ಬೆಂಗಳೂರಿನಲ್ಲಿ ನಡೆಯಲಿರುವ ಕಂಬಳವನ್ನು ಸ್ಥಗಿತಗೊಳಿಸಬೇಕು ಎಂದು ಕೋರಿ ʼಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ʼ (PETA) ಸೋಮವಾರ ರಾಜ್ಯ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದೆ.
ಅಕ್ಟೋಬರ್ 25ರಂದು ಬೆಂಗಳೂರಿನಲ್ಲಿ ಕಂಬಳವು ಆಯೋಜನೆಗೊಂಡಿದೆ. ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ಸಲ್ಲಿಸಿರುವ ಅರ್ಜಿ ವಿಚಾರಣೆಯು ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಹಾಗೂ ನ್ಯಾ. ಕೆ.ವಿ.ಅರವಿಂದ್ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠದ ಮುಂದೆ ನಡೆಯುತ್ತಿದೆ. ಕಂಬಳವು ಪ್ರಾಣಿಗಳ ಪಾಲಿಗೆ ತೀರಾ ಹಿಂಸೆಯಾಗಿದೆ ಎಂದು ವಕೀಲ ಧ್ಯಾನ್ ಚಿನ್ನಪ್ಪ ವಾದಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಂಪ್ರಾದಾಯಿಕವಾಗಿ ನಡೆಯುವ ಕಂಬಳವನ್ನು ಇದೇ ತಿಂಗಳು ಬೆಂಗಳೂರಿನಲ್ಲಿ ಆಯೋಜಿಸಲು ನಿರ್ಧರಿಸಲಾಗಿದ್ದು, ರಾಜ್ಯದ ವಿವಿಧ ಭಾಗಗಳಿಂದ ಕೋಣಗಳನ್ನು ಕರೆತರಲಾಗುತ್ತದೆ. ಕಂಬಳ ಒಂದು ಪ್ರಾಣಿ ಹಿಂಸಾ ಕೃತ್ಯವಾಗಿದೆ’ ಎಂದು ಪೀಠಕ್ಕೆ ತಿಳಿಸಿದರು. ‘ಅಕ್ಟೋಬರ್ 26ಕ್ಕೆ ಕಂಬಳ ಸ್ಪರ್ಧೆ ಆಯೋಜಿಸಲಾಗಿದೆ ಎನ್ನುತ್ತಿದ್ದೀರಿ. ಕೊನೆಯ ಕ್ಷಣದಲ್ಲಿ ನ್ಯಾಯಾಲಯದ ಮುಂದೆ ಬಂದಿರುವುದೇಕೆ?’ ಎಂದು ಪೀಠ ಪ್ರಶ್ನಿಸಿದೆ.
ಈ ಸಂಬಂಧ ಜುಲೈನಲ್ಲಿಯೇ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಅದನ್ನು ಇನ್ನೂ ವಿಚಾರಣೆಗೆ ನಿಗದಿಪಡಿಸಲಾಗಿಲ್ಲ. ಇದೀಗ ಅಕ್ಟೋಬರ್ 26ಕ್ಕೆ ಕಂಬಳ ಸ್ಪರ್ಧೆ ಆಯೋಜನೆಯಾಗಿದ್ದು, ತುರ್ತು ವಿಚಾರಣೆಗೆ ಪರಿಗಣಿಸಬೇಕಿದೆ’ ಎಂದು ವಕೀಲರು ತಿಳಿಸಿದರು. ವಾದ ಆಲಿಸಿದ ಪೀಠ ವಿಚಾರಣೆಯನ್ನು ನಾಳೆಗೆ ಮೂಂದೂಡಿದೆ.