ಬಿಗ್ ಬಾಸ್ ನ ದುಬಾರಿ ನಿರೂಪಕರು ಪಡೆಯುವ ಸಂಭಾವನೆಗಳ ಪಟ್ಟಿ ಇಲ್ಲಿದ
2006ರಲ್ಲಿ ಪ್ರಾರಂಭವಾದ ಬಿಗ್ ಬಾಸ್ ರಿಯಾಲಿಟಿ ಶೋ ಹಿಂದಿಯಲ್ಲಿ ತನ್ನ ಮೊದಲ ಪ್ರದರ್ಶನವನ್ನು ಶುರು ಮಾಡಿತ್ತು. ಇದೀಗ ಕನ್ನಡ ತಮಿಳು ತೆಲುಗು ಮಲಯಾಳಂ ಮರಾಠಿ ಸೇರಿದಂತೆ ವಿವಿಧ ಭಾರತೀಯ ಭಾಷೆಗಳಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿರುವ ಟೆಲಿವಿಷನ್ ಶೋ.
ಒಂದಷ್ಟು ಸ್ಪರ್ಧಿಗಳನ್ನು ಒಂದು ಮನೆಯೊಳಗೆ ಕೂಡಿಹಾಕಿ ಸುಮಾರು ನೂರರ ಆಸು ಪಾಸು ದಿನಗಳ ಕಾಲ ವಿವಿಧ ಟಾಸ್ಕ್ ಗಳ ಮೂಲಕ ಮನರಂಜನೆ ನೀಡುವ ಮಹಾಶೋ. ಈ ರಿಯಾಲಿಟಿ ಶೋ ಯಾವಾಗಲೂ ಸುದ್ದಿಯಲ್ಲಿರುವುದಕ್ಕೆ ಕಾರಣ ಈ ಕಾರ್ಯಕ್ರಮದ ರೂಪುರೇಷೆ ಮತ್ತು ಅದು ಸೃಷ್ಟಿಸುವ ವಿವಾದಗಳು. ಏನೇ ಆಗಲಿ ಬಿಗ್ ಬಾಸ್ ಟೆಲಿವಿಷನ್ ಇಂಡಸ್ಟ್ರಿಯ ಬಿಗ್ ಶೋ ಅನ್ನುವುದರಲ್ಲಿ ಎರಡು ಮಾತಿಲ್ಲ.
ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಬರಿಯ ಸ್ಪರ್ಧಿಗಳು ಮಾತ್ರ ಯಾವಾಗಲೂ ಸುದ್ದಿಯಲ್ಲಿ ಇರುವುದಿಲ್ಲ ಜೊತೆಗೆ ಹೋಸ್ಟ್ಗಳು ಬಹಳ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಸಲ್ಮಾನ್ ಖಾನ್ ಕಮಲ್ ಹಾಸನ್ ನಾಗಾರ್ಜುನ ಅಕ್ಕಿನೇನಿ ಕಿಚ್ಚ ಸುದೀಪ್ ಮೋಹನ್ ಲಾಲ್ ಸೇರಿದಂತೆ ದೊಡ್ಡ ಸ್ಟಾರ್ ನಟರುಗಳು ಈ ಕಾರ್ಯಕ್ರಮದ ನಿರೂಪಣೆಯ ಜವಾಬ್ದಾರಿಯನ್ನು ಹೊತ್ತುಕೊಂಡು ಮುನ್ನಡೆಸುವ ಸಾರಥಿಗಳು. ಇಷ್ಟು ದೊಡ್ಡ ಸ್ಟಾರ್ ನಿರೂಪಕರನ್ನು ಹೊಂದಿರುವ ಈ ಶೋ ಅತ್ಯಂತ ದುಬಾರಿ ಸಂಭಾವನೆಯನ್ನೇ ನಿರೂಪಕರಿಗೂ ಕೊಡುತ್ತದೆ. ಅದಕ್ಕಾಗಿ ನಿರೂಪಣೆಯ ಜವಾಬ್ದಾರಿ ಬರುವ ಸ್ಟಾರ್ ನಟರು ಬುದ್ಧಿವಂತಿಕೆಯ ಜೊತೆಗೆ ಸ್ಮಾರ್ಟ್ ಆಗಿಯೂ ಇರಬೇಕಾಗುತ್ತೆ. ಹಾಗಾದ್ರೆ ಅವರಿಗೆ ಕೊಡ ಮಾಡುವ ಸಂಭಾವನೆ ಎಷ್ಟು ಇರಬಹುದು ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ. ಆ ಕುತೂಹಲಕ್ಕೆ ತೆರೆ ಎಳೆಯಲೆಂದೆ ಎಲ್ಲಾ ಬಿಗ್ ಬಾಸ್ ಹೋಸ್ಟ್‌ಗಳ ಸಂಭಾವನೆಯ ಪಟ್ಟಿ ಇಲ್ಲಿದೆ. ತಮ್ಮ
ತಮ್ಮ ಸ್ಟಾರ್‌ಡಮ್‌ಗೆ ತಕ್ಕಂತೆ, ರಿಯಾಲಿಟಿ ಶೋ ಅನ್ನು ಹೋಸ್ಟ್ ಮಾಡಲು ನಟರು ಸಂಭಾವನೆಯನ್ನು ಸ್ವೀಕರಿಸುತ್ತಾರೆ .
ಸಲ್ಮಾನ್ ಖಾನ್
ಸಲ್ಮಾನ್ ಖಾನ್ ಗಿರುವ ಸ್ಟಾರ್ ಡಮ್ ಎಲ್ಲರಿಗೂ ಗೊತ್ತೇ ಇದೆ. ಊಹಾಪೋಹಗಳ ಪ್ರಕಾರ ಸಲ್ಮಾನ್ ಖಾನ್ ಸಾವಿರ ಕೋಟಿ ರೂಪಾಯಿಗಳನ್ನು ಬಿಗ್ ಬಾಸ್ ನಿರ್ಮಾಪಕರಿಂದ ವಸೂಲಿ ಮಾಡಿದ್ದಾರೆ ಎಂಬ ವದಂತಿ ಹಬ್ಬಿತ್ತು. ಆದರೆ ಇದು ಶುದ್ಧ ಸುಳ್ಳು ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ. ಮೂಲಗಳ ಪ್ರಕಾರ ಹಿಂದಿ ಬಿಗ್ ಬಾಸ್ ಸೀಸನ್ 13ರ ತನಕ ಸಲ್ಮಾನ್ ಖಾನ್ ವಾರಕ್ಕೆ 12 ಕೋಟಿ ಸಂಭಾವನೆ ಪಡೆಯುತ್ತಿದ್ದರು ಆನಂತರ ಪ್ರತಿ ಸಂಚಿಕೆಗೆ 25 ಕೋಟಿ ರೂಪಾಯಿಗಳ ಸಂಭಾವನೆಯನ್ನು ಪಡೆಯಲಾರಂಭಿಸಿದರು ಎಂದು ತಿಳಿದುಬಂದಿದೆ.
ಸೀಸನ್16 ರ ಬಿಗ್ ಬಾಸ್ ಪ್ರತಿ ಸಂಚಿಕೆಗೆ ರೂ 43 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಅವರು ಪ್ರಸ್ತುತ ಬಿಗ್ ಬಾಸ್ OTT 2 ಅನ್ನು ಹೋಸ್ಟ್ ಮಾಡುತ್ತಿದ್ದಾರೆ ಆದರೆ ಅದಕ್ಕಾಗಿ ಅವರ ಶುಲ್ಕವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.
ಕಿಚ್ಚ ಸುದೀಪ್
ಕನ್ನಡದಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಶುರುವಾದದ್ದು 2013ರಲ್ಲಿ. ಅಲ್ಲಿಂದ ಈಚೆಗೆ ಇದೀಗ 11ನೇ ಸೀಸನ್ ನಲ್ಲಿ ಈ ಕಾರ್ಯಕ್ರಮ ಬಂದು ನಿಂತಿದೆ. 11 ಸೀಸನ್ ನಲ್ಲಿಯೂ ಕನ್ನಡ ಬಿಗ್ ಬಾಸ್ ನಲ್ಲಿ ಕಿಚ್ಚ ಸುದೀಪ್ ನದ್ದೇ ಸಾರಥ್ಯ.
2015 ರಲ್ಲಿ ಸುದೀಪ್ ಕಲರ್ಸ್ ಚಾನೆಲ್‌ನೊಂದಿಗೆ ತನ್ನ ಒಪ್ಪಂದಕ್ಕೆ ಸಹಿ ಹಾಕಿದಾಗ, ಮುಂದಿನ 5 ವರ್ಷಗಳವರೆಗೆ ಒಟ್ಟು 20 ಕೋಟಿ ರೂ. ಸಂಭಾವನೆಗೆ ಸಹಿ ಹಾಕಿದ್ದರು. ವರದಿಗಳ ಪ್ರಕಾರ ಕಳೆದ ಸೀಸನ್ ನಿಂದ ಕಿಚ್ಚ ಸುದೀಪ್ ತನ್ನ ಸಂಭಾವನೆಯಲ್ಲಿ ಹೆಚ್ಚಳವನ್ನು ಕಂಡಿದ್ದಾರೆಂದು ತಿಳಿದು ಬಂದಿದೆ.
ಕಮಲ್ ಹಾಸನ್ ಮತ್ತು ವಿಜಯ್ ಸೇತುಪತಿ
ತಮಿಳು ಬಿಗ್ ಬಾಸ್ ಇದುವರೆಗೆ ಏಳು ಸೀಸನನ್ನು ಮುಗಿಸಿದ್ದು ಅದರಲ್ಲಿ ಕಮಲ್ ಹಾಸನ್ ನಿರೂಪಣೆಯನ್ನು ಒಳಗೊಂಡಿತ್ತು. ಆದರೆ ಈಗ ಈ ಬಾರಿ ವಿಜಯ್ ಸೇತುಪತಿ ಆ ಸ್ಥಾನಕ್ಕೆ ಬಂದು ನಿಂತಿದ್ದಾರೆ.
ವಿಶಿಷ್ಟ ಅಭಿನಯ ಶೈಲಿ ಮತ್ತು ಧ್ವನಿಗೆ ಹೆಸರುವಾಸಿಯಾದ ವಿಜಯ್ ಸೇತುಪತಿ ಈಗಾಗಲೇ ಪ್ಯಾನ್ ಇಂಡಿಯನ್ ಸ್ಟಾರ್. ಕಮಲ್ ಹಾಸನ್ ಸ್ಥಾನವನ್ನು ತುಂಬಿದ ಮೊದಲಿಗೆ ಜನರಲ್ಲಿ ಹೇಗೆ ಏನು ಎಂಬ ಅನುಮಾನಗಳಿದ್ದರೂ ವಿಜಯ್ ಮೊದಲ ಹೆಜ್ಜೆಯೇ ಶಹಭಾಸ್ ಗಿರಿ ಗೆ ಭಾಜನವಾಗಿದೆ.
ವರದಿಗಳ ಪ್ರಕಾರ, ಈ ಸೀಸನ್‌ಗೆ ಹೋಸ್ಟ್ ಆಗಿ ಸೇತುಪತಿಗೆ 60 ಕೋಟಿ ರೂ.ಗಳನ್ನು ಸಂಭಾವನೆ ನೀಡಲಾಗುತ್ತದೆ.
ಈ ಸಂಭಾವನೆ ತುಸು ಹೆಚ್ಚೇ ಅನಿಸಿದರೂ , ಕಮಲ್ ಹಾಸನ್ ಅವರು ನಿರೂಪಣಾ ಅವಧಿಯಲ್ಲಿ ಅವರು ಪಡೆದುಕೊಳ್ಳುತ್ತಿದ್ದ 130 ಕೋಟಿ ರೂಪಾಯಿಗಳಿಗೆ ಹೋಲಿಸಿದರೆ ತುಸು ಕಮ್ಮಿಯೇ ಸರಿ.
ನಾಗಾರ್ಜುನ ಅಕ್ಕಿನೇನಿ
ವರದಿಗಳ ಪ್ರಕಾರ, ಟಾಲಿವುಡ್ ಸೂಪರ್‌ಸ್ಟಾರ್ ಪ್ರತಿ ಸಂಚಿಕೆಗೆ 12 ಲಕ್ಷ ರೂಪಾಯಿಗಳನ್ನು ಚಾರ್ಜ್ ಮಾಡುತ್ತಾರೆ ಅಂದರೆ ಇಡೀ ಸೀಸನ್ ಗೆ 12 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ.
ಆದರೆ 6 ನೇ ಸೀಸನ್ ಹೋಸ್ಟ್ ಮಾಡಲು ನಾಗಾರ್ಜುನ 15 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದರೂ ಎನ್ನಲಾಗಿದೆ.
ಮಹೇಶ್ ಮಂಜ್ರೇಕರ್
ಬಿಗ್ ಬಾಸ್ ಮರಾಠಿ 3 ಅನ್ನು ಹೋಸ್ಟ್ ಮಾಡಲು ನಟ 25 ಲಕ್ಷ ರೂಪಾಯಿಗಳನ್ನು ಪಡೆದಿದ್ದಾರೆ ಎಂದು ಹಲವಾರು ಮಾಧ್ಯಮಗಳು ವರದಿ ಮಾಡಿದ್ದವು, ಅಂದರೆ ಅದು ಇಡೀ ಸೀಸನ್‌ಗೆ 3.5 ಕೋಟಿ ರೂ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳಿಲ್ಲ.
ಮೋಹನ್ ಲಾಲ್
ಮಲಯಾಳಂ ಆವೃತ್ತಿಯ ಬಿಗ್ ಬಾಸ್ ಕಾರ್ಯಕ್ರಮ ಶುರುವಾದದ್ದು 2018ರಲ್ಲಿ. ಅಷ್ಟೇ ಬೇಗ ಜನಪ್ರಿಯತೆಯನ್ನು ಪಡೆದುಕೊಂಡ ಈ ಕಾರ್ಯಕ್ರಮದ ನಿರೂಪಕ ಹಿರಿಯ ನಟ ಮೋಹನ್ ಲಾಲ್. ಸೀಸನ್ ಒಂದರ ಸಮಯದಲ್ಲಿ ಮೋಹನ್ ಲಾಲ್ ಗೆ 12 ಕೋಟಿ ರೂಪಾಯಿಗಳ ಸಂಭಾವನೆ ನಿಗದಿಯಾಗಿತ್ತು. ಈಗ ಪ್ರತಿ ಸಂಚಿಕೆಗೆ 70 ಲಕ್ಷಗಳು ಎಂದು ಮೂಲಗಳು ತಿಳಿಸಿವೆ.