ಪುತ್ತೂರು ವಿಶ್ವ ಹಿಂದೂ ಪರಿಷತ್ತಿನ ನೂತನ ಜಿಲ್ಲಾ ಕಾರ್ಯಾಲಯ ಭೂಮಿ ಪೂಜೆಗೆ ಆಗಮಿಸಿದ ಅರುಣ್ ಪುತ್ತಿಲ – ಹಿಂದೂ ಸಂಘಟನೆಗಳ ಕೆಲ ಕಾರ್ಯಕರ್ತರಿಂದ ವಿರೋಧ : ಹೊಯಿಕೈ
ವಿಶ್ವಹಿಂದೂ ಪರಿಷತ್ʼನ ನೂತನ ಜಿಲ್ಲಾ ಕಾರ್ಯಾಲಯದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಕಳೆದ ವಿಧಾನಸಭೆ ಚುನಾವಣೆ ಹಾಗೂ ಆ ಬಳಿಕ ಬಿಜೆಪಿ ಮತ್ತು ಸಂಘ ಪರಿವಾರ ಸಂಘಟನೆಗಳ ನಡುವೆ ಉಂಟಾದ ರಾಜಕೀಯ ವಿಪ್ಲವದ ಮುಂದುವರಿದ ಭಾಗವಾಗಿ ಈ ಹೊಯಿಕೈ ನಡೆದಿದೆ ಎಂದು ತಿಳಿದು ಬಂದಿದೆ.
ಪುತ್ತೂರಿನ ಎಸ್ ಡಿಸಿಸಿ ಬ್ಯಾಂಕ್ ಮುಂಭಾಗದ ಈ ಹಿಂದಿನ ವಿಶ್ವ ಹಿಂದೂ ಪರಿಷದ್ ಕಾರ್ಯಾಲಯವಿದ್ದ ಸ್ಥಳದಲ್ಲಿ ಇಂದು ವಿಶ್ವಹಿಂದೂ ಪರಿಷತ್ʼನ ನೂತನ ಜಿಲ್ಲಾ ಕಾರ್ಯಾಲಯದ ಭೂಮಿ ಪೂಜೆಯನ್ನು ಕುಕ್ಕೆ ಸುಬ್ರಹ್ಮಣ್ಯದ ನರಸಿಂಹಸ್ವಾಮಿ ಸಂಪುಟ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯರ ಉಪಸ್ಥಿತಿಯಲ್ಲಿ ಆಯೋಜಿಸಲಾಗಿತ್ತು.
ಕಳೆದ ವಿಧಾನಸಭೆ ಚುನಾವನೇಯಲ್ಲಿ ಬಿಜೆಪಿಯ ವಿರುದ್ದ ಬಂಡಾಯದ ಬಾವುಟ ಹಾರಿಸಿದ ಅರುಣ್ ಕುಮಾರ್ ಪುತ್ತಿಲ ಹಾಗೂ ಮೂವರು ಬೆಂಬಲಿಗರು ಜತೆಗೂಡಿ ಈ ಸಮಾರಂಭಕ್ಕೆ ಅಗಮಿಸಿದ್ದಾರೆ.
ವಿಶ್ವ ಹಿಂದೂ ಪರಿಷತ್, ಬಜರಂಗದಳ ಮತ್ತೂ ಹಿಂದೂ ಜಾಗರಣೆ ವೇದಿಕೆಯ ಮುಂಚೂಣಿಯಲ್ಲಿರುವ ಕೆಲ ಕಾರ್ಯಕರ್ತರು ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿ ತನ್ನ ಕಾರಿನಿಂದ ಇಳಿಯುತ್ತಿದ್ದ ಪುತ್ತಿಲರನ್ನು ತಡೆದಿದ್ದಾರೆ.
ಆಗ ಅವರ ಜತೆಗಿದ್ದ ಪುತ್ತೂರು ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಿಲ್ ತೆಂಕಿಲ ಪುತ್ತಿಲ ನೆರವಿಗೆ ಧಾವಿಸಿದ್ದು, ಪುತ್ತಿಲರನ್ನು ತಡೆಯಲು ಯತ್ನಿಸುತ್ತಿದ್ದ ಕಾರ್ಯಕರ್ತರ ಜತೆ ವಾಗ್ವಾದ ನಡೆಸಿದ್ದಾರೆ. ಆ ಕಾರ್ಯಕರ್ತರ ಗುಂಪಿನಲ್ಲಿ ಹಿಂದೂ ಸಂಘಟನೆಗಳ ಮುಖಂಡರಾದ ದಿನೇಶ್ ಪಂಜಿಗ, ಶ್ರೀಧರ್ ತೆಂಕಿಲ , ಜಯಂತ್ ಬಲ್ನಾಡು, ಜಿತೇಶ್ ಬಲ್ನಾಡು, ಜಯಂತ್ ಕುಂಜುರುಪಂಜ ಮುಂತಾದವರು ಇದ್ದರು ಎಂದು ಹೇಳಲಾಗುತ್ತಿದೆ. ಈ ವೇಳೆ ಅನಿಲ್ ತೆಂಕಿಲ ಮತ್ತು ಹಿಂದೂ ಸಂಘಟನೆಯಗಳ ಕಾರ್ಯಕರ್ತರ ಮಧ್ಯೆ ಹೋಯ್ ಕೈ ನಡೆದು , ಪರಸ್ಪರ ಹಲ್ಲೆ ನಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಈ ವೇಳೆ ವಿಶ್ವ ಹಿಂದೂ ಪರಿಷತ್ ನ ಹಿರಿಯ ಮುಖಂಡರಾದ ಯು ಪೂವಪ್ಪನವರು ಘಟನಾ ಸ್ಥಳಕ್ಕೆ ಆಗಮಿಸಿ ಗಲಾಟೆಯನ್ನು ನಿಯಂತ್ರಿಸಿ ಅರುಣ್ ಪುತ್ತಿಲರನ್ನು ಅವರ ಜತೆಗಿದ್ದ, ಪುತ್ತೂರು ಬಿಜೆಪಿಯ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲ್ , ಅನಿಲ್ ತೆಂಕಿಲರವರನ್ನು ಸಭಾಂಗಣಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯ ಮಾಹಿತಿ ಪಡೆದ ಪುತ್ತೂರು ನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಬಿಗಿ ಬಂದೋಬಸ್ತು ಏರ್ಪಡಿಸಿದ್ದಾರೆ.