ದಕ್ಷಿಣಕನ್ನಡ: ಹೆಸರಾಂತ ನಾಗಕ್ಷೇತ್ರ ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ಹಲವು ವಿಶೇಷತೆಗಳ ನಾಡು. ಇಂತಹ ವಿಶೇಷತೆಗಳಲ್ಲಿ ಕ್ಷೇತ್ರದ ಕುಮಾರಧಾರಾ ಸ್ನಾನಘಟ್ಟದ ಬಳಿ ಬರುವ ಮೀನುಗಳೂ ಒಂದು. ಕ್ಷೇತ್ರದಲ್ಲಿ ನಡೆಯುವ ಷಷ್ಠಿ ಮಹೋತ್ಸವದ ಮೊದಲು ಕುಮಾರಧಾರಾ ನದಿಯ ಮೂಲಕ ಸ್ನಾನಘಟ್ಟದ ಬಳಿ ಬರುವ ಈ ಮೀನುಗಳು ತೀರ್ಥಸ್ನಾನಕ್ಕೆ ಬರುವ ಭಕ್ತರನ್ನು ಆಕರ್ಷಿಸುತ್ತದೆ.
ದೇವರ ಮೀನುಗಳೆಂದು ಕರೆಯಲ್ಪಡುವ ಈ ಮೀನುಗಳು ನದಿಯಲ್ಲಿ ನೀರು ಕಡಿಮೆಯಾಗುತ್ತಿದ್ದಂತೆ ಸ್ನಾನಘಟ್ಡದ ಬಳಿ ಬಂದು ಸೇರುತ್ತದೆ. ಸಾಮಾನ್ಯವಾಗಿ ಡಿಸೆಂಬರ್ ತಿಂಗಳಿನಲ್ಲಿ ಹೇರಳ ಸಂಖ್ಯೆಯಲ್ಲಿ ಸ್ನಾನಘಟ್ಟದ ಬಳಿ ಸೇರುವ ದೇವರ ಮೀನುಗಳು ಈ ಬಾರಿ ಅಕ್ಟೋಬರ್ ತಿಂಗಳಿನಲ್ಲೇ ಕಂಡು ಬಂದಿವೆ.
ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರು ತೀರ್ಥಸ್ನಾನಕ್ಕಾಗಿ ಕುಮಾರಧಾರಾ ಸ್ನಾನಘಟ್ಡಕ್ಕೆ ಬರುವ ಭಕ್ತಾಧಿಗಳನ್ನು ತನ್ನ ಕಚಗುಳಿಯ ಮೂಲಕ ಸ್ವಾಗತಿಸುವ ಈ ಮೀನುಗಳಿಗೆ ಭಕ್ತಾಧಿಗಳು ಅಕ್ಕಿ ಮತ್ತು ಹೊದ್ಲು ಹಾಕಿ ಸಂಭ್ರಮಿಸುತ್ತಾರೆ. ಕುಮಾರಧಾರಾ ಸ್ನಾನಘಟ್ಟದಲ್ಲಿ ಕಂಡು ಬರುವ ಈ ದೇವರ ಮೀನುಗಳಿಗೆ ಆಹಾರ ಹಾಕಿದಲ್ಲಿ ಚರ್ಮರೋಗ ಸೇರಿದಂತೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತದೆ ಎನ್ನುವ ನಂಬಿಕೆಯೂ ಇದೆ.
ಕುಮಾರಧಾರಾ ನದಿಯಲ್ಲೇ ಹೆಚ್ಚು ಕಂಡುಬರುವ ಈ ಮೀನುಗಳು ಸುಬ್ರಹ್ಮಣ್ಯದ ಪಕ್ಕದಲ್ಲೇ ಇರುವ ಏನೆಕಲ್ಲು ಶಂಕಪಾಲ ಸುಬ್ರಹ್ಮಣ್ಯ ಕ್ಷೇತ್ರದಿಂದ ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟದ ಕಡೆಗೆ ಸಂಚರಿಸುವ ಈ ಮೀನುಗಳನ್ನು ಬೇಟೆಯಾಡುವುದಾಗಲಿ, ತಿನ್ನುವುದಾಗಲಿ ನಿಶಿದ್ಧವಾಗಿದೆ. ಈ ಪ್ರದೇಶವು ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲೂ ಬರುವ ಕುಮಾರಧಾರಾ ನದಿಯಲ್ಲಿ ಈ ಮೀನುಗಳನ್ನು ಹಿಡಿಯುವುದು ಅಪರಾಧವೂ ಆಗಿದೆ.
ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಹಲವು ಆಕರ್ಷಣೆಗಳಲ್ಲಿ ದೇವರ ಮೀನುಗಳೂ ಒಂದಾಗಿದ್ದು, ಭಕ್ತರ ಮನಸ್ಸನ್ನೂ ಇವುಗಳು ಸೂರೆಗೊಳ್ಳುತ್ತಿದೆ….