ಮುಂಬೈ: 10 ದಿನದಲ್ಲಿ ರಾಜೀನಾಮೆ ನೀಡದಿದ್ದರೆ ಮಹಾರಾಷ್ಟ್ರದ ಮಾಜಿ ಸಚಿವ ಹಾಗೂ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕ್ ಅವರನ್ನು ಕೊಂದ ರೀತಿಯಲ್ಲೇ ನಿಮ್ಮನ್ನು ಹತ್ಯೆ ಮಾಡಬೇಕಾಗುತ್ತದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಬೆದರಿಕೆ ಹಾಕಿದ್ದ ಮಹಿಳೆಯೊಬ್ಬರನ್ನು ಮುಂಬೈ ಪೊಲೀಸರು ಭಾನುವಾರ ಬಂಧನಕ್ಕೊಳಪಡಿಸಿದ್ದಾರೆ.
ಬಂಧಿತ ಮಹಿಳೆಯನ್ನು ಫಾತಿಮಾ ಖಾನ್ (24) ಎಂದು ಗುರುತಿಸಲಾಗಿದೆ. ಈಕೆ ತನ್ನ ಕುಟುಂಬ ಸದಸ್ಯರೊಂದಿಗೆ ಮಹಾರಾಷ್ಟ್ರದ ನೆರೆಯ ಥಾಣೆ ಜಿಲ್ಲೆಯ ಉಲ್ಹಾಸ್‌ನಗರ ಪ್ರದೇಶದಲ್ಲಿ ನೆಲೆಸಿದ್ದು, ಮಾಹಿತಿ ತಂತ್ರಜ್ಞಾನದಲ್ಲಿ ಬಿಎಸ್ಸಿ ಮಾಡಿದ್ದಾಳೆಂದು ತಿಳಿದುಬಂದಿದೆ.
ಉತ್ತಮ ವಿದ್ಯಾರ್ಹತೆ ಹೊಂದಿದ್ದರೂ ಮಹಿಳೆ ಮಾನಸಿಕ ಅಸ್ವಸ್ಥಳಾಗಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮುಂಬೈ ಪೊಲೀಸ್ ಟ್ರಾಫಿಕ್ ಕಂಟ್ರೋಲ್ ಸೆಲ್‌ಗೆ ಶನಿವಾರ (ನ.02) ಸಂಜೆ ಅಪರಿಚಿತ ಸಂಖ್ಯೆಯಿಂದ ಸಂದೇಶ ಬಂದಿತ್ತು. ಇನ್ನೂ 10 ದಿನಗಳಲ್ಲಿ ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೆ ಬಾಬಾ ಸಿದ್ದಿಕ್ ರೀತಿಯಲ್ಲೇ ಕೊಂದು ಹಾಕುತ್ತೇವೆ ಎಂದು ಬೆದರಿಕೆ ಹಾಕಲಾಗಿತ್ತು.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಪ್ರಚಾರಕ್ಕಾಗಿ ಯೋಗಿ ಆದಿತ್ಯನಾಥ್ ಅವರು ಮಹಾರಾಷ್ಟ್ರಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ನಡುವಲ್ಲೇ ಬೆದರಿಕೆ ಸಂದೇಶ ಬಂದ ಹಿನ್ನೆಲೆಯಲ್ಲಿ ಪ್ರಕರಣವನ್ನು ಮುಂಬೈ ಪೊಲೀಸರು ಗಂಭೀರವಾಗಿ ಪರಿಗಣಿಸಿ ತನಿಖೆಯನ್ನು ಚುರುಕುಗೊಳಿಸಿದ್ದರು.
ಅಂದಹಾಗೆ ಅಕ್ಟೋಬರ್ 12 ರಂದು ದಸರಾ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿಸುತ್ತಿದ್ದಾಗ ಬಾಬಾ ಸಿದ್ದಿಕ್ ಅವರನ್ನು ಅವರ ಮಗ ಹಾಗೂ ಶಾಸಕ ಜೀಶನ್ ಸಿದ್ದಿಕ್ ಅವರ ಕಚೇರಿಯ ಹೊರಗೆ ಮೂವರು ವ್ಯಕ್ತಿಗಳು ಗುಂಡಿಕ್ಕಿ ಕೊಂದಿದ್ದರು. ಬಾಬಾ ಸಿದ್ದಿಕ್ ಅವರು ಬಾಲಿವುಡ್ ನಟ ಸಲ್ಮಾನ್ ಖಾನ್ರೊಂದಿಗೆ ನಿಕಟ ಸಂಬಂಧ ಹೊಂದಿದ್ದಕ್ಕೆ ಕೊಂದಿದ್ದಾಗಿ ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಒಪ್ಪಿಕೊಂಡಿತ್ತು.
ಈ ಘಟನೆ ನಡೆದ ಕೆಲವೇ ದಿನಗಳಲ್ಲಿ ಸಲ್ಮಾನ್ ಖಾನ್ಗೂ ಬೆದರಿಕೆ ಸಂದೇಶ ಬಂದಿತ್ತು. ಸಲ್ಮಾನ್ ಖಾನ್ಗೆ ಬೆದರಿಕೆ ಹಾಕಿದ ವ್ಯಕ್ತಿಯನ್ನು ಮುಂಬೈನ ಬಾಂದ್ರಾ ಪೂರ್ವದ ಅಜಮ್ ಮೊಹಮ್ಮದ್ ಮುಸ್ತಫಾ ಎಂದು ಗುರುತಿಸಲಾಗಿದೆ.
ಅದೇ ರೀತಿ, ಸಲ್ಮಾನ್ ಖಾನ್ ಮತ್ತು ಬಾಬಾ ಸಿದ್ದಿಕ್ ಅವರ ಪುತ್ರ, ಬಾಂದ್ರಾ ಪೂರ್ವ ಎನ್‌ಸಿಪಿ ಶಾಸಕ ಜೀಶನ್ ಸಿದ್ದಿಕ್‌ಗೆ ಬೆದರಿಕೆ ಹಾಕಿದ್ದಕ್ಕಾಗಿ 20 ವರ್ಷದ ವ್ಯಕ್ತಿಯನ್ನು ನೋಯ್ಡಾದಲ್ಲಿ ಮಂಗಳವಾರ ಬಂಧಿಸಲಾಗಿದೆ. ಆತನನ್ನು ಮೊಹಮ್ಮದ್ ತಯ್ಯಬ್ ಎಂದು ಗುರುತಿಸಲಾಗಿದೆ