ಪುತ್ತೂರು:ಭಾರೀ ಮಳೆಯಿಂದ ಕೃತಕ ನೆರೆ ಸಂಭವಿಸಿದ ಹಾಗೂ ಉಂಟಾಗಿರುವ ಅಪಾಯ,ಅನಾಹುತಗಳ ವರದಿ ಅನುಭವದ ಹಿನ್ನೆಲೆಯಲ್ಲಿ ಉಪಗ್ರಹ ಅಧಾರಿತ ಮಾಹಿತಿ ಮೂಲಕ ಅಪಾಯಕಾರಿ ಪ್ರದೇಶಗಳ ಸಮೀಕ್ಷಾ ವರದಿ ಸಿದ್ದಪಡಿಸಲಾಗಿದ್ದು ಪುತ್ತೂರಿನಲ್ಲಿ 4, ಕಡಬದಲ್ಲಿ 7 ಪ್ರದೇಶಗಳು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 128 ಪ್ರದೇಶಗಳನ್ನು ನೆರೆ ಅಪಾಯದ ಪ್ರದೇಶಗಳೆಂದು ಗುರುತಿಸಲಾಗಿದೆ.
ದ.ಕ.ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ನಿರಂತರ ಧಾರಾಕಾರ ಮಳೆಯಾಗುತ್ತಿದೆ. ಪುತ್ತೂರು,ಕಡಬದ ಹಲವು ಕಡೆಗಳ ಸಹಿತ ಮಳೆಯಿಂದ ಅಲ್ಲಲ್ಲಿ ಭೂಕುಸಿತವಾಗಿದೆ,ಆಗುತ್ತಲೇ ಇದೆ.ತಗ್ಗು ಪ್ರದೇಶಗಳು ಜಲಾವೃತಗೊಳ್ಳುತ್ತಿದೆ.ಮನೆಗಳಿಗೂ ಹಾನಿಯಾಗಿದೆ.ಕೃಷಿ ಭೂಮಿಗೂ ಹಾನಿಯಾಗಿದೆ.
ಭೂಕುಸಿತ ಆತಂಕದಲ್ಲಿರುವ ಮನೆಗಳ ಹಲವು ಕುಟುಂಬಗಳಿಗೆ ಕಾಳಜಿ ಕೇಂದ್ರಗಳಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ.ಹಲವು ಕಡೆ ಮಳೆಯಿಂದ ಅಪಾರ ನಷ್ಟವುಂಟಾಗಿದೆ.ಮಳೆಯಿಂದಾಗುವ ಅಪಾಯವನ್ನು ಎದುರಿಸಲು ಜಿಲ್ಲಾಡಳಿತ ಹಾಗೂ ತಾಲೂಕಾಡಳಿತದಿಂದ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.ಪುತ್ತೂರಿನಲ್ಲಿ ಎನ್‌ಡಿಆರ್‌ಎಫ್ ಹಾಗೂ ಸುಬ್ರಹ್ಮಣ್ಯ ಮತ್ತು ಮಂಗಳೂರಿನಲ್ಲಿ ಎಸ್‌ಡಿಆರ್‌ಎಫ್ ತಂಡ ಕಾರ್ಯಾಚರಿಸುತ್ತಿದೆ.
ಉಪಗ್ರಹ ಆಧಾರಿತ ಮಾಹಿತಿ ಪ್ರಕಾರ ದ.ಕ.ಜಿಲ್ಲೆಯ ಪುತ್ತೂರು,ಕಡಬ,ಸುಳ್ಯ, ಮಂಗಳೂರು, ಮೂಲ್ಕಿ, ಬಂಟ್ವಾಳ,ಬೆಳ್ತಂಗಡಿ ಹಾಗೂ ಉಳ್ಳಾಲ ತಾಲೂಕಿನಲ್ಲಿ ಹಲವು ಪ್ರದೇಶಗಳನ್ನು ನೆರೆ ಅಪಾಯದಲ್ಲಿರುವ ಪ್ರದೇಶಗಳೆಂದು ಗುರುತಿಸಲಾಗಿದೆ.
ಪುತ್ತೂರು ತಾಲೂಕಿನಲ್ಲಿ: ಉಪ್ಪಿನಂಗಡಿ, 34 ನೆಕ್ಕಿಲಾಡಿ, ಬೆಳ್ಳಿಪ್ಪಾಡಿ, ಬಜತ್ತೂರು,
ಕಡಬ ತಾಲೂಕಿನಲ್ಲಿ ಸುಬ್ರಹ್ಮಣ್ಯ, ಐನೆಕಿದು, ಏನೆಕಲ್ಲು, ಕುಟ್ರುಪ್ಪಾಡಿ, ಬಲ್ಯ, ಕೌಕ್ರಾಡಿ, ಇಚ್ಲಂಪಾಡಿ,
ಬಂಟ್ವಾಳ ತಾಲೂಕಿನಲ್ಲಿ ಬಂಟ್ವಾಳ ಬಿ.ಕಸಬಾ, ನಾವೂರು, ಮಣಿನಾಲ್ಕೂರು, ಸರಪಾಡಿ ಬಿ.ಮೂಡ, ಪಾಣೆಮಂಗಳೂರು,ಕಡೇಶ್ವಾಲ್ಯ, ಬರಿಮಾರು, ಸಜಿಪಮುನ್ನೂರು, ಪುದು, ಸಜಿಪಮೂಡ,
ಸುಳ್ಯ ತಾಲೂಕಿನ ಹರಿಹರ ಪಳ್ಳತ್ತಡ್ಕ, ಕೊಲ್ಲಮೊಗ್ರು, ಕಲ್ಮಕಾರ್,
ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲು, ಕಡಿರುದ್ಯಾವರ, ಮಲವಂತಿಗೆ, ದಿಡುಪೆ, ಲಾಲ, ಕೊಯ್ಯೂರು, ನಡಾ, ಕನ್ಯಾಡಿ, ಚಾರ್ಮಾಡಿ, ತೋಟತಡಿ, ನೆರಿಯಾ, ಧರ್ಮಸ್ಥಳ, ಬೆಳಾಲು, ಬಂದಾರು, ಮೊಗರು, ಇಳಂತಿಲ, ನಿಡ್ಲೆ, ಶಿಶಿಲ, ನಾರಾವಿ, ಕುತ್ಲೂರು, ವೇಣೂರು, ಬಜಿರೆ, ಕೊರಿಮಾಣಿಲು, ಮೂಡುಕೋಡಿ, ಬಡಗ ಕಾರಂದೂರು, ಸುಲ್ಕೇರಿಮೊಗರು, ಪಿಳ್ಯ, ಶಿರ್ಲಾಲು, ಕರಂಬಾರು, ಅರಂಬೋಡಿ, ಗುಂಡುರಿ ಪ್ರದೇಶಗಳನ್ನು ಸಂಭಾವ್ಯ ನೆರೆಪೀಡಿತ ಪ್ರದೇಶಗಳೆಂದು ಗುರುತಿಸಲಾಗಿದೆ.
ನೆರೆ ಅಪಾಯಕಾರಿ ಪ್ರದೇಶಗಳೆಂದು ಗುರುತಿಸಲಾದ ಬಹುತೇಕ ಪ್ರದೇಶಗಳಲ್ಲಿ ಈಗಾಗಲೇ ಅನಾಹುತಗಳು ಸಂಭವಿಸಿದೆ.ತಾಲೂಕಿನ ಬೆಳ್ಳಿಪ್ಪಾಡಿ,34 ನೆಕ್ಕಿಲಾಡಿ,ಉಪ್ಪಿನಂಗಡಿ,ಬಜತ್ತೂರು,ಕಡಬದ ಸುಬ್ರಹ್ಮಣ್ಯ ಸಹಿತ ಹಲವು ಪ್ರದೇಶಗಳಲ್ಲಿ ಭೂಕುಸಿತದಿಂದ ಅಪಾರ ಹಾನಿ ಸಂಭವಿಸಿದೆ.ನೆರೆಯಿಂದಲೂ ಹಾನಿ ಸಂಭವಿಸಿದೆ.
ಪುತ್ತೂರು ತಾಲೂಕಿನಲ್ಲಿ ಉಪ್ಪಿನಂಗಡಿ, 34 ನೆಕ್ಕಿಲಾಡಿ, ಬೆಳ್ಳಿಪ್ಪಾಡಿ, ಬಜತ್ತೂರು, ಕಡಬ ತಾಲೂಕಿನಲ್ಲಿ ಸುಬ್ರಹ್ಮಣ್ಯ, ಐನೆಕಿದು, ಏನೆಕಲ್ಲು, ಕುಟ್ರುಪ್ಪಾಡಿ, ಬಲ್ಯ, ಕೌಕ್ರಾಡಿ, ಇಚ್ಲಂಪಾಡಿ ಗ್ರಾಮಗಳು ಸಂಭಾವ್ಯ ನೆರೆ ಪ್ರದೇಶಗಳಾಗಿವೆ ಎಂದು ಉಪಗ್ರಹಾಧಾರಿತ ಸಮೀಕ್ಷೆ ಗುರುತಿಸಿದೆ.ಈ ನಿಟ್ಟಿನಲ್ಲಿ ಇಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.