“ನನಗೆ ಕಿರುಕುಳ ನೀಡಿದ್ದರಿಂದ ಮಲಯಾಳಂ ಚಿತ್ರರಂಗ ತೊರೆದು, ಚೆನ್ನೈಗೆ ತೆರಳಿದ್ದೆ” ಎಂದು ಹೇಳಿರುವ ನಟಿ ಮಿನು ಮುನೀರ್ ಅವರು, ನಟ ಜಯಸೂರ್ಯ ಸೇರಿದಂತೆ ಹಲವಾರು ಮಲಯಾಳಂ ಚಿತ್ರರಂಗದ ನಟರುಗಳ ಮೇಲೆ ಲೈಂಗಿಕ ದೌರ್ಜನ್ಯದ ಗಂಭೀರ ಆರೋಪ ಮಾಡಿದ್ದಾರೆ.
ಮಲಯಾಳಂ ಚಿತ್ರರಂಗದಲ್ಲಿ ಹೆಣ್ಣುಮಕ್ಕಳ ಮೇಲೆ ಲೈಂಗಿಕ ಕಿರುಕುಳ ನಡೆಯುತ್ತಿರುವ ಬಗ್ಗೆ ಹಲವಾರು ಕಲಾವಿದರು ಹೇಳಿಕೊಂಡಿದ್ದಾರೆ. ಕೇರಳ ಸರ್ಕಾರಕ್ಕೆ ನ್ಯಾಯಮೂರ್ತಿ ಕೆ. ಹೇಮಾ ಸಮಿತಿ ವರದಿ ನೀಡಲಾಗಿದೆ. ಇದಾದ ಬಳಿಕ ತನಿಖೆ ನಡೆಸಲು ಕೇರಳ ಸರ್ಕಾರ ವಿಶೇಷ ತನಿಖಾ ತಂಡವನ್ನು ರಚಿಸಿದೆ. ಈ ಬೆನ್ನಲ್ಲೇ ನಟಿ ಮಿನು ಮುನೀರ್ ಗಂಭೀರ ಆರೋಪ ಮಾಡಿದ್ದಾರೆ.
‘ನನ್ನ ಮೊದಲ ಚಿತ್ರ ‘ಡಿ ಇಂಗೋಟ್ ನೋಕ್ಕಿ’ ಸೆಟ್‌ನಲ್ಲಿ ನಟ ಜಯಸೂರ್ಯ ಅನುಚಿತವಾಗಿ ವರ್ತಿಸಿದ್ದರು. ನಟ ಮುಖೇಶ್ ಮತ್ತು ಇತರ ಪ್ರಮುಖ ನಟರು ಕೂಡಾ ಎಂದು ನಟಿ ಮಿನು ಮುನೀರ್ ಬಹಿರಂಗ ಆರೋಪ ಮಾಡಿದ್ದಾರೆ. ನಟ ಮುಖೇಶ್ ಅವರಲ್ಲದೆ, ಜಯಸೂರ್ಯ, ಮಣಿಯನಪಿಳ್ಳ ರಾಜು, ಎಡವೇಳಾ ಬಾಬು, ಚಂದ್ರಶೇಖರನ್ ಮತ್ತಿತರಿಂದ ದೈಹಿಕ ಮತ್ತು ಮಾನಸಿಕ ಹಿಂಸೆಯು 2013ರಲ್ಲಿ ನಡೆದಿತ್ತು ಎಂದು ನಟಿ ಆರೋಪಿಸಿದ್ದಾರೆ. ನನ್ನ ವಿರುದ್ಧ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ‘ಅಮ್ಮ’ ಸಂಘಟನೆಯವರ ಹಿರಿಯರಲ್ಲಿ ತಿಳಿಸಿದಾಗ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂಬ ಗಂಭೀರ ಆರೋಪವನ್ನು ಕೂಡಾ ಮಾಡಿದ್ದಾರೆ.
ಮಲಯಾಳಂ ನಟ ಸಿದ್ದಿಕ್ ವಿರುದ್ಧವೂ ನಟಿ ರೇವತಿ ಸಂಪತ್ ಎಂಬವರು ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ. ಈ ಆರೋಪದ ವಿರುದ್ಧವಾಗಿ ಸೋಮವಾರ ನಟ ಸಿದ್ದಿಕ್ ದೂರು ನೀಡಿದ್ದಾರೆ. ವಿಶೇಷ ತನಿಖಾ ತಂಡ ರಚಿಸಿದ ಸರ್ಕಾರ
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಿರಿಯ ಪೊಲೀಸ್ ಅಧಿಕಾರಿಗಳ ಉನ್ನತ ಮಟ್ಟದ ಸಭೆ ನಡೆಸಿದ ನಂತರ, ಏಳು ಸದಸ್ಯರು ಇರುವ ತಂಡವನ್ನು ಕೇರಳ ಸರ್ಕಾರ ರಚಿಸಿದೆ. ಐಜಿ ಸ್ಪರ್ಜನ್ ಕುಮಾರ್ ನೇತೃತ್ವದ ವಿಶೇಷ ತಂಡದಲ್ಲಿ ನಾಲ್ವರು ಹಿರಿಯ ಮಹಿಳಾ ಐಪಿಎಸ್ ಅಧಿಕಾರಿಗಳು ಇರಲಿದ್ದಾರೆ.
ಕ್ರೈಂ ಬ್ರಾಂಚ್ ಎಡಿಜಿಪಿ ಎಚ್.ವೆಂಕಟೇಶ್ ತಂಡದ ಕಾರ್ಯನಿರ್ವಹಣೆಯನ್ನು ನೋಡಿಕೊಳ್ಳಲಿದ್ದಾರೆ ಎಂದು ಸಿಎಂ ಕಾರ್ಯಾಲಯ ತಿಳಿಸಿದೆ.
2017ರಲ್ಲಿ ಮಲಯಾಳಂ ಚಿತ್ರರಂಗದಲ್ಲಿ ಪ್ರಮುಖ ನಟಿಯೊಬ್ಬರ ಲೈಂಗಿಕ ದೌರ್ಜನ್ಯದ ನಂತರ, ಕೇರಳ ಸರಕಾರವು ನಿವೃತ್ತ ನ್ಯಾಯಮೂರ್ತಿ ಕೆ ಹೇಮಾ ಸಮಿತಿಯನ್ನು ನೇಮಿಸಿತ್ತು. ಈ ಸಮಿತಿ ವರದಿಯು ಮಲಯಾಳಂ ಚಿತ್ರರಂಗದಲ್ಲಿ ಕೆಲಸ ಮಾಡುವ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಹಿರಂಗಪಡಿಸಿದೆ.