ಪತ್ರಕರ್ತರಿಗೆ ಪೂರ್ವ ತಯಾರಿ ಬಹು ಮುಖ್ಯ: ಪತ್ರಕರ್ತ ಅಶೋಕ್ ಕುಮಾರ್
ವಿವೇಕಾನಂದ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ವಿಚಾರ ಸಂವಾದ ಕಾರ್ಯಕ್ರಮ*
ಪುತ್ತೂರು: ಪತ್ರಿಕೋದ್ಯಮ ಎನ್ನುವುದು ಬಹಳ ವಿಶಾಲವಾದ ಕ್ಷೇತ್ರ. ಇಲ್ಲಿ ನಾವು ಕಲಿಯಬೇಕಾದ ವಿಷಯಗಳು ಹಲವಾರು ಇವೆ. ಮಾಧ್ಯಮ ಕ್ಷೇತ್ರದಲ್ಲಿ ಯಾವ ರೀತಿಯಾಗಿ ನಾವು ಮುಂದುವರೆಯಬೇಕು ಎಂದು ವಿದ್ಯಾರ್ಥಿ ಜೀವನದಲ್ಲಿಯೇ ನಿರ್ಧರಿಸಿ ಅದಕ್ಕೆ ಪೂರ್ವ ತಯಾರಿಯನ್ನು ಈ ಸಂದರ್ಭದಲ್ಲಿಯೇ ಮಾಡಿಕೊಳ್ಳಬೇಕು. ಇಲ್ಲಿ ಸತ್ಯಾಸತ್ಯತೆಗಳನ್ನು ಸರಿಯಾಗಿ ಪರಿಶೀಲಿಸಿ ಕಾರ್ಯನಿರ್ವಹಿಸುವುದು ಬಹುಮುಖ್ಯ. ಓರ್ವ ಸಮರ್ಥ ಪತ್ರಕರ್ತನಾಗಬೇಕಾದರೆ ಆತ ಒಳ್ಳೆಯ ಮಾತುಗಾರಿಕೆಯ ಕೌಶಲ್ಯವನ್ನು ಹೊಂದಿರಬೇಕು ಎಂದು ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಮಂಗಳೂರಿನ ಟಿವಿ9 ವಾಹಿನಿಯ ವರದಿಗಾರ ಅಶೋಕ್ ಕುಮಾರ್ ಹೇಳಿದರು.
ಇವರು ಪುತ್ತೂರಿನ ವಿವೇಕಾನಂದ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)ದ ಪತ್ರಿಕೋದ್ಯಮ ವಿಭಾಗದ ವತಿಯಿಂದ ಆಯೋಜಿಸಿದ ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗಾಗಿ ನಡೆಸಿದ ವಿಚಾರ ಸಂವಾದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಪತ್ರಿಕೋದ್ಯಮದಲ್ಲಿ ವರದಿಗಾರಿಕೆ ಎನ್ನುವುದು ಒಂದು ಸವಾಲಿನ ಕೆಲಸ. ಅದನ್ನು ಪತ್ರಕರ್ತರು ಅತ್ಯಂತ ಶ್ರದ್ಧೆಯಿಂದ ನಿರ್ವಹಿಸಬೇಕು ಹಾಗೂ ವರದಿಗಾರಿಕೆಯಲ್ಲಿ ತೊಡಗಿಸಿಕೊಳ್ಳುವವರು ಸಾಮಾನ್ಯ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಹಾಗೂ ಪತ್ರಕರ್ತರು ಮಾಧ್ಯಮದ ನೀತಿ ಸಂಹಿತೆಗಳನ್ನು ತಿಳಿದುಕೊಂಡು ಕಾರ್ಯ ನಿರ್ವಹಿಸಿದರೆ ಉತ್ತಮ ಎಂದು ವಿದ್ಯಾರ್ಥೀಗಳಿಗೆ ಸಲಹೆಯನ್ನು ನೀಡಿದರು.
ವೇದಿಕೆಯಲ್ಲಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಹವ್ಯಶ್ರೀ ಪಿ.ಕೆ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ಭವ್ಯ ಪಿ.ಆರ್ ನಿಡ್ಪಳ್ಳಿ ನಿರ್ವಹಿಸಿದರು.