ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರನ್ನು ರಾಷ್ಟ್ರಪತಿಗಳು ಹಿಂದಕ್ಕೆ ಕಳಿಸದಿದ್ದರೆ ಬಾಂಗ್ಲಾದೇಶದ ಅಧ್ಯಕ್ಷರಿಗೆ ಆದ ಸ್ಥಿತಿ ಅವರಿಗೆ ಬರುತ್ತದೆ ಎಂದು ವಿಧಾನ ಪರಿಷತ್ ಐವಾನ್ ಡಿಸೋಜ ಹೇಳಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅನುಮತಿಗೆ ನೀಡಿದ್ದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು, ಈ ವೇಳೆ ಮಾತನಾಡಿದ ವಿಧಾನ ಪರಿಷತ್ ಐವನ್ ಡಿಸೋಜಾ ರಾಜ್ಯಪಾಲರೇ ನಿಮ್ಮಂಥ ಕಳ್ಳ, ಕುತಂತ್ರಿ, ಜನವಿರೋಧಿ ಮತ್ತೊಬ್ಬ ಈ ದೇಶದಲ್ಲಿ ಇಲ್ಲ. ರಾಜ್ಯಪಾಲರ ಕಚೇರಿಗೆ ರಾತ್ರಿಯೇ ಮುತ್ತಿಗೆ ಹಾಕುತ್ತೇವೆ, ರಾಜ್ಯಪಾಲರ ಚಲೋ ಮಾಡ್ತೀವಿ. ನಿಮ್ಮನ್ನು ನಾವು ಓಡಿಸುತ್ತೇವೆ. ಬಿಜೆಪಿ ಕೈಗೊಂಬೆ ರೀತಿ ಇರೋ ರಾಜ್ಯಪಾಲರೇ ಗೆಟ್ ಔಟ್, ಗೆಟ್ ಲಾಸ್ಟ್ ಎಂದು ಐವಾನ್ ಡಿಸೋಜ ಹೇಳಿಕೆ ನೀಡಿದ್ದಾರೆ. ಅಲ್ಲದೆ ಬಾಂಗ್ಲಾದೇಶದ ಪ್ರಧಾನಿ ಹೇಗೆ ದೇಶ ಬಿಟ್ಟರೋ ಅದೇ ಸ್ಥಿತಿ ನಿಮಗೆ ಬರುತ್ತದೆ ಎಂದು ಹೇಳಿಕೆ ನೀಡಿದ್ದಾರೆ.
ರಾಜಭವನ ಚಲೋ ಆಂದೋಲನ ನಡೆಸುವುದು ನಮ್ಮ ಮುಂದಿನ ಹೆಜ್ಜೆ. ರಾಜ್ಯಪಾಲರು ಬಿಜೆಪಿಯ ಕೈಗೊಂಬೆಯಾಗಿದ್ದಾರೆ. ರಾಜ್ಯಪಾಲರು ಕೂಡಲೇ ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಹಿಂಪಡೆಯಬೇಕು, ಇಲ್ಲದಿದ್ದರೆ ರಾಜ್ಯಪಾಲರ ಕಚೇರಿಯನ್ನು ವಶಪಡಿಸಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು. ಇನ್ನು ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ಐವನ್ ಡಿಸೋಜಾ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸುವಂತೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಪೊಲೀಸರಿಗೆ ಒತ್ತಾಯಿಸಿದೆ.
ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಸೋಮವಾರ ಪ್ರತಿಭಟನಾಕಾರರು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ರಸ್ತೆ ಮಧ್ಯೆ ಟೈರ್ ಸುಟ್ಟು ರಸ್ತೆ ತಡೆ ನಡೆಸಿದರು. ಪ್ರತಿಭಟನೆ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸರು ಹಲವು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರನ್ನು ಬಂಧಿಸಿದ್ದಾರೆ.
ಖಾಸಗಿ ಬಸ್‌ಗೆ ಕಲ್ಲು ತೂರಾಟ ನಡೆಸಿ ಗಾಜು ಪುಡಿ ಮಾಡಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನೂ ಬಂಧಿಸಲಾಗಿದೆ. ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಿ, ‘ಮಿಸ್ಟರ್ ಕ್ಲೀನ್ ಸಿಎಂ’ ಖ್ಯಾತಿಗೆ ಮಸಿ ಬಳಿಯುವ ಬಿಜೆಪಿಯ ಕುತಂತ್ರ ಇದಾಗಿದ್ದು, ಮತ್ತೆ ಅಧಿಕಾರಕ್ಕೆ ಬರುವ ಹಗಲುಗನಸು ಕಾಣುತ್ತಿದೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ.