ಪುಟ್ಟ ಬಾಲಕಿಯರ ಮೇಲೆ ಶಾಲಾ ಅಟೆಂಡರ್ ಲೈಂಗಿಕ ದೌರ್ಜನ್ಯವೆಸಗಿದ ಪ್ರಕರಣ ಖಂಡಿಸಿ ಮಂಗಳವಾರ ಬದ್ಲಾಪುರ್ ರೈಲು ನಿಲ್ದಾಣದಲ್ಲಿ ವ್ಯಾಪಕ ಪ್ರತಿಭಟನೆಯ ನಡುವೆ, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಠಾಕ್ರೆ ಅವರು ಶಕ್ತಿ ಮಸೂದೆಗೆ ಒತ್ತಾಯಿಸಿದ್ದಾರೆ. ಒಂದು ವೇಳೆ ತಮ್ಮ ಸರ್ಕಾರ ಅಧಿಕಾರದಲ್ಲಿರುತ್ತಿದ್ದರೆ ತಾವು ಈ ಮಸೂದೆ ಅಂಗೀಕರಿಸುತ್ತಿದ್ದೆವು ಎಂದು ಠಾಕ್ರೆ ಹೇಳಿದ್ದಾರೆ. ಶಕ್ತಿ ಮಸೂದೆಯನ್ನು ಅಂಗೀಕರಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅವರ ಸರ್ಕಾರವನ್ನು ಉರುಳಿಸಿದವರು ಮತ್ತು ಈಗ ಅಧಿಕಾರದಲ್ಲಿರುವವರ ಜವಾಬ್ದಾರಿಯಾಗಿದೆ ಎಂದಿದ್ದಾರೆ ಅವರು.
ಕಳೆದ ವಾರ, ಬದ್ಲಾಪುರದ ಶಾಲೆಯೊಂದರಲ್ಲಿ ಶಿಶುವಿಹಾರದ ಇಬ್ಬರು ಬಾಲಕಿಯರ ಮೇಲೆ ಅಲ್ಲಿನ ಅಟೆಂಡರ್ ಲೈಂಗಿಕ ದೌರ್ಜನ್ಯ ಎಸಗಿದ್ದ. ಮಕ್ಕಳು ತಮ್ಮ ಪೋಷಕರಲ್ಲಿ ಈ ವಿಷಯ ಹೇಳಿದ ನಂತರ ಎಫ್ಐಆರ್ ದಾಖಲಿಸಲಾಗಿದೆ. ಬದ್ಲಾಪುರದ ಶಾಲೆಯ ನೂರಾರು ಪೋಷಕರು ಇಂದು(ಮಂಗಳವಾರ) ಬೆಳಗ್ಗೆಯಿಂದ ಬದ್ಲಾಪುರ ರೈಲು ನಿಲ್ದಾಣದಲ್ಲಿ ‘ರೈಲ್ ರೋಕೋ’ ಪ್ರತಿಭಟನೆ ನಡೆಸುತ್ತಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದು, ಉಪನಗರ ರೈಲುಗಳ ಸಂಚಾರಕ್ಕೆ ಅಡ್ಡಿಯಾಗಿದೆ.
ಶಾಲೆಯ ಪ್ರಾಂಶುಪಾಲರು, ತರಗತಿ ಶಿಕ್ಷಕರು ಮತ್ತು ಇಬ್ಬರು ಸಹಾಯಕರನ್ನು ಅಮಾನತುಗೊಳಿಸಲಾಗಿದೆ ಎಂದು ಮಹಾರಾಷ್ಟ್ರ ಸಚಿವ ದೀಪಕ್ ಕೇಸರ್ಕರ್ ಹೇಳಿದ್ದಾರೆ. “ನಮ್ಮ ಶಿಕ್ಷಣ ಅಧಿಕಾರಿಯಿಂದ ನಾನು ಯಾವುದೇ ವರದಿಯನ್ನು ಸ್ವೀಕರಿಸಿದ್ದರೂ, ಘಟನೆಯು ಆಗಸ್ಟ್ 13 ರಿಂದ ಆಗಸ್ಟ್ 16 ರ ನಡುವೆ ಸಂಭವಿಸಿದೆ. ಆಗಸ್ಟ್ 18 ರಂದು ದೂರು ದಾಖಲಿಸಲಾಗಿದೆ. ಸುಮಾರು 8-12 ಗಂಟೆಗಳ ಕಾಲ, ಸ್ಥಳೀಯ ಪೋಲೀಸ್ ಠಾಣೆಗೆ ಇದು ಗೊತ್ತಾಗಿಲ್ಲ ಎಂದು ಕೇಸರ್ಕರ್ ಹೇಳಿದ್ದಾರೆ.
“ನಾನು ಆಘಾತಕ್ಕೊಳಗಾಗಿದ್ದೇನೆ, ದುಃಖಿತನಾಗಿದ್ದೇನೆ, ಆಕ್ರೋಶಗೊಂಡಿದ್ದೇನೆ ಮತ್ತು ತುಂಬಾ ಗೊಂದಲಕ್ಕೊಳಗಾಗಿದ್ದೇನೆ. ಮಹಿಳೆಯರಿಗೆ ಸಾಮಾನ್ಯವಾಗಿ ನಿರ್ದಿಷ್ಟ ಸಮಯದಲ್ಲಿ ಮಾತ್ರ ಹೊರಗೆ ಹೋಗಬೇಕೆಂದು ಹೇಳಲಾಗುತ್ತದೆ. ಇಂಥದ್ದೇ ಬಟ್ಟೆ ಧರಿಸಿ ಎಂದು ಹೇಳಲಾಗುತ್ತದೆ. ಏನೇ ಮಾಡಿದರೂ ಅದು ಮಹಿಳೆಯದ್ದೇ ತಪ್ಪು ಎಂದು ಹೇಳಲಾಗುತ್ತದೆ. ಈ ಮಕ್ಕಳಿಗೆ ಬರೀ ನಾಲ್ಕು ವರ್ಷ. ಮಕ್ಕಳು ಸುರಕ್ಷಿತರಾಗಿರುವ ಮನೆಯ ಹೊರಗಿನ ಸ್ಥಳ, ಅದು ಶಾಲೆ ಎಂದು ಪ್ರತಿಯೊಬ್ಬ ಪೋಷಕರು ನಂಬುತ್ತಾರೆ ”ಎಂದು ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ಎನ್‌ಸಿಪಿ (ಶರದ್ ಪವಾರ್) ನಾಯಕ ಅನಿಲ್ ದೇಶಮುಖ್ ಮಾತನಾಡಿ, ಚಿಕ್ಕ ಹುಡುಗಿಯರು ಶಾಲೆಗಳಲ್ಲಿ ವಾಶ್‌ರೂಮ್‌ಗೆ ಹೋದಾಗ, ಅವರೊಂದಿಗೆ ಒಬ್ಬರು ಇರಬೇಕು. ಮಕ್ಕಳಿಗೆ ಯಾವ ಸೌಲಭ್ಯಗಳು ಲಭ್ಯವಿವೆ ಎಂದು ನಾವು ತಿಳಿದುಕೊಳ್ಳಲು ಬಯಸುತ್ತೇವೆ. ಈ ಎಲ್ಲದರ ಬಗ್ಗೆ ರಾಜ್ಯ ಸರ್ಕಾರ ಆದಷ್ಟು ಬೇಗ ತನಿಖೆ ನಡೆಸಬೇಕು. ತನಿಖೆಯ ನಂತರ, ತಪ್ಪಿತಸ್ಥರು ಯಾರೇ ಎಂದು ಕಂಡುಬಂದರೆ ಕಠಿಣ ಕ್ರಮವನ್ನು ಎದುರಿಸಬೇಕಾಗುತ್ತದೆ” ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಬಾರಾಮತಿ ಸಂಸದೆ ಸುಪ್ರಿಯಾ ಸುಳೆ ಅವರು ಈ ವಿಷಯದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಕರೆ ನೀಡಿದ್ದಾರೆ. ಘಟನೆ ನಡೆದು 18 ಗಂಟೆಗಳಾದರೂ ಎಫ್‌ಐಆರ್ ದಾಖಲಿಸದ ಪೊಲೀಸರನ್ನು ಟೀಕಿಸಿದ ಅವರು ರಾಜ್ಯದ ಹೆಣ್ಣು ಮಕ್ಕಳಿಗೆ ಭದ್ರತೆ ಮತ್ತು ನ್ಯಾಯ ಒದಗಿಸುವಲ್ಲಿ ವಿಫಲವಾದರೆ ಸರ್ಕಾರ ರಾಜೀನಾಮೆ ನೀಡಬೇಕು ಎಂದಿದ್ದಾರೆ.