ಮಂಗಳೂರು: ಕಾಂಗ್ರೆಸ್ ಎಂಎಲ್ಸಿ ಐವನ್ ಡಿಸೋಜಾಗೆ ದುಬಾರಿ ಕಚೇರಿ, ತೆರಿಗೆ ಹಣ ದುಂದುವೆಚ್ಚಕ್ಕೆ ಸಾರ್ವಜನಿಕರ ಆಕ್ರೋಶ
ತೆರಿಗೆ ಹಣವನ್ನು ಜನಪ್ರತಿನಿಧಿಯೊಬ್ಬರ ಸರ್ಕಾರಿ ಕಚೇರಿಗಾಗಿ ದುಂದುವೆಚ್ಚ ಮಾಡುತ್ತಿರುವ ಆರೋಪ ಕೇಳಿಬಂದಿದೆ. ನೂತನವಾಗಿ ಆಯ್ಕೆಯಾದ ಕಾಂಗ್ರೆಸ್ ಎಂಎಲ್ಸಿ ಐವನ್ ಡಿಸೋಜಾಗಾಗಿ ಅರ್ಧ ಕೋಟಿ ರೂ. ವೆಚ್ಚದಲ್ಲಿ ಕಚೇರಿ ನಿರ್ಮಾಣ ಮಾಡುತ್ತಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ
ಮಂಗಳೂರು, ಸೆಪ್ಟೆಂಬರ್ 20: ಇತ್ತೀಚೆಗೆ ಕಾಂಗ್ರೆಸ್‌ನಿಂದ ಐವನ್ ಡಿಸೋಜಾ ಅವರನ್ನು ಎಂಎಲ್ಸಿಯಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಅವರಿಗಾಗಿ ನೂತನವಾಗಿ ನಿರ್ಮಿಸುತ್ತಿರುವ ಸರ್ಕಾರಿ ಕಚೇರಿ ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ. ಮಂಗಳೂರಿನ ಲಾಲ್‌ಬಾಗ್ ಬಳಿ ಇರುವ ಮಹಾನಗರ ಪಾಲಿಕೆಯ ಸಂಕೀರ್ಣದಲ್ಲಿ ನೂತನ ಕಚೇರಿಯ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಆದರೆ ಈ ಕಚೇರಿಗಾಗಿ ಸುಮಾರು 55 ಲಕ್ಷ ರೂಪಾಯಿ ಹಣವನ್ನು ಖರ್ಚು ಮಾಡಲಾಗುತ್ತಿದ್ದು ಜನರ, ಸಾಮಾಜಿಕ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.
ನೂತನ ಕಚೇರಿ ಐದು ಚೇಂಬರ್‌ಗಳನ್ನು ಹೊಂದಿರಲಿದ್ದು ಈಗಾಗಲೇ ಇಂಟೀರಿಯರ್ ವರ್ಕ್ ನಡೆಯುತ್ತಿದೆ. ಒಳಭಾಗಕ್ಕೆ ಯಾರು ಸಹ ಹೋಗದಂತೆ ಟಾರ್ಪಲ್ ಅಳವಡಿಸಲಾಗಿದೆ. ಒಳಭಾಗದಲ್ಲಿ ಭರದಿಂದ ನೂತನ ಕಚೇರಿಯ ಕೆಲಸ ನಡೆಯುತ್ತಿದೆ.
ಐವನ್ ಕಚೇರಿಗಾಗಿ ಆರೋಗ್ಯ ಇಲಾಖೆ ಕಚೇರಿ ಸ್ಥಳಾಂತರ
ಐವನ್ ಡಿಸೋಜಾ ಅವರಿಗಾಗಿ ನಿರ್ಮಿಸುತ್ತಿರುವ ಈ ಕಚೇರಿ ಇದ್ದ ಜಾಗದಲ್ಲಿ ಮೊದಲು ಪಾಲಿಕೆಯ ಆರೋಗ್ಯ ಇಲಾಖೆ ವಿಭಾಗ ಕಾರ್ಯ ನಿರ್ವಹಿಸುತ್ತಿತ್ತು. ಸುಮಾರು ಹದಿನೈದಕ್ಕೂ ಹೆಚ್ಚು ಆರೋಗ್ಯ ವಿಭಾಗದ ಅಧಿಕಾರಿ ಸಿಬ್ಬಂದಿಗಳು ಈ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಇದೀಗ ಐವನ್ ಡಿಸೋಜಾ ಅವರ ಕಚೇರಿ ನಿರ್ಮಾಣಕ್ಕಾಗಿ ಇಲ್ಲಿದ್ದ ಆರೋಗ್ಯ ಇಲಾಖೆ ವಿಭಾಗವನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಲಾಗಿದೆ. ಸ್ಥಳಾಂತರವಾದ ಸ್ಥಳದಲ್ಲಿ ಇಕ್ಕಟ್ಟು ಇರುವುದರಿಂದ ಅಧಿಕಾರಿ ಸಿಬ್ಬಂದಿ ಕಷ್ಟ ಪಡುವಂತಾಗಿದೆ.
ಪಾಲಿಕೆ ಕಚೇರಿಯಲ್ಲೇ ಕಡತ ಇಡಲೂ ಇಲ್ಲ ಸಾಕಷ್ಟು ಜಾಗ!
ಪಾಲಿಕೆ ಕಚೇರಿಯಲ್ಲಿಯೇ ಕಡತಗಳನ್ನು ಇಡುವುದಕ್ಕೂ ಸಾಕಷ್ಟು ಜಾಗ ಇಲ್ಲದಂತಹ ಪರಿಸ್ಥಿತಿ ಇರುವಾಗ ಎಂಎಲ್ಸಿಗೆ 55 ರೂಪಾಯಿ ಲಕ್ಷ ವೆಚ್ಚದಲ್ಲಿ ಇಷ್ಟು ದೊಡ್ಡ ಕಚೇರಿ ಯಾಕೆ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ. ಸ್ವತ ನಗರಾಭಿವೃದ್ದಿ ಸಚಿವರಿಗೂ ಇಷ್ಟು ದೊಡ್ಡದಾದ ಕಚೇರಿ ಇಲ್ಲದಿರುವಾಗ ಐವನ್ ಡಿಸೋಜಾಗೆ ಯಾಕೆ ಎಂದು ಸಾಮಾಜಿಕ ಕಾರ್ಯಕರ್ತ ಹನುಮಂತ ಕಾಮತ್ ಪ್ರಶ್ನಿಸಿದ್ದಾರೆ.
ಈ ಕಚೇರಿ ಎಂಎಲ್ಸಿ ಐವನ್ ಡಿಸೋಜಾಗೆ ಮಾತ್ರವಲ್ಲ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಕೂಡ ಇಲ್ಲಿಂದಲೇ ಕಾರ್ಯ ನಿರ್ವಹಿಸುತ್ತದೆ ಎಂಬುದು ಕಾಂಗ್ರೆಸ್ ನಾಯಕರ ವಾದ. ಒಟ್ಟಿನಲ್ಲಿ ಈ ಕಚೇರಿ ನಿರ್ಮಾಣಕ್ಕಾಗಿ ಪಾಲಿಕೆಯ ಹಣವನ್ನೇ ಬಳಕೆ ಮಾಡುತ್ತಿದ್ದು ಇಂತಹ ಕಚೇರಿಯ ಅವಶ್ಯಕತೆ ಇದೆಯಾ ಎಂಬ ಪ್ರಶ್ನೆ ಜನರಲ್ಲಿ ಮೂಡಿರುವುದು ಸುಳ್ಳಲ್ಲ.