಕರ್ನಾಟಕದ 7ಕ್ಕೂ ಹೆಚ್ಚಿನ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಹೆಚ್ಚಿನ ಮಳೆಯಾಗಲಿದೆ.
ಚಿಕ್ಕಮಗಳೂರು-ದಕ್ಷಿಣ ಕನ್ನಡಕ್ಕೆ ಸಂಪರ್ಕಿಸುವ ಚಾರ್ಮಾಡಿ ಘಾಟ್ನಲ್ಲಿ ಗುಡ್ಡ ಕುಸಿತ ಹಿನ್ನೆಲೆ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದೆ. ನೂರಾರು ವಾಹನಗಳು ಸಾಲುಗಟ್ಟಿ ನಿಂತಿವೆ. ಕೊಟ್ಟಿಗೆಹಾರ, ಬೆಳ್ತಂಗಡಿ ಬಳಿ ವಾಹನ ಸಂಚಾರ ಬಂದ್ ಮಾಡಲಾಗಿದೆ. ಚಾರ್ಮಾಡಿ ಘಾಟಿಗೆ ತೆರಳದಂತೆ ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಲಾಗಿದೆ. ಕಿರಿದಾದ ಅಪಾಯಕಾರಿ ರಸ್ತೆಯಲ್ಲಿ ಪದೇ ಪದೇ ಗುಡ್ಡ ಕುಸಿಯುತ್ತಿದೆ.
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು ಬಾಳೆಹೊನ್ನೂರು-ಕಳಸ ಸಂಪರ್ಕಿಸುವ ಮಹಲ್ಗೋಡು ಸೇತುವೆ ಮುಳುಗಿದೆ. ಭದ್ರಾ ಆರ್ಭಟಕ್ಕೆ ಸೇತುವೆ ಸಂಪೂರ್ಣ ಮುಳುಗಿದೆ. ಮಾಗುಂಡಿ ಗ್ರಾಮ ದ್ವೀಪದಂತಾಗಿದೆ. ಮಾಗುಂಡಿಯಿಂದ ಹುಯಿಗೆರೆ, ಬಿಕ್ಕರಣೆ, ಮಣಬೂರು, ಸಾರಗೋಡು, ಕರಗಣೆ ಸಂಪರ್ಕ ಬಂದ್ ಆಗಿದೆ.
ಮತ್ತೊಂದೆಡೆ ಕೊಡಗು ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಹಟ್ಟಿಹಾಡಿ ರಾಜ್ಯ ಹೆದ್ದಾರಿಯಲ್ಲಿ ಬೃಹತ್ ಗುಡ್ಡ ಕುಸಿಯುತ್ತಿದೆ. ಗುಡ್ಡ ಕುಸಿತ ಹಿನ್ನೆಲೆ ಮನೆ ತೊರೆಯಲು ನಿವಾಸಿಗಳಿಗೆ ಮಾದಾಪುರ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಹಾಸನ ಜಿಲ್ಲೆ ಸಕಲೇಶಪುರದ ಬಳಿ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿತ ತೆರವು ಕಾರ್ಯಾಚರಣೆ ನಿನ್ನೆಯೂ ಮುಂದುವರಿಯಿತು. ಬಾರಿ ಮಳೆಯ ನಡುವೆಯೂ 400ಕ್ಕೂ ಹೆಚ್ಚು ಕಾರ್ಮಿಕರಿಂದ ಕಾರ್ಯಾಚರಣೆ ನಡೆಯುತ್ತಿದ್ದು, 15 ದಿನಗಳ ಕಾಲ ಸಕಲೇಶಪುರ-ಸುಬ್ರಹ್ಮಣ್ಯ ರೈಲು ಮಾರ್ಗ ಬಂದ್ ಮಾಡಲಾಗಿದೆ.