ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ರಾತ್ರೋರಾತ್ರಿ ದಿಢೀರ್ ಶ್ರೀಮಂತರಾಗುವ ಕನಸು ನನಸು ಮಾಡಿಕೊಳ್ಳುವ ಮುನ್ನ ಇರಲಿ ಎಚ್ಚರ..! ಏಕೆಂದರೆ, ಸೈಬರ್ ವಂಚಕರು ಹೂಡಿಕೆ ತಜ್ಞರ ಹೆಸರಲ್ಲಿ ಕೋಟ್ಯಂತರ ರೂ. ಲಪಟಾಯಿಸುತ್ತಿದ್ದಾರೆ. ಈ ವಂಚನೆ ಜಾಲಕ್ಕೆ ಬಿದ್ದವರು ಪ್ರತಿನಿತ್ಯ ನಗರದ ಸೈಬರ್ ಠಾಣೆಗಳ ಮೆಟ್ಟಿಲೇರುತ್ತಿದ್ದಾರೆ.
ಹೌದು, ಷೇರು ಮಾರುಕಟ್ಟೆ ಲಾಭದ ‘ಅಸ್ತ್ರ’ವನ್ನೇ ನಾಗರಿಕರ ಮೇಲೆ ಪ್ರಯೋಗಿಸುತ್ತಿರುವ ಸೈಬರ್ ವಂಚಕರು, ಹೂಡಿಕೆ ಸಲಹೆ ಹಾಗೂ ದುಪ್ಪಟ್ಟು ಲಾಭದ ಆಮಿಷವೊಡ್ಡಿ ಸಾಮಾಜಿಕ ಜಾಲತಾಣಗಳ ಮೂಲಕ ಬಲೆ ಬೀಸುತ್ತಿದ್ದಾರೆ. ಆಮಿಷಕ್ಕೆ ಸಿಲುಕಿದ ಐಟಿ ಉದ್ಯೋಗಿಗಳು, ಖಾಸಗಿ ಕಂಪನಿಗಳ ನೌಕರರು, ಉದ್ಯಮಿಗಳು ಹಾಗೂ ಮಹಿಳೆಯರ ಬ್ಯಾಂಕ್ ಖಾತೆಗಳನ್ನು ಬರಿದು ಮಾಡುತ್ತಿದ್ದಾರೆ. ಪರಿಣಾಮ ಕಳೆದ 9 ತಿಂಗಳಲ್ಲಿ ಟ್ರೇಡಿಂಗ್ ಹೆಸರಿನಲ್ಲಿ ಮೋಸ ಮಾಡಿದ ಪ್ರಕರಣಗಳೇ ನಗರದಲ್ಲಿ ಒಂದು ಸಾವಿರಕ್ಕೂ ಅಧಿಕ ಕೇಸ್‌ಗಳು ವರದಿಯಾಗಿದ್ದು, 100 ಕೋಟಿ ರೂ.ಗಳಿಗೂ ಹೆಚ್ಚು ವಂಚನೆಯಾಗಿದೆ ಎಂದು ನಗರ ಪೊಲೀಸರು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳನ್ನೇ ಕೇಂದ್ರ ಸ್ಥಾನ ಮಾಡಿಕೊಂಡಿರುವ ಸೈಬರ್ ವಂಚಕರು ವಾಟ್ಸಾಪ್, ಟೆಲಿಗ್ರಾಂ, ಇನ್‌ಸ್ಟಾಗ್ರಾಂಗಳಲ್ಲಿ ಆಕ್ಟೀವ್ ಆಗಿದ್ದಾರೆ. ಟ್ರೇಡಿಂಗ್ ಕುರಿತ ಸಲಹೆ ನೀಡುವುದಾಗಿ ಆನ್‌ಲೈನ್ ಲಿಂಕ್‌ಗಳನ್ನು ರಾಂಡಮ್ ಆಗಿ ಕಳಿಸುತ್ತಾರೆ. ಕ್ಲಿಕ್ ಮಾಡಿದವರು ವಾಟ್ಸಾಪ್ ಗ್ರೂಪ್‌ಗೆ ಸೇರ್ಪಡೆಗೊಳ್ಳುತ್ತಾರೆ. ಈ ಗ್ರೂಪ್‌ನಲ್ಲಿ ಟ್ರೇಡಿಂಗ್, ಲಾಭ ಮತ್ತಿತರ ವಿಚಾರಗಳ ಕುರಿತ ಚರ್ಚೆ, ವಿಡಿಯೊಗಳ ಜತೆಗೆ ಲಾಭ ಗಳಿಸಿದವರ ಸಕ್ಸೆಸ್ ಸ್ಟೋರಿಗಳ ಕುರಿತು ಹೆಚ್ಚು ಚರ್ಚೆ ನಡೆಯಲಿವೆ. ಈ ನಕಲಿ ಗ್ರೂಪ್‌ನ ಚರ್ಚೆಗಳನ್ನು ನಂಬಿ ಹೂಡಿಕೆ ಆಸಕ್ತಿ ತೋರಿಸಿದವರಿಗೆ ಖೆಡ್ಡಾ ತೋಡುವ ವಂಚಕರು, ನಕಲಿ ಷೇರು ಮಾರುಕಟ್ಟೆ ಕಂಪನಿಗಳ ಹೆಸರು ಹೇಳಿ ಒಂದು ಲಕ್ಷ ರೂ.ಗಳಿಂದ 1 ಕೋಟಿ ರೂ.ವರೆಗೆ ಹೂಡಿಕೆ ಮಾಡಿಸಿ ವಂಚಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಹೂಡಿಕೆಯಲ್ಲಿ ಲಾಭ ಗಳಿಸುವ ಆಸೆಯಿಂದ ಬ್ಯಾಂಕ್ ಖಾತೆಯಲ್ಲಿ ಕೂಡಿಟ್ಟ ಹಣವನ್ನು ವಂಚಕರು ಹೇಳಿದಂತೆ ಹಂತ- ಹಂತವಾಗಿ ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸುತ್ತಾರೆ. ಎಐ ತಂತ್ರಜ್ಞಾನ ಬಳಸುವ ವಂಚಕರು ಹೂಡಿಕೆ ಹಣಕ್ಕೆ ಲಾಭ ಬಂದಿದೆ ಎಂದು ಸುಳ್ಳೇ ಸುಳ್ಳು ಬ್ಯಾಲೆನ್ಸ್ ಶೀಟ್ ತೋರಿಸುತ್ತಾರೆ. ಇದನ್ನು ನಿಜ ಎಂದು ನಂಬುವ ಅಮಾಯಕರು, ಮತ್ತಷ್ಟು ಹಣ ವರ್ಗಾವಣೆ ಮಾಡುತ್ತಾರೆ. ಅಂತಿಮವಾಗಿ ಹಣ ಖಾಲಿಯಾದ ಬಳಿಕ ತಾವೂ ಹೂಡಿಕೆ ಮಾಡಿದ ಹಣ ಡ್ರಾ ಮಾಡಲು ಮುಂದಾದಾಗ ವಂಚಕರು ಮತ್ತಷ್ಟು ಹೂಡಿಕೆ ಮಾಡಿದರೆ ಮಾತ್ರ ಡ್ರಾ ಮಾಡಬಹುದು ಎಂಬ ಷರತ್ತು ವಿಧಿಸುತ್ತಾರೆ. ಆ ಬಳಿಕವಷ್ಟೇ ತಾವು ಮೋಸ ಹೋಗಿರುವುದು ಗೊತ್ತಾಗಿ ಠಾಣೆಗಳಿಗೆ ದೂರು ನೀಡುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ತಂತ್ರಜ್ಞಾನವನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ವಂಚಕರು ಷೇರುಮಾರುಕಟ್ಟೆ ಅಧಿಕೃತ ಕಂಪನಿಗಳ ಹೆಸರಲ್ಲಿ ನಕಲಿ ವೆಬ್‌ಸೈಟ್, ಆ್ಯಪ್‌ಗಳನ್ನು ಸೃಷ್ಟಿಸಿ ವಂಚನೆ ಮಾಡುತ್ತಿದ್ದಾರೆ. ಟ್ರೇಡಿಂಗ್ ಕುರಿತ ಆಸೆ ಹಾಗೂ ಜ್ಞಾನದ ಕೊರತೆಯಿಂದ ವಂಚಕರ ಗಾಳಕ್ಕೆ ಸಿಲುಕುತ್ತಿರುವ ಜನರು ಹಣ ಕಳೆದುಕೊಳ್ಳುತ್ತಿದ್ದಾರೆ ಎನ್ನುತ್ತಾರೆ ಸೈಬರ್ ತಜ್ಞ ಡಾ. ಹರ್ಷ.
ಷೇರು ಹೂಡಿಕೆ ಕುರಿತು ಆಸಕ್ತಿ ಹೊಂದಿರುವವರು ತಾವು ಖಾತೆ ಹೊಂದಿರುವ ಬ್ಯಾಂಕ್‌ಗಳನ್ನೇ ಸಂಪರ್ಕಿಸಿ ಸಲಹೆ ಪಡೆಯಬೇಕು. ಈ ಮಾರ್ಗದಲ್ಲಿ ಹೂಡಿಕೆ ಮಾಡಿದರೆ ಅಪಾಯ ಇರುವುದಿಲ್ಲ. ಜತೆಗೆ, ಒಂದು ವೇಳೆ ಮೋಸ ಹೋದರೂ ಬ್ಯಾಂಕ್ ಜವಾಬ್ದಾರಿ ಇರಲಿದೆ ಎಂದು ಡಾ. ಹರ್ಷ ತಿಳಿಸುತ್ತಾರೆ.
ಸಾಮಾಜಿಕ ಜಾಲತಾಣ, ವಾಟ್ಸಾಪ್ ಗ್ರೂಪ್‌ಗಳಲ್ಲಿ ಲಿಂಕ್ ಕಳಿಸಿ ಹೂಡಿಕೆಯಲ್ಲಿ ಲಾಭ ಮಾಡಿಸಿಕೊಡುತ್ತೇವೆ ಎಂದು ಲಿಂಕ್ ಕಳಿಸಿದರೆ ನಂಬಲೇಬಾರದು. ಏಕೆಂದರೆ, ಈ ಲಿಂಕ್‌ಗಳು ಶೇ 99ರಷ್ಟು ವಂಚನೆ ಸಲುವಾಗಿಯೇ ಸೃಷ್ಟಿಸಲಾಗಿರುತ್ತದೆ. ಹೂಡಿಕೆ ಕುರಿತ ಆ್ಯಪ್ ಡೌನ್‌ಲೋಡ್ ಮಾಡಿ ಎಂದು ಹೇಳಿದ ಕೂಡಲೇ ಡೌನ್‌ಲೋಡ್ ಮಾಡಬಾರದು. ಮೊದಲಿಗೆ ಅಂತಹ ಆ್ಯಪ್‌ನ ಅಧಿಕೃತತೆ ತಿಳಿಯಬೇಕು. ಇಂಟರ್ನೆಟ್ ಯುಗದಲ್ಲಿ ಅಧಿಕೃತತೆ ತಿಳಿಯುವುದು ಅಸಾಧ್ಯ ಏನಲ್ಲ. ಮೊದಲಿಗೆ ಆ್ಯಪ್‌ನ ಕಚೇರಿ ಎಲ್ಲಿದೆ? ಅದರ ವಹಿವಾಟು ಯಾವ ದೇಶದಲ್ಲಿ ನಡೆಯುತ್ತಿದೆ ಎಂಬುದರ ಮಾಹಿತಿ ಪಡೆಯಬೇಕು. ಇಲ್ಲವಾದಲ್ಲಿ ವಂಚಕರ ಜಾಲಕ್ಕೆ ಸಿಲುಕಿ ಹಣ ಕಳೆದುಕೊಳ್ಳುವುದು ನಿಶ್ಚಿತ ಎಂದು ಅವರು ಹೇಳುತ್ತಾರೆ.
ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ, ಉದ್ಯಮಿ ಮುಖೇಶ್ ಅಂಬಾನಿ ಹೆಸರಿನಲ್ಲಿಸೈಬರ್ ವಂಚಕರು ಟ್ರೇಡಿಂಗ್ ಕುರಿತು ಸೃಷ್ಟಿಸಿದ್ದ ನಕಲಿ ಜಾಹೀರಾತು ನಂಬಿದ ವೃದ್ಧರೊಬ್ಬರು 19 ಲಕ್ಷ ರೂ. ಕಳೆದುಕೊಂಡಿದ್ದಾರೆ. ಈ ಕುರಿತು ಅಶೋಕ್ (ಹೆಸರು ಬದಲಿಸಲಾಗಿದೆ) ಬೆಂಗಳೂರು ಗ್ರಾಮಾಂತರ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಫೇಸ್‌ಬುಕ್‌ನಲ್ಲಿ ನಾರಾಯಣಮೂರ್ತಿ ಹಾಗೂ ಅಂಬಾನಿ ಅವರು ಹೂಡಿಕೆ ಕಂಪನಿಯೊಂದರ ಕುರಿತು ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ನೋಡಿದ್ದರು. ಬಳಿಕ ವಿಡಿಯೋ ಆಧರಿಸಿ ವಂಚಕರು ಕಳಿಸಿದ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದರು. ವಂಚಕರು ತಿಳಿಸಿದಂತೆ ಹಂತ- ಹಂತವಾಗಿ 19 ಲಕ್ಷ ರೂ.ವರ್ಗಾಯಿಸಿದ್ದಾರೆ. ಅಂತಿಮವಾಗಿ ತಾವು ಮೋಸ ಹೋಗಿರುವುದು ಗೊತ್ತಾಗಿ ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.