ಮಂಗಳೂರು: 78ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಮಂಗಳೂರು ನಗರದ ಡೊಂಗರಕೇರಿಯಲ್ಲಿರುವ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಮಟ್ಟಾರ ವಿಠ್ಠಲ ಕಿಣಿ ಅವರನ್ನು ಇಂದು ಬೆಳಗ್ಗೆ ಅವರ ಸ್ವಗೃಹದಲ್ಲಿ ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಪೇಟಾ ತೊಡಿಸಿ ಶಾಲು ಹೊದಿಸಿ ಸನ್ಮಾನಿಸಿದರು.
ಈ ವೇಳೆ ಸ್ವಾತಂತ್ರ್ಯ ಚಳುವಳಿಯ ನೆನೆಪುಗಳನ್ನು ಕಿಣಿಯವರು ಅತ್ಯುತ್ಸಾಹದಿಂದಲೇ ಹಂಚಿಕೊಂಡು “ನನಗೆ ಅಂದು ಗಾಂಧಿ ಯಾರೆಂದೇ ತಿಳಿದಿರಲಿಲ್ಲ. ಎಳೆ ವಯಸ್ಸಿನವನಾಗಿದ್ದ ನಾನು ಅಣ್ಣನ ಹೆಗಲೇರಿ ರಾಷ್ಟ್ರಪಿತರನ್ನು ನೋಡಿದ್ದ ನೆನಪಿದೆ. ಅಂದು ಕರಪತ್ರ ಹಂಚಿ, ಭಿತ್ತಿಪತ್ರಗಳನ್ನು ಹಂಚುತ್ತಾ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗುವುದಕ್ಕೆ ಇತರರನ್ನು ಪ್ರೋತ್ಸಾಹಿಸುವುದು ನನ್ನ ಕೆಲಸವಾಗಿತ್ತು” ಎಂದು ತಮ್ಮ ನೆನಪಿನ ಬುತ್ತಿ ಬಿಚ್ಚಿಟ್ಟರು.
ಈ ವೇಳೆ ಮಾತನಾಡಿದ ಸಂಸದರು ” 96ರ ಹರೆಯಲ್ಲೂ ನಿಮ್ಮ ಜೀವನನೋತ್ಸಾಹ ನಮ್ಮೆಲ್ಲರಿಗೂ ಪ್ರೇರಕವಾಗಿದ್ದು, ನಿಮ್ಮ ಮಾತುಗಳು ನಮಗೆ ಸ್ಪೂರ್ತಿದಾಯಕ” ಎಂದರು.
ಇದೇ ವೇಳೆ ಸಂಸದ ಕ್ಯಾ. ಚೌಟ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಕಿಣಿಯವರು, “ನೀವು ಎಲ್ಲಾ ಅರ್ಹತೆಗಳೊಂದಿಗೆ ಸಂಸತ್ತಿಗೆ ಪ್ರವೇಶಿಸಿದ್ದೀರಿ; ನಿಮಗೆ ಮುಂದೆ ಉತ್ತಮ ಭವಿಷ್ಯವಿದೆ. ರಾಜಕೀಯದಲ್ಲಿ ನೀವು ಅತ್ಯುತ್ತಮ ನಾಯಕರಾಗಿ ಹೊರಹೊಮ್ಮತ್ತೀರಿ” ಎಂದು ಅಶೀರ್ವದಿಸಿ, ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ‘ಹರ್ ಘರ್ ತಿರಂಗಾ’ ಅಭಿಯಾನ ಅಂಗವಾಗಿ ಸಂಸದ ಚೌಟ ಅವರು ಕಿಣಿಯವರ ನಿವಾಸದಲ್ಲೂ ತ್ರಿವರ್ಣ ಧ್ವಜ ಹಾರಿಸಿ ಸ್ವಾತಂತ್ರ್ಯ ಸಂಭ್ರಮವನ್ನು ಮತ್ತಷ್ಟು ಅರ್ಥಪೂರ್ಣಗೊಳಿಸಿದರು.