ಬಂಟ್ವಾಳ : ಬಂಟ್ವಾಳ ತಾಲೂಕಿನ ತುಂಬೆ, ಮಾರಿ ಪಲ್ಲ ಭಾಗದ ನೇತ್ರಾವತಿ ನದಿಯಲ್ಲಿ ಬೋಟ್ ಮೂಲಕ ನಡೆಸುತ್ತಿದ್ದ ಅಕ್ರಮ ಮರಳು ಅಡ್ಡೆಗೆ ದ. ಕ. ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಬಂಟ್ವಾಳ ಕಂದಾಯ ಇಲಾಖೆ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಒಟ್ಟಿಗೆ 20 ಬೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿಯ ವೇಳೆ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಕಾರ್ಮಿಕರು ಸ್ಥಳದಿಂದ ಪಲಾಯನಗೈದಿದ್ದಾರೆ.
ವಶಪಡಿಸಿಕೊಂಡ ದೋಣಿಗಳನ್ನು ಐದು ತಂಡಗಳ ಮೂಲಕ ನದಿಯಲ್ಲೇ ಮಂಗಳೂರಿನ ಅಡ್ಯಾರ್ ವರೆಗೆ ಸಾಗಿಸಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವಶಕ್ಕೆ ಒಪ್ಪಿಸಲಾಗಿದೆ.
ದಾಳಿಯಾದ ಸಂದರ್ಭ ಬೊಟ್ಗಳಲ್ಲಿ ಮರಳು ಪತ್ತೆಯಾಗಿರಲಿಲ್ಲ. ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿಸಿಕೊಂಡವರು ಯಾರು.? ಮತ್ತು ಬೋಟು ಯಾರಿಗೆ ಸಂಬಂಧಪಟ್ಟಿವೆ ಎಂಬುವುದು ಮುಂದಿನ ತನಿಖೆಯಿಂದ ತಿಳಿದು ಬರಬೇಕಿದೆ.
ಗಣಿ ಇಲಾಖೆಯ ಉಪನಿರ್ದೇಶಕಿ ಕೃಷ್ಣವೇಣಿ, ಬಂಟ್ವಾಳ ತಹಶೀಲ್ದಾರ್ ಅರ್ಚನಾ ಡಿ ಭಟ್, ಮಂಗಳೂರು ತಹಸಿಲ್ದಾರ್ ಪ್ರಶಾಂತ್ ಪಾಟೇಲ್, ಹಿರಿಯ ಭೂ ವಿಜ್ಞಾನಿ ಗಿರೀಶ್ ಮೋಹನ್ , ಭೂ ವಿಜ್ಞಾನಿ ಮಹಾದೇಶ್ವರ, ಬಂಟ್ವಾಳ ಕಂದಾಯ ನಿರೀಕ್ಷಕ ಜನಾರ್ದನ್ ಜೆ, ಗ್ರಾಮಕರಣಿಕರು, ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಬಂಟ್ವಾಳ ಗ್ರಾಮಾಂತರ ಪೊಲೀಸರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು