ಪುತ್ತೂರು: ಸಾಧಕರನ್ನು ಸನ್ಮಾನಿಸುವಾಗ ಆ ಸನ್ಮಾನ ಅವರಿಗೆ ಮಾತ್ರವಲ್ಲ ಅವರ ಸಾಧನೆಗೆ ಕಾರಣಕರ್ತರಾದ ಇಡಿ ಕುಟುಂಬಕ್ಕೆ ಸಲ್ಲಬೇಕೆಂಬ ನಿಟ್ಟಿನಲ್ಲಿ ಸಾಧಕರ ಜೊತೆ ಅವರ ಕುಟುಂಬವನ್ನೂ ಸನ್ಮಾನಿಸುವ ವಿಶೇಷ ಕಾರ್ಯಕ್ರಮ ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಮೂಲಕ ಬಿಲ್ಲವ ಮಹಿಳಾ ವೇದಿಕೆ ನೇತೃತ್ವದಲ್ಲಿ ಆ.11ರಂದು ಬಪ್ಪಳಿಗೆ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ನಡೆಯುವ ಆಟಿದ ನೆಂಪುದ ಕೂಟ ಕಾರ್ಯಕ್ರಮದಲ್ಲಿ ನಡೆಯಲಿದೆ .ಕಾರ್ಯಕ್ರಮದಲ್ಲಿ ಕುಟುಂಬವನ್ನೇ ಸನ್ಮಾನಿಸುವ ಚಿಂತನೆಗೆ ಪ್ರಥಮ ಹೆಜ್ಜೆ ಬಿಲ್ಲವ ಸಂಘ ಇಟ್ಟಿದೆ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಅವರು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಆ.11ಕ್ಕೆ ವಿಶೇಷ ರೀತಿಯಲ್ಲಿ ಆಟಿದ ನೆಂಪುದ ಕೂಟ ಎಂಬ ಕಾರ್ಯಕ್ರಮದಲ್ಲಿ ಬೆಳಗ್ಗಿನಿಂದ ಮಧ್ಯಾಹ್ನದ ತನಕ ಕಾರ್ಯಕ್ರಮ ನಡೆಯಲಿದೆ. ಬ್ರಹ್ಮಶ್ರೀ ನಾರಾಯಣಗುರುಗಳು ವಿದ್ಯೆಗೆ ಆದ್ಯತೆ ನೀಡಿದಂತೆ ಸಂಘದ ವಿದ್ಯಾರ್ಥಿವೇತನ ಪಡೆದು ಉನ್ನತ ಉದ್ಯೋಗ ಪಡೆದದವರನ್ನು ಕುಟುಂಬ ಸಮೇತ ಸನ್ಮಾನಿಸಲಾಗುವುದು. ಇದರ ಜೊತೆ ಸೇನೆ ಮತ್ತು ನಾಟಿವೈದ್ಯರಿಗೂ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಅದೇ ರೀತಿ ಮಧ್ಯಾಹ್ನ ಆಟಿದ ವಿಶೇಷ ಊಟೋಪಾಚರ ನಡೆಯಲಿದೆ ಎಂದರು.
ಬಿಲ್ಲವ ಮಹಿಳಾ ವೇದಿಕೆ ಸಂಚಾಲಕಿ ಉಷಾ ಅಂಚನ್ ನೆಲ್ಯಾಡಿ ಅವರು ಮಾತನಾಡಿ ಬೆಳಿಗ್ಗೆ ಗಂಟೆ 9.30ಕ್ಕೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಬೆಲ್ಲ ನೀರಿನೊಂದಿಗೆ ಅತಿಥಿಗಳನ್ನು ಸ್ವಾಗತಿಸುವ ಮೂಲಕ ಮಧ್ಯಾಹ್ನ ಗಂಟೆ 11ಕ್ಕೆ ಸಭಾ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬಿಲ್ಲವ ಮಹಿಳಾ ವಏದಿಕೆ ವಿಮಲಾ ಸುರೇಶ್ ಅಧ್ಯಕ್ಷತೆ ವಹಿಸಲಿದ್ದಾರೆ.
ಬಂಟ್ವಾಳ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಎಸ್.ವಿಜಯಪ್ರಸಾದ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ತುಕಾರಾಮ ಪೂಜಾರಿ ಅವರು ಆಟಿದ ಕುರಿತು ಉಪನ್ಯಾಸ ನೀಡಲಿದ್ದಾರೆ. ಮಾಜಿ ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರ್, ಬೆಳ್ತಂಗಡಿ ಬೆಸ್ಟ್ ಪೌಂಡೇಶನ್‌ನ ಅಧ್ಯಕ್ಷ ರಕ್ಷಿತ್ ಶಿವರಾಮ್, ವಿಟ್ಲ ಬಿಲ್ಲವ ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಸಂಜೀವ ಪೂಜಾರಿ, ರಾಮಕುಂಜ ಶ್ರೀ ರಾಮಕುಂಜೇಶ್ವರ ಶಾಲೆಯ ಶಿಕ್ಷಕಿ ಸರಿತಾ ಜನಾರ್ದನ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಆಟಿ ತಿಂಗಳಲ್ಲಿ ಬರುವ ವಿಶೇಷ ಬಗೆಯ ತಿಂಡಿ ತಿನಸಗಳನ್ನು ನೈಜವಾಗಿ ತಯಾರಿಸಲಾಗುವುದು. ಅದೇ ರೀತಿ ಕಾರ್ಯಕ್ರಮದಲ್ಲಿ ರಾಗಿ ಕಾಫಿಯ ಮೂಲಕ ಸ್ವಾಗತ ಪಾನಿಯ ನೀಡಲಾಗುವುದು. ತುಳುನಾಡ ಪಾಡ್ದನ, ಮಕ್ಕಳ ನೃತ್ಯ, ಮಕ್ಕಳಿಗೆ ಆಟಿ ಕಳೆಂಜ ಕುರಿತು ಮಕ್ಕಳಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಆಟಿ ಕಳೆಂಜನ ನಲಿಕೆ ಕಾರ್ಯಕ್ರಮ ಸಂಪ್ರದಾಯ ಬದ್ದವಾಗಿ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಆಟಿಯ ಹಲವು ವಿಶೇಷ ಖಾದ್ಯದೊಂದಿಗೆ ಸಹಭೋಜನ ನಡೆಯಲಿದೆ ಎಂದು ಉಷಾ ಅಂಚನ್ ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಬಿಲ್ಲವ ಮಹಿಳಾ ವೇದಿಕೆ ಅಧ್ಯಕ್ಷೆ ವಿಮಲಾ ಸುರೇಶ್, ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ಚಿದಾನಂದ ಸುವರ್ಣ, ಮಹಿಳಾ ವೇದಿಕೆಯ ಕಾರ್ಯದರ್ಶಿ ಸುಶ್ಮಾ ಸತೀಶ್, ಉಪಧ್ಯಕ್ಷೆ ವಿದ್ಯಾ ನಿಡ್ಡೆಂಕಿ, ಕೋಶಾಧಿಕಾರಿ ದೀಕ್ಷಾ ಸ್ಪಂದನ ಉಪಸ್ಥಿತರಿದ್ದರು.