ಭಾರೀ ಮಳೆಯಿಂದಾಗಿ ವಯನಾಡ್‍ನಲ್ಲಿ ಉಂಟಾದ ಭೂಕುಸಿತಕ್ಕೆ ಹಲವರ ಮನೆ ನೆಲಸಮವಾಗಿದೆ. ಅನೇಕರು ಜೀವ ಕಳೆದುಕೊಂಡಿದ್ದಾರೆ. ವಯನಾಡಿನ ಚೂರಲ್ಮಾಲಾದಲ್ಲಿ ಭೂಕುಸಿತದಲ್ಲಿ ಅದೃಷ್ಟವಶಾತ್ ಕೆಲವರು ಬದುಕುಳಿದಿದ್ದಾರೆ. ಅವರಲ್ಲಿ ಒಬ್ಬರು ಅಂದು ತಮ್ಮ ಹಾಗೂ ತಮ್ಮ ಕುಟುಂಬದವರ ಜೀವ ಉಳಿಸಿಕೊಳ್ಳಲು ಎಷ್ಟು ಪರಿದಾಡಿದರು. ಹಾಗೇ ಕಾಡು ಸೇರಿ ಅಲ್ಲಿ ತಾವು ಎದುರಿಸಿದ ಸಂದಿಗ್ಧ ಪರಿಸ್ಥಿತಿಯನ್ನು ವಿವರಿಸಿದ್ದಾರೆ.
ವರದಿ ಪ್ರಕಾರ ಚೂರಲ್ಮಾಲಾದಲ್ಲಿ ಭಾರಿ ಭೂಕುಸಿತದಿಂದಾಗಿ ಸುಜಾತಾ ಅನಿನಂಚಿರಾ ಮತ್ತು ಅವರ ಕುಟುಂಬವು ಮಾರಣಾಂತಿಕ ಪರಿಸ್ಥಿತಿಯಲ್ಲಿ ಸಿಲುಕಿತ್ತು. ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಸುಜಾತಾ, ಅವರ ಮಗಳು ಸುಜಿತಾ, ಪತಿ ಕುಟ್ಟನ್ ಮತ್ತು ಮೊಮ್ಮಕ್ಕಳಾದ ಸೂರಜ್ (18) ಮತ್ತು ಮೃದುಲಾ (12) ಅವರು ಅತ್ಯಂತ ಧೈರ್ಯದಿಂದ ಪಾರಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
18 ವರ್ಷಗಳಿಂದ ಮುಂಡಕ್ಕೈನ ಹ್ಯಾರಿಸನ್ ಮಲಯಾಳಂ ಟೀ ಎಸ್ಟೇಟ್‍ನಲ್ಲಿ ಚಹಾದ ಎಲೆಗಳನ್ನು ಕೀಳುವ ಕೆಲಸ ಮಾಡುತ್ತಿದ್ದ ಸುಜಾತಾ ಅಂದು ಭೂಕುಸಿತದ ವೇಳೆ ತಮಗೆ ಎದುರಾದ ಭಯಾನಕ ಅಗ್ನಿಪರೀಕ್ಷೆಯನ್ನು ನೆನಪಿಸಿಕೊಂಡಿದ್ದಾರೆ. ಸೋಮವಾರ ರಾತ್ರಿ 4 ಗಂಟೆಯಿಂದ ಭಾರಿ ಮಳೆ ಸುರಿಯುತ್ತಿದ್ದರಿಂದ ಮುಂಜಾನೆ ಬೇಗನೆ ಎದ್ದ ಸುಜಾತ ಅವರಿಗೆ ದೊಡ್ಡ ಶಬ್ದವನ್ನು ಕೇಳಿದೆ, ಆಗ ನೋಡಿದರೆ ನೀರು ಅವರ ಮನೆಗೆ ನುಗ್ಗಿ ಮನೆಯ ಚಾವಣಿ ಕುಸಿದು ಅವರ ಮಗಳು ಗಂಭೀರವಾಗಿ ಗಾಯಗೊಂಡಳು.
ಕುಸಿದ ಗೋಡೆಯ ಅವಶೇಷಗಳನ್ನು ತೆಗೆದು ಹಾಕಿ ಅವರು ತಮ್ಮ ಮಗಳು ಹಾಗೂ ಮೊಮ್ಮಕ್ಕಳನ್ನು ಕಾಪಾಡಿದ್ದಾರೆ. ನಂತರ ಕುಟುಂಬದ ಉಳಿದವರು ಸಹ ತಮ್ಮನ್ನು ತಾವು ರಕ್ಷಿಸಿಕೊಂಡು ಉಕ್ಕಿ ಹರಿಯುವ ನೀರಿನ ಮೂಲಕ ನಡೆದು ಅಂತಿಮವಾಗಿ ಹತ್ತಿರದ ಗುಡ್ಡಕ್ಕೆ ಏರಿದ್ದಾರಂತೆ.
ಆದರೆ ಒಂದು ಸಂಕಷ್ಟದಿಂದ ಪಾರಾದ ಸುಜಾತ ಅವರಿಗೆ ಎದುರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆಯಂತೆ. ಅದೇನೆಂದರೆ ಗುಡ್ಡ ಏರಿದ ಅವರ ಎದುರಿಗೆ ಎರಡು ಹೆಣ್ಣು ಆನೆಗಳು ನಿಂತಿದ್ದವಂತೆ. ಆಗ ಹೆದರಿದ ಸುಜಾತ ಅವರು ಆನೆಗಳಲ್ಲಿ ರಾತ್ರಿ ಇಲ್ಲಿ ಮಲಗಲು ಅವಕಾಶ ನೀಡಿ ಎಂದು ಬೇಡಿಕೊಂಡಿದ್ದಾರಂತೆ.
ಆಗ ಅವರ ಕಷ್ಟ ಅರ್ಥಮಾಡಿಕೊಂಡ ಆನೆಗಳು ಅವರಿಗೆ ಯಾವುದೇ ಹಾನಿ ಮಾಡದೆ ಅಲ್ಲೇ ನಿಂತಿದ್ದವಂತೆ. ಮರುದಿನ ಬೆಳಿಗ್ಗೆ ಕೆಲವು ಜನರು ಅವರನ್ನು ರಕ್ಷಿಸುವವರೆಗೂ ಆನೆಗಳು ಸಹ ಅಲ್ಲಿಯೇ ನಿಂತಿದ್ದವು. ಆದರೆ ಆ ವೇಳೆ ಅವುಗಳ ಕಣ್ಣಿನಲ್ಲಿ ನೀರು ಸುರಿಯುತ್ತಿರುವುದನ್ನು ಅವರು ಗಮನಿಸಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ.
ಇದರಿಂದ ತಿಳಿಯುದೇನೆಂದರೆ ಪ್ರಾಣಿಗಳಿಗೂ ಮನುಷ್ಯರ ಭಾವನೆ ಅರ್ಥವಾಗುತ್ತದೆ. ಅವುಗಳು ಮನುಷ್ಯರ ಭಾವನೆಗಳಿಗೆ ಸ್ಪಂದಿಸುತ್ತವೆ ಎಂಬುದು. ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ಶಶಿ ತರೂರ್, “ಮನೆಯಿಲ್ಲದ ಭೂಕುಸಿತ ಸಂತ್ರಸ್ಥರು ತಮ್ಮ ದುಃಖವನ್ನು ಆನೆಗೆ ತಿಳಿಸಿದರು, ಅದು ಅವರಿಗಾಗಿ ಕಣ್ಣೀರು ಹಾಕಿದೆ ಮತ್ತು ರಾತ್ರಿಯಿಡೀ ಅವರಿಗೆ ಆಶ್ರಯ ನೀಡಿದೆ ಎಂದು ತಿಳಿಸಿದ್ದಾರೆ.