ಪುತ್ತೂರು: ಪರ್ಲಡ್ಕ ಶಿವಪೇಟೆಯಲ್ಲಿರುವ ವಿವೇಕಾನಂದ ಶಿಶು ಮಂದಿರದ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿಯಿಂದ ನಡೆಯುವ 26ನೇ ವರ್ಷದ ‘ಶ್ರೀಕೃಷ್ಣ ಲೋಕ’ ಕಾರ್ಯಕ್ರಮವು ಆ.26ರಂದು ನಡೆಯಲಿದೆ ಎಂದು ಕೃಷ್ಣಲೋಕ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಹೇಳಿದರು.
ಆ.23ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ಸನಾತನ ಸಂಸ್ಕೃತಿಯ ಪ್ರತಿರೂಪವಾಗಿ ವಿವೇಕಾನಂದ ಶಿಶು ಮಂದಿರದಲ್ಲಿ ಕಳೆದ 25 ವರ್ಷಗಳಿಂದ ಶ್ರೀಕೃಷ್ಣಲೋಕ ಕಾರ್ಯಕ್ರಮದ ಮೂಲಕ ಸಾವಿರಾರು ಮಂದಿ ರಾಧೆ, ಕೃಷ್ಣ, ಯಶೋಧೆ ವೇಷಧಾರಿ ಮಕ್ಕಳೊಂದಿಗೆ ವಿಶೇಷ ಶೋಭಾಯಾತ್ರೆಯ ಮೂಲಕ ಅದ್ದೂರಿಯಾಗಿ ನಡೆಯುತ್ತಾ ಬಂದಿರುತ್ತದೆ. ಈ ವರ್ಷವೂ ಅದ್ದೂರಿಯಾಗಿ ಶ್ರೀಕೃಷ್ಣ ಲೋಕ ಕಾರ್ಯಕ್ರಮ ಸಂಭ್ರಮಿಸಲಿದೆ ಎಂದರು.
ಬೆಳಿಗ್ಗೆ ಶಿಶು ಮಂದಿರದ ಆವರಣದಲ್ಲಿ ಕೃಷ್ಣ, ರಾಧೆ, ಯಶೋಧೆಯರ ನೋಂದಾವಣೆಯು ಪ್ರಾರಂಭಗೊಳ್ಳಲಿದೆ. ನಂತರ ಮಕ್ಕಳಿಂದ ಪ್ರಾರ್ಥನೆ, ಭಜನೆಯೊಂದಿಗೆ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ. ಬಳಿಕ ತೊಟ್ಟಿಲ ಸಂಭ್ರಮದಲ್ಲಿ ಮಗುವಿನ ಅಮ್ಮನಿಗೆ ಆರತಿ ಬೆಳಗಿ ಬಾಗಿನ ನೀಡಲಾಗುವುದು. ನಂತರ ಆರು ತಿಂಗಳ ಮಗುವನ್ನು ತೊಟ್ಟಿಲಲ್ಲಿ ತೂಗುವ ಸಂಭ್ರಮವು ನಡೆಯಲಿದೆ. ಮಾತೆಯರು ಬಾಲಕೃಷ್ಣನಿಗೆ ಬೆಣ್ಣೆ ತಿನ್ನಿಸಿ, ಜೋಗುಳ ಹಾಡಲಿದ್ದಾರೆ.
ಪ್ರತಿ ವರ್ಷದಂತೆ ಶಿಶು ಮಂದಿರದ ಆವರಣದಿಂದ ರಾಧೆ-ಕೃಷ್ಣ ಭವ್ಯ ಶೋಭಾಯಾತ್ರೆಯು ಬೆಳಿಗ್ಗೆ 10 ಗಂಟೆಗೆ ಪ್ರಾರಂಭಗೊಳ್ಳಲಿದೆ. ಶೋಭಾಯಾತ್ರೆಯು ಪರ್ಲಡ್ಕ ಶಿವಪೇಟೆ ವಿವೇಕಾನಂದ ಶಿಶು ಮಂದಿರದ ಬಳಿಯಿಂದ ಹೊರಟು ಮಹಮ್ಮಾಯಿ ದೇವಸ್ಥಾನ ರಸ್ತೆಯಾಗಿ, ಮುಖ್ಯರಸ್ತೆಯ ಮೂಲಕ ಸಾಗಿ ಪ್ರಧಾನ ಅಂಚೆ ಕಚೇರಿ ಮುಂಭಾಗದಿಂದಾಗಿ ಮಹಾಲಿಂಗೇಶ್ವರ ದೇವಸ್ಥಾನದ ರಥ ಬೀದಿಯಲ್ಲಿ ಸಮಾಪನಗೊಳ್ಳಲಿದೆ. ರಾಧೆ-ಕೃಷ್ಣರ ವೇಷಧಾರಿ ಸಾವಿರಾರು ಪುಟಾಣಿಗಳು ಶೋಭಾಯಾತ್ರೆಯಲ್ಲಿ ಮೆರುಗು ತರಲಿದೆ. ಪುಟಾಣಿಗಳ ತಾಯಂದಿರು ಸಾಂಪ್ರದಾಯಿಕ ಉಡುಗೆಯೊಂದಿಗೆ ಭಾಗವಹಿಸುವ ಮೂಲಕ ಸನಾತನ ಹಿಂದೂ ಧರ್ಮದ ಆಚರಣೆಯನ್ನು ಎತ್ತಿ ಹಿಡಿಯಲಿದೆ ಎಂದರು.
ಶೋಭಾಯಾತ್ರೆ ಸಂಪನ್ನಗೊಂಡ ಬಳಿಕ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ನವೀನ್ ಭಂಡಾರಿ ಉದ್ಘಾಟಿಸಲಿದ್ದಾರೆ. ಬೆಳ್ಳಾರೆಯ ಉದ್ಯಮಿ ಜಿ.ಮಿಥುನ್ ಶೆಣೈ ಅಧ್ಯಕ್ಷತೆ ವಹಿಸಲಿದ್ದಾರೆ. ಉಪ್ಲೇರಿ ಶ್ರೀ ಮಂತ್ರಮೂರ್ತಿ ಗುಳಿಗ ಸನ್ನಿಧಿಯ ಪ್ರಧಾನ ಕರ್ಮಿ ಗೋಪಾಲಕೃಷ್ಣ ಕುಲಾಲ್ ವಾಂತಿಜಾಲ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಮಣಿಪಾಲದ ಉಡುಪಿ ಸಮೂಹ ಶಿಕ್ಷಣ ಸಂಸ್ಥೆಗಳ ಸಹ ಪ್ರಾಧ್ಯಾಪಕಿ ಅರ್ಪಿತಾ ಪ್ರಶಾಂತ್ ಶೆಟ್ಟಿ ಕಟಪಾಡಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ಸಂತೋಷ್ ಕುಮಾರ್ ತಿಳಿಸಿದರು.
ಈ ಬಾರಿಯ ಶ್ರೀಕೃಷ್ಣಲೋಕದಲ್ಲಿ ಸುಮಾರು 1500ಮಂದಿ ರಾಧೆ-ಕೃಷ್ಣ-ಯಶೋಧೆ ವೇಷಧಾರಿ ಮಕ್ಕಳು ಭಾಗವಹಿಸುವ ನಿರೀಕ್ಷೆಯಿದೆ. ಇದು ಸ್ಪರ್ಧೆಯಲ್ಲ. ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಪ್ರೋತ್ಸಾಹಕ ಬಹುಮಾನ ನೀಡಲಾಗುವುದು. 10 ವರ್ಷದ ಒಳಗಿನ ಮಕ್ಕಳು ಮುಕ್ತವಾಗಿ ಭಾಗವಹಿಸಬಹುದು. ಭಾಗವಹಿಸುವವರು ಶಿಶು ಮಂದಿರದಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಬೆಳ್ಳಿ ಹಬ್ಬ ಸಮಿತಿ ಅಧ್ಯಕ್ಷ ದಾಮೋದರ ಪಾಟಾಳಿ ತಿಳಿಸಿದರು.
ಶ್ರೀಕೃಷ್ಣ ಲೋಕ ಸಮಿತಿಯ ಗೌರವಾಧ್ಯಕ್ಷ ರಾಜಿ ಬಲರಾಮ ಆಚಾರ್, ಶ್ರೀಕೃಷ್ಣ ಲೋಕ ಸಮಿತಿ ಉಪಾಧ್ಯಕ್ಷ ಚಂದ್ರಶೇಖರ, ಹಾಗೂ ಪ್ರಧಾನ ಕಾರ್ಯದರ್ಶಿ ಮೇಘನಾ ಪಾಣಾಜೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.