ಬೆಳ್ತಂಗಡಿ ತಾಲೂಕಿನ ಉಜಿರೆ ಸಮೀಪದ ಬೆಳಾಲಿನಲ್ಲಿ ಹಾಡಹಗಲೇ ಮನೆಯ ಅಂಗಳದಲ್ಲಿಯೇ ಶಾಲಾ ನಿವೃತ್ತ ಶಿಕ್ಷಕ ಬಾಲಕೃಷ್ಣ ಭಟ್(83) ರವರನ್ನು ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ ಇದು ಹತ್ತಿರದ ರಕ್ತ ಸಂಬಂಧಿಯಿಂದಲೇ ಹತ್ಯೆ ನಡೆದಿರುವ ಶಂಕೆ ಕೂಡ ವ್ಯಕ್ತವಾಗಿದೆ.
ವೃತ್ತಿಯಲ್ಲಿ ಶಿಕ್ಷಕರಾಗಿದ್ದ ಶ್ರೀ ಬಾಲಕೃಷ್ಣ ಭಟ್ ಅವರು ಕೊಲ್ಪಾಡಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಅವರ ಪತ್ನಿ ಲೀಲಾ ಶಿಕ್ಷಕಿಯಾಗಿದ್ದು ಬೆಳಾಲಿನಲ್ಲಿ ಶಿಕ್ಷಕಿಯಾಗಿ ನಿವೃತ್ತಿ ಹೊಂದಿದ್ದರು. ಕೆಲವು ವರ್ಷಗಳ ಹಿಂದೆ ಅವರು ತೀರಿಕೊಂಡಿದ್ದರು.
ಆಗಸ್ಟ್ 20ರಂದು ಸಂಜೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಬೆಳಾಲಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಇರುವ ಬಾಲಕೃಷ್ಣ ಭಟ್ ಅವರ ಮನೆಯಲ್ಲಿಯೇ ಘಟನೆ ನಡೆದಿದೆ. ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.