ದಕ್ಷಿಣಕನ್ನಡ: ಸರ್ಕಾರಿ ಬಸ್ಸಿನಲ್ಲಿ ಪಯಣಿಸುವುದೆಂದರೆ ಚಿಲ್ಲರೆಗಾಗಿ ನಿರ್ವಾಹಕನ ಕಿರಿಕಿರಿ. 500 ರೂಪಾಯಿ ನೋಟು ನೀಡಿದರೆ ನಿರ್ವಾಹಕ ಮುಖ ದಪ್ಪಗೆ ಮಾಡಿ ನಾನೆಲ್ಲಿಂದ ಚಿಲ್ಲರೆ ತರಲಿ. ನೀವು ಚಿಲ್ಲರೆ ಕೊಡಿ. ಬಸ್ಸಿಗೆ ಬರುವಾಗ ಚಿಲ್ಲರೆ ತರಬೇಕು ಎಂಬ ಜ್ಞಾನ ಬೇಡ್ವಾ ಎಂದು ಪ್ರಯಾಣಿಕರ ಮುಂದೆ ಅಬ್ಬರಿಸಿದಾಗ ಚಿಲ್ಲರೆ ಇಲ್ಲದ ಪ್ರಯಾಣಿಕನ ಮುಖ ಸಪ್ಪೆ. ಬಹುತೇಕ ಸಂದರ್ಭದಲ್ಲಿ ಇದು ಗಲಾಟೆಗೂ ದಾರಿಯಾಗುತ್ತದೆ. ಇದಕ್ಕೆ ಇದೀಗ ಕೆಎಸ್ಸಾರ್ಟಿಸಿ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ. ಸರ್ಕಾರಿ ಬಸ್ಸುಗಳಲ್ಲಿ ಅತಿ ಶೀಘ್ರದಲ್ಲಿಯೇ ಆಗಲಿದೆ `ಡಿಜಿಟಲ್’ ವ್ಯವಸ್ಥೆ…!
ಪುತ್ತೂರು ಕೆಎಸ್ಸಾರ್ಟಿಸಿ ವಿಭಾಗದ ನಿರ್ವಾಹಕರಿಗೆ ಈಗಾಗಲೇ 570 ಅಂಡ್ರಾಯಿಡ್ ಮಿಷನ್ ಗಳನ್ನು ವಿತರಣೆ ಮಾಡಲಾಗಿದೆ. ಇನ್ನು ಮುಂದೆ ಪುತ್ತೂರು ವಿಭಾಗದ ಜಿಲ್ಲೆಯ 5 ತಾಲೂಕು ಹಾಗೂ ಕೊಡಗು ಜಿಲ್ಲೆಯ ಸರ್ಕಾರಿ ಬಸ್ಸು ನಿರ್ವಾಹಕರು ಯುಪಿಐ ಮೂಲಕ ಕ್ಯಾಶ್‌ಲೆಸ್ ವ್ಯವಸ್ಥೆಗೆ ತಮ್ಮನ್ನು ತಾವು ತೆರೆದುಕೊಳ್ಳಲಿದ್ದಾರೆ.
ಪುತ್ತೂರು ವಿಭಾಗದಲ್ಲಿ 5 ತಾಲೂಕುಗಳಲ್ಲಿ ಒಟ್ಟು ನಾಲ್ಕು ಡಿಪೋ ಹಾಗೂ ಮಡಿಕೇರಿಯ ಒಂದು ಡಿಪೋದಲ್ಲಿ ಈ ಮೆಷಿನ್ ವಿತರಣೆಯಾಗಿದೆ. ಸುಮಾರು 715 ಮಂದಿ ನಿರ್ವಾಹಕರು ಇರುವ ಈ 5 ಡಿಪೊಗಳಲ್ಲಿ 485 ಅನುಸೂಚಿತ ಮಾರ್ಗಗಳಿವೆ. ಇದಕ್ಕೆ ಏಕಕಾಲಕ್ಕೆ 485 ಮೆಷಿನ್‌ಗಳ ಅಗತ್ಯವಿದೆ. ಸುಮಾರು 270 ಹೆಚ್ಚುವರಿ ಮಿಷಿನ್ ಗಳನ್ನು ಪುತ್ತೂರು ವಿಭಾಗಕ್ಕೆ ತರಿಸಲಾಗಿದೆ. ಮೆಷಿನ್‌ಗಳಲ್ಲಿ ಏನಾದರೂ ತೊಂದರೆ ಕಂಡುಬಂದ ಸಂದರ್ಭ ತುರ್ತು ವ್ಯವಸ್ಥೆಗಾಗಿ ಈ ಹೆಚ್ಚುವರಿ ಮೆಷಿನ್‌ಗಳನ್ನು ತರಿಸಲಾಗಿದೆ.
ನಮ್ಮ ಬಳಿ ನಗದು ಹಣ ಇಲ್ಲ. ನಾವು ಚಿಲ್ಲರೆ ತಂದಿಲ್ಲ.. ನಿಮಗೆ ಇನ್ನು ಮುಂದೆ ಸರ್ಕಾರಿ ಬಸ್‌ನಲ್ಲಿ ಪಯಣಿಸುವಾಗ ಈ ಚಿಂತೆಯೇ ಬೇಕಾಗಿಲ್ಲ. ನಿಮ್ಮಲ್ಲಿ ಸ್ಮಾರ್ಟ್ ಫೋನ್ ಇದ್ದರೆ ಸಾಕು. ಡಿಜಿಟಲ್ ಪಾವತಿ ಮಾಡಿ ಟಿಕೇಟ್ ಪಡೆದುಕೊಂಡು ಆರಾಮವಾಗಿ ಬಸ್ ಪ್ರಯಾಣ ಮಾಡಬಹುದು. ಈಗ ಕೆಎಸ್ಸಾರ್ಟಿಸಿ ಸಂಸ್ಥೆ ಪ್ರಯಾಣಿಕರ ಅನುಕೂಲದ ದೃಷ್ಟಿಯಿಂದ ಡಿಜಿಟಲ್ ಪಾವತಿಯ ಹೆಜ್ಜೆ ಇಟ್ಟಿದೆ.
ಬಸ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರು ನಿರ್ವಾಹಕರ ಬಳಿ ಇರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿಕೊಂಡು ಡಿಜಿಟಲ್ ರೂಪದಲ್ಲಿ ಹಣ ಪಾವತಿಸಿ ನಿಮ್ಮ ಟಿಕೇಟ್ ನಿಮ್ಮ ಕೈಗೆ ಸಿಗುತ್ತದೆ. ಆದರೆ ಸ್ಮಾರ್ಟ್ ಫೋನ್ ಮಾತ್ರ ಅತ್ಯಗತ್ಯ. ಒಂದು ವೇಳೆ ನೆಟ್‌ವರ್ಕ್ ಸಮಸ್ಯೆ ಇದ್ದ ಸಂದರ್ಭದಲ್ಲಿ ಮಾತ್ರ ನಗದು ಹಣ ಪಾವತಿ ಮಾಡಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಪುತ್ತೂರು ವಿಭಾಗದಲ್ಲಿ ಇಂತಹ ಅನಿವಾರ್ಯತೆ ಸಂದರ್ಭದ ಸಾಧ್ಯತೆ ಬಹಳಷ್ಟು ಕಡಿಮೆ ಎನ್ನಲಾಗಿದೆ.
ಪ್ರಯಾಣಿಕರು ದರ ಕೇಳಿ ನಿರ್ವಾಹಕರ ಕ್ಯೂಆರ್ ಕೋಡ್ ಮೂಲಕ ಹಣ ಪಾವತಿ ಮಾಡಬೇಕು. ಹಾಗೇ ಪಾವತಿಸಿದ ಹಣ ನಿರ್ವಾಹಕ ಖಾತೆ ಮೂಲಕ ನೇರವಾಗಿ ಡಿಪೊಗಳ ಅಕೌಂಟಿಗೆ ಜಮೆ ಆಗಲಿದೆ. ಈ ಪಾವತಿಯಿಂದ ಚಿಲ್ಲರೆ ಕೊಡಲು ಸತಾಯಿಸುವ ಜೊತೆಗೆ ನಿರ್ವಾಹಕರು ವಂಚನೆ ಮಾಡಬಹುದಾದ ಅವಕಾಶವೂ ಇಲ್ಲದಂತಾಗುತ್ತದೆ.