ಸಾಯಂಕಾಲದ ದೀಪ ಉರಿಸಿ ಮನೆಮಂದಿಯೆಲ್ಲ ಸೇರಿ ಭಜನೆಗೆ ಕೂರುವುದು ಹಿಂದಿನ ಕಾಲದಲ್ಲಿ ಇದ್ದ ವಾಡಿಕೆ. ಈಗೀಗ ಜನರಿಗೆ ಪುರುಸೊತ್ತು ಎನ್ನುವ ಅಮೂಲ್ಯ ಸಂಪತ್ತು ಇಲ್ಲವಾಗಿದೆ. ಹಾಗಾಗಿ ಭಜನೆ, ಭಗವಂತನ ಆರಾಧನೆ ಮಾಡುವುದು ಜನರಿಗೆ ದೊಡ್ಡ ಹೊರೆಯಾಗಿದೆ. ಭಜನೆ, ಸ್ತೋತ್ರ, ಮಂತ್ರಗಳು, ಶ್ಲೋಕಗಳು ಬೇಡವಾಗಿದೆ. ಅದಕ್ಕಾಗಿಯೇ ನೆಮ್ಮದಿಯ ಬದುಕು ಕೂಡಾ ಮರಿಚಿಕೆಯಾಗುತ್ತಿದೆ.
ಭಕ್ತಿಯಿಂದ ನಾವು ಭಗತವಂತನ ಹಾಡುಗಳನ್ನು ಹೇಳಿದರೆ ಭಗವಂತ ಅತ್ಯಂತ ಸಂತೋಷದಿಂದ ಕುಳಿತು ಕೇಳುತ್ತಾನೆ. ನಾವು ಕುಳಿತುಕೊಂಡು ಭಜಿಸಿದರೆ ಭಗವಂತ ನಿಂತು ಕೇಳುತ್ತಾನೆ. ನಿಂತು ಹಾಡಿದರೆ ಭಗವಂತ ಸಂತೋಷಪಟ್ಟು ನಲಿದು ಕುಣಿಯುತ್ತಾನೆ. ಭಗವಂತನನ್ನು ತೃಪ್ತಿಪಡಿಸಲು ಇರುವಂತಹ ಏಕೈಕ ಮಾರ್ಗ ಅದು ಭಜನೆ .
ಭಜನಂ ಎಂಬ ಪದವು ಪೂಜ್ಯಭಾವನೆ ಎಂಬ ಅರ್ಥವನ್ನು ಕೊಡುತ್ತದೆ. ಭಜ್ ಎಂಬ ಮೂಲ ಪದದಿಂದ ಭಜನೆ ಎಂಬ ಪದ ಹುಟ್ಟಿಕೊಂಡಿದೆ. ಇದರರ್ಥ ‘ಭಜ ಗೋವಿಂದಂ’ನಲ್ಲಿರುವಂತೆ ಪೂಜಿಸು ಎಂದು. ಭಜನಾ ಎಂಬ ಪದಕ್ಕೆ ಹಂಚಿಕೆ ಎಂಬ ಅರ್ಥವೂ ಇದೆ. ಭಜನೆ ಕರ್ನಾಟಕದಾದ್ಯಂತ ಕಂಡು ಬರುವ ಒಂದು ಜಾನಪದ ಕಲೆ ಕೂಡಾ ಹೌದು. ಒಂದೊಂದು ಭಾಗದಲ್ಲಿ ಹಾಡುವ ಭಜನೆಗಳ ಹಿನ್ನಲೆ ಹಾಗೂ ಪ್ರಕಾರಗಳಲ್ಲಿ ಸ್ವಲ್ಪ ವ್ಯತ್ಯಾಸವಿದೆ. ವ್ಯಕ್ತಿಗತ ಭಜನೆ ಮತ್ತು ಸಾಮೂಹಿಕ ಭಜನೆ ಎಂಬ ಎರಡು ವಿಧಗಳಲ್ಲಿ ಭಜನೆಯನ್ನು ವಿಭಾಗಿಸಲಾಗಿದೆ. ಒಟ್ಟಾಗಿ ಭಜನೆ ಮೇಳಗಳು ಒಂದಲ್ಲಾ ಒಂದು ರೀತಿಯಲ್ಲಿ ನಾಡಿನ ಉದ್ದಗಲಕ್ಕೂ ವ್ಯಾಪಿಸಿವೆ.
ಭಜನೆ ಎಂಬ ಪದಕ್ಕೆ ವಿಶೇಷ ಅರ್ಥವಿದೆ. ‘ಭ’ ಎಂದರೆ ಭಗವಂತ, ‘ಜ’ ಎಂದರೆ ಜನ್ಮಾಂತರ, ‘ನೆ’ ಎಂದರೆ ನೆನೆಯುವುದು. ಜನ್ಮಜನ್ಮಾಂತರಗಳಿಂದ ಮಾಡಿದ ಪಾಪವನ್ನು ಕಳೆಯಲು ಹಾಗೂ ದೇವರನ್ನು ಒಲಿಸಿಕೊಳ್ಳಲು ಭಗವಂತನನ್ನು ಪೂಜಿಸುವುದೇ ಭಜನೆ. ಎಂಥ ಪಾಪ ಮಾಡಿದ್ದರೂ ಭಗವಂತನ ನಾಮ ಸಂಕೀರ್ತನೆಯಿಂದ ಜೀವನದಲ್ಲಿ ನೆಮ್ಮದಿ, ಶಾಂತಿ ಸಿಗುತ್ತದೆ.
ಈ ಆಧುನಿಕ ಕಾಲದಲ್ಲಿ ನಾವು ನೆಮ್ಮದಿಗಾಗಿ ಧ್ಯಾನ ಕೇಂದ್ರಗಳ ಮೊರೆ ಹೋಗುತ್ತಿದ್ದೇವೆ. ವರ್ಷಕ್ಕೆ ಒಂದು ಬಾರಿ ಬರುವ ರಜೆಯ ಸಂಭ್ರಮದಂತೆ ಯೋಗ, ಧ್ಯಾನ ಸ್ತೋತ್ರಗಳು ಕೂಡ ದೈನಂದಿನ ಚಟುವಟಿಕೆಗಳಲ್ಲಿ ಬೇಡವಾಗಿರುವ ಕಾರಣ ಸಾಂದರ್ಭಿಕ ಆಚರಣೆಯಾಗುತ್ತಿದೆ. ಅದೇನೇ ಇರಲಿ ನೆಮ್ಮದಿ ಬೇಕಾದರೆ ಮೂಲವೇ ಪರಿಹಾರ ಎನ್ನುವಂತ ಸತ್ಯ ಈಗಿನವರು ಅರ್ಥ ಮಾಡಿಕೊಳ್ಳಬೇಕಾದ ಸಂಗತಿ.
ನಾನಾ ರೀತಿಯಲ್ಲಿ ದೇವರನ್ನು ಭಜಿಸುವ ಪ್ರಕ್ರಿಯೆಗಳಿವೆ. ಯಜ್ಞ ಯಾಗಾದಿಗಳ ಮೂಲಕವೂ ದೇವರನ್ನು ಒಲಿಸಿಕೊಳ್ಳಬಹುದು.
ಕಲಿಯುಗದಲ್ಲಿ ದೇವರನ್ನು ಒಲಿಸಿಕೊಳ್ಳಲು ಇರುವಂತಹ ಏಕೈಕ ಮಾರ್ಗವೇ ಅದು ಸಂಕೀರ್ತನೆ. ಕೀರ್ತನೆ ಎಂದರೆ ಹಾಡು ಹೇಳುವಾಗ ಭಕ್ತಿ ಇರಬೇಕೆಂದಿಲ್ಲ. ಜನರ ಮನೋರಂಜನೆಗೋಸ್ಕರವೂ ಹಾಡನ್ನು ಹೇಳುವವರು ಇರುತ್ತಾರೆ. ಸಂಕೀರ್ತನೆಯಾಗಬೇಕಾದರೆ ಭಜನೆಯಲ್ಲಿ ಭಕ್ತಿಯೂ ಕೂಡ ಅಡಕವಾಗಿರಬೇಕು. ಭಕ್ತಿಪೂರ್ವಕವಾಗಿ ನಾವು ಭಗವಂತನನ್ನು ಭಜಿಸಬೇಕು. ಆ ಭಜನೆ ಭಗವಂತನ ಒಲುಮೆಗೆ ಪಾತ್ರವಾಗುತ್ತದೆ. ಅದರಲ್ಲೂ ಸಾಮೂಹಿಕವಾದ ಭಜನೆ ದೇವರನ್ನು ಒಲಿಸಕೊಳ್ಳಲು ಒಳ್ಳೆಯ ಶಕ್ತಿ ಹಿಂದೆ ಮನೆಮನೆಯಲ್ಲೂ ಭಜನೆ ಮಾಡುವ ಪದ್ದತಿ ಇತ್ತು.
ಕೂಡುಕುಟುಂಬದ ಸದಸ್ಯರು ಸಾಮೂಹಿಕವಾಗಿ ಭಜನೆ ಮಾಡುತ್ತಿದ್ದರು. ಯಾವಾಗ ಅವಿಭಕ್ತ ಕುಟುಂಬ ಒಡೆದು ವಿಭಕ್ತ ಕುಟುಂಬವಾಗಿ ಬದಲಾಯಿತೊ ಅಲ್ಲಿಂದ ಭಜನೆಯೂ ಮೂಲೆಗುಂಪಾಯಿತು. ಭಜನೆಯನ್ನು ಟಿವಿಯೂ, ಮೊಬೈಲ್ ಎಂಬ ಮಾಯಾವಿ ಸೇರಿ ನುಂಗಿ ಹಾಕಿತು ಎನ್ನುವುದು ಖೇದಕರ. ಭಜನೆಗೆ ಗಟ್ಟಿ ಹೃದಯವನ್ನೂ ಕರಗಿಸುವ ಸಾಮರ್ಥ್ಯ ಇದೆ. ನಾಸ್ತಿಕರನ್ನು ಆಸ್ತಿಕರನ್ನಾಗಿ ಮಾಡಿರುವ ಉದಾಹರಣೆಗಳಿವೆ. ನಾಸ್ತಿಕರು ಭಗವಂತನ ಕಡೆ ವಾಲುವುದಕ್ಕೆ ಭಜನೆ ಸೇತುವೆಯಾಗಿದೆ. ಹೀಗಾಗಿ ಮನೆಮನೆಗಳನ್ನೂ ಭಜನೆಯನ್ನು ಮಾಡಬೇಕು ತನ್ಮೂಲಕ ಭಗವಂತನ ಅನುಗ್ರಹ ಪಡೆಯಬೇಕು.
ವಿಸ್ಮಯ