ಕೇರಳದ ವಯನಾಡು ಭೀಕರ ಭೂ ಕುಸಿತಕ್ಕೆ ಸಾಕ್ಷಿಯಾಗಿದೆ. ಘಟನೆಯಲ್ಲಿ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಇಡೀ ದೇಶವೇ ಬೆಚ್ಚಿ ಬಿದ್ದಿದೆ. ಈ ಹೊತ್ತಲ್ಲಿ ಪರಿಸರ ಸೂಕ್ಷ್ಮ ಪ್ರದೇಶಗಳ ಬಗ್ಗೆ ಪರಿಸರ ತಜ್ಞ ಮಾಧವ ಗಾಡ್ಗೀಳ್ ನೇತೃತ್ವದ ತಜ್ಞರು ನೀಡಿದ್ದ ವರದಿ ಮತ್ತೆ ಮುನ್ನೆಲೆಗೆ ಬಂದಿದೆ.
13 ವರ್ಷಗಳ ಹಿಂದೆ ಅಂದರೆ 2011ರ ಆಗಸ್ಟ್‌ನಲ್ಲಿ ಮಾಧವ ಗಾಡ್ಗೀಳ್ ನೇತೃತ್ವದ ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿ (ಡಬ್ಲ್ಯೂಜಿಇಇಪಿ) ವರದಿಯೊಂದನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡಿತ್ತು. ಇದರಲ್ಲಿ ಸಮಿತಿಯು ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ (ಇಎಸ್‌ಎ) ನಡೆಸುತ್ತಿರುವ ವಿವೇಚನಾರಹಿತ ಕಲ್ಲುಗಣಿಗಾರಿಕೆ ಮತ್ತು ನಿರ್ಮಾಣ ಚಟುವಟಿಕೆಗಳ ಬಗ್ಗೆ ಎಚ್ಚರಿಕೆ ನೀಡಿತ್ತು.
ಇದೀಗ ಮಗದೊಂದು ಭೂಕುಸಿತಕ್ಕೆ ಕೇರಳ ಸಾಕ್ಷಿಯಾಗುವುದರೊಂದಿಗೆ ಈ ವರದಿ ಮತ್ತೆ ಸುದ್ದಿ ಕೇಂದ್ರಕ್ಕೆ ಬಂದಿದೆ. ಅದರಲ್ಲೂ ಗಾಡ್ಗೀಳ್ ವರದಿ ಈಗ ಭೂಕುಸಿತ ಸಂಭವಿಸಿರುವ ಮೇಪ್ಪಾಡಿಯಲ್ಲಿ ನಡೆಯುತ್ತಿದ್ದ ಪರಿಸರ ವಿರೋಧಿ ಚಟುವಟಿಕೆಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿತ್ತು.
ಮೆಪ್ಪಾಡಿ ವೈಥಿರಿ ತಾಲೂಕಿನಲ್ಲಿ ಬರುತ್ತದೆ. ಮಂಗಳವಾರದ ಇಲ್ಲಿನ ಗ್ರಾಮಗಳಾದ ಮುಂಡಕ್ಕೈ, ಚೂರಲ್ಮಲಾ, ಅಟ್ಟಮಾಲ ಮತ್ತು ನೂಲ್ಪುಳ ಗ್ರಾಮಗಳಲ್ಲಿ ಮಾರಣಾಂತಿಕ ಭೂಕುಸಿತ ಸಂಭವಿಸಿದ್ದು, ಸಮಿತಿಯು ಗುರುತಿಸಿದ್ದ ಕೇರಳದ 18 ಪರಿಸರ ಸೂಕ್ಷ್ಮ ಸ್ಥಳಗಳಲ್ಲಿ (ಇಎಸ್ಎಲ್) ಇದು ಕೂಡ ಒಂದಾಗಿತ್ತು.
ಆದರೆ, ಇಂಥಹದ್ದೊಂದು ಸ್ಪಷ್ಟ ವರದಿ ನೀಡಿದ್ದರೂ ಕೇರಳ ಮತ್ತು ಕೇಂದ್ರ ಸರ್ಕಾರಗಳು ಇದನ್ನು ಜಾರಿ ಮಾಡುವ ಗೋಜಿಗೆ ಹೋಗಿರಲಿಲ್ಲ. ಇದರ ಬದಲಿಗೆ ವರದಿ ನೀಡಿದ್ದ ಪ್ರಸ್ತಾವನೆಗಳನ್ನು ಮತ್ತಷ್ಟು ದುರ್ಬಲಗೊಳಿಸುವ ಕೆಲಸಕ್ಕೆ ಕೈ ಹಾಕಿದ್ದವು.
ಮಾಧವ್ ಗಾಡ್ಗೀಳ್ ನೇತೃತ್ವದ ಸಮಿತಿಯು ತನ್ನ ವರದಿಯಲ್ಲಿ ಪಶ್ಚಿಮ ಘಟ್ಟಗಳಾದ್ಯಂತ ಇರುವ ಪರಿಸರ ಸೂಕ್ಷ್ಮ ಪ್ರದೇಶಗಳು ಮತ್ತು ವಲಯಗಳನ್ನು ವರ್ಗೀಕರಿಸಿತ್ತು. ಇದರಲ್ಲಿ ಇಎಸ್‌ಝಡ್ – I ಮತ್ತು ಇಎಸ್‌ಝಡ್ – II ಪ್ರದೇಶಗಳಲ್ಲಿ ಯಾವುದೇ ಕಾರಣಕ್ಕೂ ನಿರ್ಮಾಣ ಚಟುವಟಿಕೆಗಳನ್ನು ನಡೆಸಬಾರದು ಎಂದು ಸ್ಪಷ್ಟವಾಗಿ ಸೂಚಿಸಿತ್ತು.
“ನಾವು ಇಎಸ್‌ಝಡ್ Iರಲ್ಲಿ ಕಲ್ಲು ಗಣಿಗಾರಿಕೆ ಮತ್ತು ಕೆಂಪು ವರ್ಗದ (ರೆಡ್ ಕ್ಯಾಟಗರಿ) ಕೈಗಾರಿಕೆಗಳಿಗೆ ಅವಕಾಶ ನೀಡಲೇಬಾರದು ಎಂದು ಪ್ರಸ್ತಾಪಿಸಿದ್ದೆವು. ಹಾಗೆಯೇ ಕಲ್ಲು ಗಣಿಗಾರಿಕೆಗೆ ಅನುಮತಿ ಇರುವ ಪ್ರದೇಶಗಳಲ್ಲಿ, ಕ್ವಾರಿಗಳು ಜನವಸತಿಯಿಂದ ಕನಿಷ್ಠ 100 ಮೀಟರ್ ದೂರದಲ್ಲಿ ಇರಬೇಕು ಎಂದೂ ಹೇಳಿದ್ದವು. ಆದರೆ, ನಂತರ ಸರ್ಕಾರ ಇದನ್ನು 50 ಮೀಟರ್‌ಗೆ ಇಳಿಸಿತು,” ಎಂದು ಈ ತಜ್ಞರ ತಂಡದಲ್ಲಿದ್ದ ಸದಸ್ಯ ಪರಿಸರವಾದಿ ವಿಎಸ್ ವಿಜಯನ್ ತಿಳಿಸಿದ್ದಾರೆ.
ಮುಂದೆ ಮಾಧವ ಗಾಡ್ಗೀಳ್ ವರದಿಯನ್ನೇ ತಳ್ಳಿ ಹಾಕಿದ ಕೇಂದ್ರ ಸರ್ಕಾರ ಕಸ್ತೂರಿರಂಗನ್ ನೇತೃತ್ವದಲ್ಲಿ ಹೊಸ ಸಮಿತಿಯನ್ನು ರಚಿಸಿತು. ಮಾಧವ ಗಾಡ್ಗೀಳ್ ಇಡೀ ಪಶ್ಚಿಮ ಘಟ್ಟವನ್ನೇ ಪರಿಸರ ಸೂಕ್ಷ್ಮ ವಲಯದ ಎಂದು ಘೋಷಿಸುವಂತೆ ಸಲಹೆ ನೀಡಿದ್ದರೆ, ಕಸ್ತೂರಿರಂಗನ್ ಸಮಿತಿ ಈ ವ್ಯಾಪ್ತಿಯನ್ನು ಪಶ್ಚಿಮ ಘಟ್ಟದ ಶೇ. 37ರಷ್ಟು ಭಾಗಗಳಿಗೆ ಇಳಿಸಿತು
ಅತ್ತ ಉಮ್ಮನ್ ಚಾಂಡಿ ಸರಕಾರವೂ ಗಾಡ್ಗೀಳ್ ವರದಿಗೆ ವಿರೋಧ ವ್ಯಕ್ತಪಡಿಸಿ ಉಮ್ಮನ್ ವಿ ಉಮ್ಮನ್ ನೇತೃತ್ವದ ಇನ್ನೊಂದು ಸಮಿತಿ ರಚಿಸಿತು. ಆ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಪಿಟಿ ಥೋಮಸ್ ಇದನ್ನು ಕಟುವಾಗಿ ವಿರೋಧಿಸಿದ್ದಲ್ಲದೆ ಗಾಡ್ಗೀಳ್ ವರದಿಯ ಜಾರಿಗೆ ಒತ್ತಾಯಿಸಿದ್ದರು.
“ಆದರೆ ನಂತರ ಬಂದ ಸರಕಾರ ಒಂದೊಂದಾಗಿ ನಿಯಮಗಳನ್ನು ಸಡಿಲ ಮಾಡುತ್ತಾ ಬಂದವು. ವಿಶೇಷವೆಂದರೆ ಈ ರೀತಿ ಭೂ ಕುಸಿತಗಳಿಗೆ ಗುರಿಯಾಗುವ ಇಡುಕ್ಕಿಯಲ್ಲಿ 1,500 ಚದರ ಅಡಿವರೆಗಿನ ಕಟ್ಟಡ ನಿರ್ಮಾಣವನ್ನು ಸರಕಾರ ಸಕ್ರಮ ಎಂದು ಘೋಷಿಸಿದ ಕೆಲವೇ ದಿನಗಳಲ್ಲಿ ಈ ಮಳೆ ಸುರಿದಿದೆ,” ಎಂದು ಥೋಮಸ್ ಹೇಳಿದ್ದಾರೆ. ಇದು ಸರಕಾರಗಳ ಬದ್ಧತೆಯನ್ನು ತೋರಿಸುತ್ತಿದೆ.
ಮಾಧವ ಗಾಡ್ಗೀಳ್ ವರದಿ ಪ್ರಕಾರ ಪರಿಸರ ಸೂಕ್ಷ್ಮ ವಲಯಗಳ ಪಟ್ಟಿಯಲ್ಲಿ ಮಂಡಕೋಲ್, ಪಣತ್ತಡಿ, ಪೈತಲ್ಮಲ, ಬ್ರಹ್ಮಗಿರಿ – ತಿರುನೆಲ್ಲಿ, ವಯನಾಡ್, ಬಾಣಾಸುರ ಸಾಗರ್ – ಕುಟ್ಟಿಯಾಡಿ, ನಿಲಂಬೂರ್ – ಮೇಪಾಡಿ, ಸೈಲೆಂಟ್ ವ್ಯಾಲಿ – ನ್ಯೂ ಅಮರಾಂಬಲಂ, ಸಿರುವಣಿ, ನೆಲ್ಲಿಯಂಪತಿ, ಪೀಚಿ – ವಝನಿ, ಅತಿರಪಿಲ್ಲಿ – ವಜಚಲ್, ಪೂಯಂಕುಟ್ಟಿ – ಮುನ್ನಾರ್, ಕಾರ್ಡಮಮ್ ಹಿಲ್ಸ್, ಪೆರಿಯಾರ್, ಕುಲತುಪುಳ, ಅಗಸ್ತ್ಯ ಮಾಲಾ ಹೆಸರಿದ್ದವು.
ಮಾಧವ ಗಾಡ್ಗೀಳ್ ವರದಿ ಪ್ರಕಾರ ವಯನಾಡ್‌ನ ವೈಥಿರಿ, ಮಾನಂತವಾಡಿ ಹಾಗೂ ಸುಲ್ತಾನ್ ಬತ್ತೇರಿ ಇಎಸ್‌ಝಡ್ Iರ ವ್ಯಾಪ್ತಿಗೆ ಬಂದರೆ, ಮಲಪ್ಪುರಂನ ಪೆರಿಂತಲ್ಮನ್ನಾ ಮತ್ತು ತಿರೂರ್ ತಾಲೂಕುಗಳು ಇಎಸ್‌ಝಡ್ IIರ ವ್ಯಾಪ್ತಿಗೆ ಬರುತ್ತವೆ..