ಮುಡಾ ಅಕ್ರಮ ಆರೋಪದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಪಣ ತೊಟ್ಟಿರುವ ಬಿಜೆಪಿ, ಜೆಡಿಎಸ್ ನಾಯಕರ ಪಾದಯಾತ್ರೆಗೆ ಬೃಹತ್ ಚಾಲನೆ ಸಿಕ್ಕಿದೆ. ಕೆಂಗೇರಿ ಆದಿಶಕ್ತಿ ಕೆಂಪಮ್ಮ ದೇವಸ್ಥಾನದ ಬಳಿ ಎರಡು ಪಕ್ಷದ ದೊಡ್ಡ ನಾಯಕರು ಮೈಸೂರು ಚಲೋ ಪಾದಯಾತ್ರೆಗೆ ಚಾಲನೆ ನೀಡಿದ್ದಾರೆ.
ಕೆಂಗೇರಿಯಲ್ಲಿ ಎರ್ಪಡಿಸಿದ್ದ ಸಾರ್ವಜನಿಕ ಸಮಾರಂಭದಲ್ಲಿ ಇಂದು ಬಿಜೆಪಿ, ಜೆಡಿಎಸ್ ನಾಯಕರು ಜೋತೆ ಸೇರಿ ಪಾದಯಾತ್ರೆಗೆ ಚಾಲನೆ ಕೊಟ್ಟಿದ್ದಾರೆ. ವೇದಿಕೆ ಮೇಲೆ ಬಿಜೆಪಿ, ಜೆಡಿಎಸ್ ನಾಯಕರ ಕೈ ಎತ್ತಿ ಕಾಂಗ್ರೆಸ್ ವಿರುದ್ಧ ತಮ್ಮ ಒಗ್ಗಟ್ಟಿನ ಶಕ್ತಿ ತೋರಿಸಿದ್ದಾರೆ.
ಈ ಒಗ್ಗಟ್ಟಿನ ಹಿಂದೆ ಒಂದು ರಾಜಕೀಯದ ರಹಸ್ಯ ಇದೆ.
ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಮಣಿಸಲು ರಾಜ್ಯ ಬಿಜೆಪಿ ನಾಯಕರ ಪಾದಯಾತ್ರೆಯ ಮೆಗಾ ಪ್ಲಾನ್ ಮಾಡಿದ್ದರು. ಮೈಸೂರಿಗೆ ಪಾದಯಾತ್ರೆ ಹೋಗುವ ಬ್ಲೂಪ್ರಿಂಟ್ ಕೂಡ ತಯಾರಾಗ್ಗಿತ್ತು. ಆದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರ ಮಹತ್ವದ ಈ ಯೋಜನೆಗೆ ಆರಂಭದಲ್ಲೇ ತೊಡಕು ಎದುರಾಗಿತ್ತು. ದೆಹಲಿಯಲ್ಲಿ ಮಾತನಾಡಿದ್ದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಪಾದಯಾತ್ರೆಗೆ ನಮ್ಮ ಬೆಂಬಲವಿಲ್ಲ. ಪಾದಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಅವರು ಮೊದಲೇ ನಿರ್ಧಾರ ಮಾಡಿ ಬಂದಿದ್ದರು. ರಾಜ್ಯದ ಜನ ಪ್ರವಾಹ ಎದುರಿಸುತ್ತಿರುವಾಗ ಪಾದಯಾತ್ರೆಯ ಅಗತ್ಯವೇ ಇಲ್ಲ ಎಂದಿದ್ದರು. ಇದು ರಾಜ್ಯ ಬಿಜೆಪಿ ನಾಯಕರನ್ನು ಚಿಂತೆಗೀಡು ಮಾಡಿತು.
ವಿರೋಧಿಸಿದ H.D ಕುಮಾರಸ್ವಾಮಿ ರವರನ್ನು ಒಪ್ಪಿಸಿದವರಾರು..?
ಮೈಸೂರು ಚಲೋ ಪಾದಯಾತ್ರೆಗೆ ಅಡ್ಡಿ ಎದುರಾದಾಗ ಮಹತ್ವದ ಪಾತ್ರ ವಹಿಸಿದ್ದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ. ಹೌದು ಬಿಜೆಪಿ ಪಾದಯಾತ್ರೆಯಲ್ಲಿ ಬೆಂಬಲ ಸೂಚಿಸಲು ಜೆಡಿಎಸ್ ನಾಯಕರು ಒಪ್ಪದಿದ್ದಾಗ ಅದನ್ನು ಸರಿಪಡಿಸಿದ್ದೇ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ. ಕುಮಾರಸ್ವಾಮಿ ಅವರು ಮುನಿಸಿಕೊಂಡಾಗ ಸ್ವತಃ ಪ್ರಹ್ಲಾದ್ ಜೋಶಿ ಅವರೇ ಮೂರ್ನಾಲ್ಕು ಸಲಿ ಕರೆ ಮಾಡಿ ಮಾತಾನಾಡಿದ್ದಾರೆ. ಇದಾದ ನಂತರ ಕುಮಾರಸ್ವಾಮಿ ಅವರು ಬಿಜೆಪಿ ಪಾದಯಾತ್ರೆ ಭಾಗಿಯಾಗಲು ಸಮ್ಮತಿ ಸೂಚಿಸಿದ್ದಾರೆ .
ಮೈಸೂರು ಚಲೋ ಪಾದಯಾತ್ರೆಗೆ ಚಾಲನೆ ನೀಡಿದ ವೇದಿಕೆಯಲ್ಲೂ ಹೆಚ್.ಡಿ ಕುಮಾರಸ್ವಾಮಿ ಅವರು ಪ್ರಹ್ಲಾದ್ ಜೋಶಿ ಅವರನ್ನೇ ಹೆಚ್ಚು ನೆನಪಿಸಿಕೊಂಡಿದ್ದಾರೆ. ವೇದಿಕೆಯಲ್ಲಿ ಭಾಷಣ ಮಾಡಿದ ಹೆಚ್‌ಡಿಕೆ ಅವರು ನಾಲ್ಕೈದು ಬಾರಿ ಪ್ರಹ್ಲಾದ್ ಜೋಶಿ ಅವರ ಹೆಸರನ್ನು ಹೇಳಿದರು. ನಾವು ಮುಂದೆ ಅಣ್ಣ-ತಮ್ಮಂದಿರಂತೆ ಹೋರಾಟ ಮಾಡುತ್ತೇವೆ ಎಂದು ಮಾತನಾಡಿದ ಕುಮಾರಸ್ವಾಮಿ ಅವರು ಮೈತ್ರಿ ಪಕ್ಷದ ಮಧ್ಯೆ ಮೂಡಿದ್ದ ಸಣ್ಣಪುಟ್ಟ ಗೊಂದಲಗಳಿಗೆ ಫುಲ್ ಸ್ಟಾಪ್ ಹಾಕಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ, ವಿರೋಧ ಪಕ್ಷ ನಾಯಕರಾದ ಆರ್ ಅಶೋಕ್ ಅವರು, ವಿಧಾನ ಪರಿಷತ್ ವಿರೋಧ ಪಕ್ಷ ನಾಯಕರಾದ ಛಲವಾದಿ ನಾರಾಯಣ ಸ್ವಾಮಿ, ವಿರೋಧ ಪಕ್ಷ ಉಪ ನಾಯಕರಾದ ಅರವಿಂದ್ ಬೆಲ್ಲದ್, ಮಾಜಿ ಉಪಮುಖ್ಯಮಂತ್ರಿಗಳಾದ ಡಾ ಅಶ್ವಥ್ ನಾರಾಯಣ್, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಸಿ ಬಿ ಸುರೇಶ್ ಬಾಬು, ಮಾಜಿ ಸಚಿವರಾದ ಬಿ ಶ್ರೀರಾಮುಲು,ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸುನೀಲ್ ಕುಮಾರ್, ರಾಜ್ಯ ಉಪಾಧ್ಯಕ್ಷರಾದ ಭೈರತಿ ಬಸವರಾಜು, ರಾಜು ಗೌಡ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರ ಸ್ವಾಮಿ, ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಶಾಸಕರು, ಸಂಸದರು, ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹೆಜ್ಜೆ ಹಾಕುತ್ತಿದ್ದಾರೆ. ಬಿಜೆಪಿ-ಜೆಡಿಎಸ್ ಪಕ್ಷದ ಮೈಸೂರು ಚಲೋ ಪಾದಯಾತ್ರೆ ಇಂದು ಕೆಂಗೇರಿಯಿಂದ ಆರಂಭವಾಗಿ ಬಿಡದಿ ತಲುಪಲಿದೆ.