ಬೆಂಗಳೂರು: ಹಳೇಹುಬ್ಬಳ್ಳಿ ಗಲಭೆ ಪ್ರಕರಣವನ್ನು ಹಿಂದಕ್ಕೆ ಪಡೆಯುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ವಿಪಕ್ಷಗಳು ವ್ಯಾಪಕ ವಿರೋಧ ವ್ಯಕ್ತಪಡಿಸುತ್ತಿರುವಂತೆಯೇ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಿಎಂ ಸಿದ್ದರಾಮಯ್ಯ, ‘ಕೋರ್ಟ್ ಅನುಮತಿ ನೀಡಿದರಷ್ಟೇ ಹಳೇಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ ಪಡೆಯುತ್ತೇವೆ’ ಎಂದು ಹೇಳಿದ್ದಾರೆ.
ಭಾನುವಾರ ನಗರದ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಿದ್ದರಾಮಯ್ಯ, ‘ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಹಳೇಹುಬ್ಬಳ್ಳಿ ಗಲಭೆ ಪ್ರಕರಣವನ್ನು ಹಿಂಪಡೆಯಲು ಸಚಿವ ಸಂಪುಟ ನಿರ್ಧರಿಸಿದೆ. ಆದರೆ, ಅದಕ್ಕೆ ಕೋರ್ಟ್ ಅನುಮತಿ ಅಗತ್ಯವಾಗಿದೆ. ಕೋರ್ಟ್ ಅನುಮತಿ ನೀಡಿದರೆ ಮಾತ್ರ ಪ್ರಕರಣ ಹಿಂಪಡೆಯಲು ಆಗುತ್ತದೆ. ಇಲ್ಲದಿದ್ದರೆ ಸಾಧ್ಯವಿಲ್ಲ’ ಎಂದು ಹೇಳಿದರು.
‘ಸುಳ್ಳು ಪ್ರಕರಣಗಳು ದಾಖಲಾಗಿದ್ದರೆ, ಉದ್ದೇಶಪೂರ್ವಕವಾಗಿ ಪ್ರಕಣಗಳನ್ನು ದಾಖಲಿಸಿದ್ದರೆ ಅಥವಾ ಹೋರಾಟಗಳಿಗೆ ಸಂಬಂಧಿಸಿ ಪ್ರಕರಣಗಳನ್ನು ದಾಖಲಿಸಿದ್ದರೆ, ಅವುಗಳನ್ನು ಪರಿಶೀಲಿಸಲು ಸಂಪುಟ ಉಪಸಮಿತಿ ರಚಿಸಲಾಗುತ್ತದೆ. ಇದು ಎಲ್ಲ ಸರ್ಕಾರದಲ್ಲೂ ಅಸ್ತಿತ್ವದಲ್ಲಿರುತ್ತದೆ. ಹಳೇಹುಬ್ಬಳ್ಳಿ ಗಲಭೆ ಪ್ರಕರಣವನ್ನು ಪರಿಶೀಲಿಸಿದ ಸಮಿತಿ, ಅದು ಸುಳ್ಳು ಪ್ರಕರಣ ಎಂದು ತಿಳಿಸಿತ್ತು.
ಆ ವರದಿ ಸಚಿವ ಸಂಪುಟಕ್ಕೆ ಬಂದಿದ್ದು, ನಾವು ಒಪ್ಪಿಕೊಂಡಿದ್ದೇವೆ. ಬಿಜೆಪಿ ಆಡಳಿತವಿದ್ದಾಗಲೂ ಅನೇಕ ಅಪರೂಪದ ಪ್ರಕರಣಗಳನ್ನು ಹಿಂಪಡೆದಿತ್ತು. ಈ ಹಿಂದೆ ಬಿಜೆಪಿ ಸರ್ಕಾರದ ವೇಳೆ ಆರ್ ಎಸ್ ಎಸ್ ಕಾರ್ಯಕರ್ತರ ಮೇಲಿದ್ದ ಪ್ರಕರಣಗಳನ್ನು ವಾಪಸ್ ಪಡೆದಿಲ್ಲವೇ.. ಎಂದು ಸರ್ಕಾರದ ನಿರ್ಧಾರವನ್ನು ಸಿದ್ದರಾಮಯ್ಯ ಸಮರ್ಥಿಸಿಕೊಂಡರು.
ಅಲ್ಲದೆ, ‘ಎಲ್ಲರ ಕಾಲದಲ್ಲೂ ಪ್ರಕರಣ ವಾಪಸ್ ಪಡೆದ ಉದಾಹರಣೆಗಳಿವೆ. ಸುಳ್ಳು ಕೇಸ್ ಇದೆ ಎಂಬ ಕಾರಣಕ್ಕೆ ವಾಪಸ್ ಪಡೆಯಲಾಗಿದೆ. ಸಂಪುಟ ಸಭೆಯಲ್ಲಿ ಹುಬ್ಬಳ್ಳಿ ಗಲಭೆ ಕೇಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 43 ಕೇಸ್ ಗಳನ್ನು ಹಿಂಪಡೆಯಲಾಗಿದೆ.
ಪ್ರತಿಭಟನಾ ನಿರತ ಬಿಜೆಪಿ ಕಾರ್ಯಕರ್ತರ ಬಂಧನ: ಸಿಎಂ ಟೀಕೆ
ರಾಜ್ಯ ಸರ್ಕಾರ ಹಳೆ ಹುಬ್ಬಳ್ಳಿ ಗಲಭೆ ಕೇಸ್ ಹಿಂಪಡೆದ ವಿಚಾರವಾಗಿ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು, ಇಂದು ಸಿಎಂ ಸಿದ್ದರಾಮಯ್ಯ ಕಾರಿಗೆ ಬಿಜೆಪಿ ಕಾರ್ಯಕರ್ತರು ಕಪ್ಪು ಬಟ್ಟೆ ಪ್ರದರ್ಶಿಸಿದರು. ಹುಬ್ಬಳ್ಳಿಯ ಗೋಕುಲ್ ರೋಡ್ ನಲ್ಲಿ ಕಪ್ಪು ಬಟ್ಟೆ ಪ್ರದರ್ಶಿಸಿದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಿಜೆಪಿ ಕಾರ್ಯಕರ್ತರಾದ ಜಗದೀಶ್ ಕಂಬಳಿ, ಮಂಜುನಾಥ್ ಮತ್ತು ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇದೇ ವೇಳೆ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿರುವ ಕುರಿತು ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ‘ಬಿಜೆಪಿ ಸುಳ್ಳು ವಿಷಯಗಳ ಮೇಲೆ ಹಾಗೂ ನಿರಾಧಾರ ಆರೋಪದ ಮೇಲೆಯೇ ಯಾವಾಗಲೂ ಪ್ರತಿಭಟನೆ ಮಾಡೋದು’ ಎಂದು ಕಿಡಿಕಾರದಿರು.
ಗಲಭೆ ಪ್ರಕರಣ ವಾಪಸ್: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ
ಹಳೇ ಹುಬ್ಬಳ್ಳಿ ಗಲಭೆ ಕೇಸ್ ವಾಪಸ್ ಪಡೆದಿದ್ದಕ್ಕೆ ಸಿಡಿದೆದ್ದಿರುವ ಕೇಸರಿ ಪಡೆ, ಬೃಹತ್ ಹೋರಾಟಕ್ಕೆ ಪ್ಲ್ಯಾನ್ ಮಾಡುತ್ತಿದೆ. ಇವತ್ತು ಕೂಡಾ ಕಾಂಗ್ರೆಸ್ ನಾಯಕರ ಮೇಲೆ ಬೆಂಕಿಯುಗುಳಿದ ಬಿಜೆಪಿ ನಾಯಕರು, ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ವಿಪಕ್ಷ ನಾಯಕ ಆರ್ ಅಶೋಕ್, ‘ಮತೀಯ ಮೂಲಭೂತವಾದಿ ಸಂಘಟನೆಗಳ ಒತ್ತಡದಲ್ಲಿದೆಯೇ ರಾಜ್ಯ ಕಾಂಗ್ರೆಸ್ ಸರ್ಕಾರ? ಎಪ್ರಿಲ್ 16, 2022ರಂದು ಹುಬ್ಬಳ್ಳಿಯಲ್ಲಿ ನಡೆದ ಕೋಮುಗಲಭೆಯಲ್ಲಿ 155ಕ್ಕೂ ಹೆಚ್ಚು ಮುಸ್ಲಿಂ ಮತಾಂಧರ ಗುಂಪೊಂದು ಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿತ್ತು. ಕಲ್ಲು, ಬಡಿಗೆ, ಬೆಂಕಿಯಿಂದ ಮುಸ್ಲಿಂ ಮತಾಂಧರು ಮಾಡಿದ ಈ ದಾಳಿಯಲ್ಲಿ ಇಬ್ಬರು ಪೊಲೀಸರಿಗೆ ಗಂಭೀರ ಗಾಯವಾಗಿತ್ತು. 10 ಪೊಲೀಸ್ ವಾಹನಗಳು ಜಖಂಗೊಂಡಿತ್ತು. ಸಚಿವ ಸಂಪುಟದಲ್ಲಿ ಇಂತಹ ಗಂಭೀರ ಪ್ರಕರಣವನ್ನೇ ಕೈಬಿಟ್ಟರೆ ಸಮಾಜ ಘಾತುಕ ಶಕ್ತಿಗಳಿಗೆ ಕಾನೂನಿನ ಮೇಲೆ ಭಯವೇ ಇಲ್ಲದಂತಾಗುವುದಿಲ್ಲವೇ?
ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸ್ ಠಾಣೆಯ ಮೇಲೆಯೇ ದಾಳಿ ಮಾಡಿ, ಪೊಲೀಸರನ್ನೇ ಹೊಡೆದರೂ ಕಾನೂನು ಏನೂ ಮಾಡುವುದಿಲ್ಲ ಎಂಬ ಸಂದೇಶ ಹೋಗುವುದಿಲ್ಲವೇ? ಮುಸ್ಲಿಂ ಮತಾಂಧರು, ಮತೀಯ ಮೂಲಭೂತವಾದಿ ಸಂಘಟನೆಗಳ ವಿಷಯದಲ್ಲಿ ಕಾಂಗ್ರೆಸ್ ತೋರುತ್ತಿರುವ ಧೋರಣೆ ನೋಡಿದರೆ ರಾಜ್ಯ ಸರ್ಕಾರ ಉಗ್ರರಿಂದ ಹೈಜಾಕ್ ಆಗಿದೆಯೇ ಎನ್ನುವ ಅನುಮಾನ ಮೂಡುತ್ತಿದೆ. ಉಗ್ರವಾದಿಗಳು ಕಾಂಗ್ರೆಸ್ ಸರ್ಕಾರವನ್ನು ಬ್ಲಾಕ್ ಮೇಲ್ ಮಾಡಿ ತಮ್ಮ ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದ್ದರೆಯೇ ಎನ್ನುವ ಸಂದೇಹ ಮೂಡುತ್ತಿದೆ. ಇದು ರಾಜ್ಯದ ಶಾಂತಿ, ಸುರಕ್ಷತೆಯ ಪ್ರಶ್ನೆ ಆಗಿರುವುದರಿಂದ ಸಿಎಂ ಸಿದ್ದರಾಮಯ್ಯ ಹಾಗು ಗೃಹ ಸಚಿವ ಜಿ ಪರಮೇಶ್ವರ ಅವರು ಈ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.