ಬೆಂಗಳೂರು: ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ ವಿಶೇಷ ತನಿಖಾ ತಂಡ ರಚಿಸುವಂತೆ ಒಕ್ಕಲಿಗ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶುಕ್ರವಾರ ಮನವಿ ಮಾಡಿದ್ದಾರೆ.
ಕಂದಾಯ ಸಚಿವ ಕೃಷ್ಣ ಬೈರೇಗೌಡ, ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್ ನೇತೃತ್ವದಲ್ಲಿ ತೆರಳಿದ್ದ ನಿಯೋಗ, ಮುನಿರತ್ನ ವಿರುದ್ಧ ಕಮಿಷನ್ ದಂಧೆ, ಅತ್ಯಾಚಾರ, ಹನಿಟ್ರ್ಯಾಪ್, ಎಚ್‌ಐವಿ ಹರಡುವಿಕೆ ಸೇರಿದಂತೆ ವಿವಿಧ ಆರೋಪಗಳು ಇವೆ. ಹಾಗಾಗಿ, ಎಲ್ಲಾ ಪ್ರಕರಣಗಳ ತನಿಖೆಗೆ ಎಸ್‌ಐಟಿ ರಚಿಸಬೇಕು ಎಂದು ಮನವಿ ಮಾಡಿಕೊಂಡರು.
ಈ ಮನವಿಗೆ ಸಿದ್ದರಾಮಯ್ಯ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮುನಿರತ್ನ ಅವರ ವಿರುದ್ಧದ ಪ್ರಕರಣಗಳ ತನಿಖೆಗೆ ಎಸ್‌ಐಟಿ ರಚನೆಗೆ ಮುಂದಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಭೇಟಿಯ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಕೃಷ್ಣ ಬೈರೇಗೌಡ ಅವರು, ಮುನಿರತ್ನ ಒಕ್ಕಲಿಗರನ್ನು ಅವಹೇಳನ ಮಾಡಿದ್ದಾರೆ. ಸಮುದಾಯದ ಮೇಲೆ ದಾಳಿ ನಡೆದಾಗ ಎಲ್ಲರೂ ಎಚ್ಚೆತ್ತುಕೊಂಡು ಖಂಡಿಸಬೇಕು. ರಾಜ್ಯದಲ್ಲಿ ಒಕ್ಕಲಿಗ ಸಮಾಜ ಗೌರವಯುತವಾಗಿ ಬಾಳಿಕೊಂಡು ಬಂದಿದೆ. ವಿನಾಕಾರಣ ಅವಹೇಳನ ಮಾಡುವುದು ಗೌರವಕ್ಕೆ ಚ್ಯುತಿ ತರುತ್ತದೆ ಎಂದು ಹೇಳಿದರು.
ಗುರುವಾ ತಡರಾತ್ರಿವರೆಗೆ ನಗರದ ಖಾಸಗಿ ಹೊಟೇಲ್ನಲ್ಲಿ ಕಾಂಗ್ರೆಸ್ ಒಕ್ಕಲಿಗ ಸಚಿವರು, ಶಾಸಕರು, ನಾಯಕರು ಸಭೆ ನಡೆಸಿ ಮುನಿರತ್ನ ಜಾತಿ ನಿಂದನೆ ಆರೋಪ ಸಂಬಂಧ ಚರ್ಚೆ ನಡೆಸಿದ್ದರು. ಎಸ್‌ಐಟಿ ತನಿಖೆಗೆ ಒತ್ತಾಯಿಸುವ ನಿಟ್ಟಿನಲ್ಲಿ ಸಿಎಂ ಅವರನ್ನು ಭೇಟಿ ಮಾಡಲು ಸಭೆಯಲ್ಲಿ ನಿರ್ಧರಿಸಲಾಗಿತ್ತು.
ಜಾತಿ ನಿಂದನೆ ಸೇರಿದಂತೆ ಯಾವೆಲ್ಲ ಪ್ರಕರಣಗಳು ಮುನಿರತ್ನ ವಿರುದ್ಧ ದಾಖಲಾಗಿವೆಯೋ ಆ ಎಲ್ಲ ಪ್ರಕರಣಗಳ ಕುರಿತು ಎಸ್‌ಐಟಿ ಮೂಲಕ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಲು ತೀರ್ಮಾನಿಸಿತ್ತು. ಸಿಎಂ ಭೇಟಿ ಬಳಿಕ ರಾಜ್ಯಪಾಲರ ಅಂಗಳಕ್ಕೂ ಪ್ರಕರಣವನ್ನು ತೆಗೆದುಕೊಂಡು ಹೋಗಲು ನಿರ್ಧರಿಸಲಾಗಿತ್ತು.