ರಾಜ್ಯದ ಗ್ರಾಮೀಣ ಪತ್ರಕರ್ತರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಗ್ರಾಮೀಣ ಪತ್ರಕರ್ತರಿಗೆ ವೃತ್ತಿಗೆ ಸಂಬಂಧಿ ಚಟುವಟಿಕೆಗಳಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಯಾಣಿಸಲು ಉಚಿತ ಬಸ್ ಪಾಸ್ ವಿತರಣೆಗೆ ಸರ್ಕಾರ ಆದೇಶಿಸಿದೆ.ಪತ್ರಕರ್ತರ ದಶಕಗಳ ಬೇಡಿಕೆಯಾದ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುದ್ರೆ ಒತ್ತಿದ್ದಾರೆ.
ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ವಿದ್ಯುನ್ಮಾನ/ಮುದ್ರಣ ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮೀಣ ಪತ್ರಕರ್ತರಿಗೆ ವೃತ್ತಿ ಸಂಬಂಧಿತ ಚಟುವಟಿಕೆಗಳಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಯಾಣಿಸಲು ಉಚಿತ ಬಸ್ ಪಾಸ್ ಸೌಲಭ್ಯವನ್ನು ಅನುಷ್ಠಾನಗೊಳಿಸುವುದಕ್ಕೆ ಸಂಬಂಧಿಸಿದಂತೆ ದಿನಾಂಕ:21/03/2024ರಲ್ಲಿದ್ದಂತೆ ಮಾಧ್ಯಮ ಪಟ್ಟಿಯಲ್ಲಿರುವ ಮುದ್ರಣ/ವಿದ್ಯುನ್ಮಾನ ಮಾಧ್ಯಮಗಳ ಸಂಖ್ಯೆಯನ್ನಾಧರಿಸಿ, ರಾಜ್ಯಾದ್ಯಂತ ಒಟ್ಟು 5222 ಪತ್ರಕರ್ತರಿಗೆ ಈ ಯೋಜನೆಯನ್ನು ಒದಗಿಸಲು, ಕೆ.ಎಸ್.ಆರ್.ಟಿ.ಸಿ ಸಂಸ್ಥೆಯು ನೀಡಿರುವ ಅಂದಾಜಿನಂತೆ, ಪ್ರತಿ ಪಾಸುದಾರರಿಗೆ ಪ್ರತಿ ತಿಂಗಳಿಗೆ ರೂ.2500/- ಗಳಾಗಬಹುದೆಂದು ವೆಚ್ಚವನ್ನು ಅಂದಾಜಿಸಿಲಾಗಿದೆ ಎಂದು ತಿಳಿಸಲಾಗಿದೆ.
ಸದರಿ ಲೆಕ್ಕಚಾರದಂತೆ ಪ್ರತಿ ತಿಂಗಳಿಗೆ ರೂ. 1,30,55,000/- ಹಾಗೂ ವಾರ್ಷಿಕ ಅಂದಾಜು ಅನುದಾನ ರೂ.15,66,60,000/-ಗಳ ಅವಶ್ಯಕತೆ ಇರುತ್ತದೆ ಎಂದು ಅಂದಾಜಿಸಲಾಗಿದೆ ಎಂದಿದ್ದಾರೆ.ಪತ್ರಿಕೆಗಳ ಸಂಖ್ಯೆ ಹಾಗೂ ವಿದ್ಯುನ್ಮಾನ ವಾಹಿನಿಗಳ ಸಂಖ್ಯೆ ಹೆಚ್ಚಾದಂತೆ ಪತ್ರಕರ್ತರ ಸಂಖ್ಯೆಯೂ ಸಹ ಹೆಚ್ಚಾಗುವುದರಿಂದ ಅಂದಾಜು ವೆಚ್ಚವೂ ಸಹ ಹೆಚ್ಚಾಗುವ ಸಾಧ್ಯತೆ ಇರುವುದಾಗಿ ತಿಳಿಸುತ್ತಾ, ಬೇಕಾಗುವ ಅನುದಾನದ ವಿವರಗಳ ಅಂದಾಜು ವೆಚ್ಚ ಹಾಗೂ ಸದರಿ ಯೋಜನೆಯನ್ನು ಅನುಷ್ಠಾನಗೊಳಿಸಲು ಮಾರ್ಗಸೂಚಿಗಳನ್ನು ಒಳಗೊಂಡ ವಿವರವಾದ ಪಸ್ತಾವನೆಯನ್ನು ಸಲ್ಲಿಸಿ ಯೋಜನೆಯ ಅನುಷ್ಠಾನಕ್ಕೆ ಸರ್ಕಾರದ ಆದೇಶ ಹೊರಡಿಸುವಂತೆ ಆಯುಕ್ತರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರು, ಕೋರಿರುತ್ತಾರೆ ಎಂದು ಹೇಳಿದ್ದಾರೆ.