ನಾಗಮಂಗಲದಲ್ಲಿ ಗಣೇಶ ವಿಸರ್ಜನೆಯ ವೇಳೆ ನಡೆದಿರುವ ಕಲ್ಲುತೂರಾಟವು ಸಮಾಜದ ಶಾಂತಿ, ನೆಮ್ಮದಿಗೆ ಧಕ್ಕೆತರುವ ಕಿಡಿಗೇಡಿಗಳ ದುಷ್ಕೃತ್ಯ ಎನ್ನುವುದು ನಿಸ್ಸಂಶಯ. ಆರೋಪಿಗಳು ಯಾವುದೇ ಧರ್ಮದವರಾಗಿರಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಬೆಂಗಳೂರು, ಸೆ.12: ಮಂಡ್ಯ ಜಿಲ್ಲೆಯ ನಾಗಮಂಗಲದ ಬದರಿಕೊಪ್ಪಲಿನಲ್ಲಿ ನಿನ್ನೆ(ಸೆ.11) ರಾತ್ರಿ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದು, ‘ ನಾಗಮಂಗಲದಲ್ಲಿ ಗಣೇಶ ವಿಸರ್ಜನೆಯ ವೇಳೆ ನಡೆದಿರುವ ಕಲ್ಲುತೂರಾಟವು ಸಮಾಜದ ಶಾಂತಿ, ನೆಮ್ಮದಿಗೆ ಧಕ್ಕೆತರುವ ಕಿಡಿಗೇಡಿಗಳ ದುಷ್ಕೃತ್ಯ ಎನ್ನುವುದು ನಿಸ್ಸಂಶಯ.
ಆರೋಪಿಗಳು ಯಾವುದೇ ಧರ್ಮದವರಾಗಿರಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆಜೊತೆಗೆ ಈ ಘಟನೆಯನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ ಈ ಸಂಬಂಧ ಈಗಾಗಲೇ 50ಕ್ಕೂ ಅಧಿಕ ಜನರನ್ನು ಬಂಧಿಸಲಾಗಿದ್ದು, ಸಮಾಜದ ಶಾಂತಿ, ಸುವ್ಯವಸ್ಥೆ ಕಾಪಾಡುವುದೇ ನಮ್ಮ ಮೊದಲ ಆದ್ಯತೆಯಾಗಿದೆ. ಕಳೆದ ಒಂದೂವರೆ ವರ್ಷಗಳಿಂದ ಯಾವುದೇ ಗಲಭೆ, ಗಲಾಟೆ, ಹಿಂಸಾಚಾರಗಳು ನಡೆಯದೆ ಸರ್ವಜನಾಂಗದ ಶಾಂತಿಯ ತೋಟದಂತಿದ್ದ ನಾಡನ್ನು, ಧಾರ್ಮಿಕ ನೆಲೆಗಟ್ಟಿನಲ್ಲಿ ವಿಭಜಿಸಲು ಯತ್ನಿಸುವ ದುರುಳರು ಯಾವುದೇ ಜಾತಿ, ಧರ್ಮದವರಾಗಿರಲಿ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು.
ಸಾರ್ವಜನಿಕರು ಪ್ರಚೋದನೆಗಳಿಗೆ ಒಳಗಾಗದೆ ಶಾಂತಿ, ಸಂಯಮ ಕಾಪಾಡಿಕೊಳ್ಳುವ ಮೂಲಕ ನಮ್ಮೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
150 ಜನರ ವಿರುದ್ಧ FIR ದಾಖಲಿಸಿದ ಪೊಲೀಸರು
ಇನ್ನು ಈಗಾಗಲೇ ಘಟನೆ ಹಿನ್ನಲೆ BNS 2023ರ ಅಡಿಯಲ್ಲಿ ಕರ್ತವ್ಯ ನಿರತ ಪಿಎಸ್ಐ B.J.ರವಿ ದೂರು ಆಧರಿಸಿ ಪ್ರಕರಣವನ್ನು ದಾಖಲು ಮಾಡಿರುವ ಪೊಲೀಸರು, 109, 115(2), 118(1), 121(1), 132, 189(2), 189(3), 189(4), 190,191(1), 191(2), 191(3), 324(4),324(5),326(F),326(G) ಅಡಿಯಲ್ಲಿ 150 ಜನರ ವಿರುದ್ದ ಕೇಸ್ ದಾಖಲು ಮಾಡಲಾಗಿದೆ.