ಬೆಂಗಳೂರು:ಸಿಲಿಕಾನ್ ಸಿಟಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಬೆಂಗಳೂರು-ತುಮಕೂರು ರಸ್ತೆ ಕೆ.ಆರ್ ಪುರಂ ಮುಖ್ಯರಸ್ತೆ ಹಾಗೂ ಗೊರಗುಂಟೆಪಾಳ್ಯದಿಂದ ಗೋವರ್ಧನ್ ವೃತ್ತದ ವರೆಗೂ ಫುಲ್ ಟ್ರಾಫಿಕ್ ಜಾಮ್ ಉಂಟಾಗಿತ್ತು. ಭಾನುವಾರ ತಡರಾತ್ರಿಯಿಂದಲೇ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿದ್ದು, ಇದರಿಂದ ಅನ್ಯಜಿಲ್ಲೆಯ ಉದ್ಯೋಗಿಗಳು ಪರದಾಡುವಂತಾಗಿದೆ. ತುಮಕೂರು-ಸಿರಾ, ನೆಲಮಂಗಲ, ಪೀಣ್ಯ, ಕುಣಿಗಲ್ ಬೈಪಾಸ್ ಹತ್ತಿರ ಭಾರಿ ಸಂಚಾರ ದಟ್ಟಣೆ ಉಂಟಾಗಿತ್ತು.
ದೀಪಾವಳಿ ರಜೆ ಮುಗಿಸಿ ಬೆಂಗಳೂರಿನತ್ತ ಜನ ದಾಂಗುಡಿ ಇಡುತ್ತಿದ್ದಾರೆ. ಹೀಗಾಗಿ ತುಮಕೂರು ರಸ್ತೆಯಲ್ಲಿ ಜನರಿಗೆ ಟ್ರಾಫಿಕ್ ಜಾಮ್ ಬಿಸಿ ತಟ್ಟಿದೆ. ಹಾಸನ ಕಡೆಯಿಂದ ಬೆಂಗಳೂರಿಗೆ ಬರುತ್ತಿದ್ದ ನೆಲಮಂಗಲದ ಕುಣಿಗಲ್ ಬೈಪಾಸ್ ಹತ್ತಿರ ರವಿವಾರ (ನ.03)ರ ಸಂಜೆಯಿಂದ ಸೋಮವಾರ (ನ.04)ರ ನಸುಕಿನ ಜಾವದವರೆಗೆ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಮಳೆ ಸಹ ಬರುತ್ತಿತ್ತು. ಇದರಿಂದ ವಾಹನ ಸವಾರರು ಪರದಾಡಿದರು.
ಆದರೆ, ನೆಲಮಂಗಲ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಜಾಗೃತರಾಗಿ ಸಂಚಾರ ವ್ಯವಸ್ಥೆ ಸುಗಮ ಗೊಳಿಸಿದರು. ನಗರದ ಗೊರಗುಂಟೆಪಾಳ್ಯದ ಬಳಿಯೂ ಕಿಲೋ ಮೀಟರ್‌ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿದೆ. ಗೊರಗುಂಟೆಪಾಳ್ಯದಿಂದ ಗೋವರ್ಧನ್ ವೃತ್ತದ ವರೆಗೆ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ. ಇದರಿಂದ ಬೆಂಗಳೂರು ನಗರ ಪ್ರವೇಶಿಸುವಷ್ಟರಲ್ಲಿ ಜನ ಹೈರಾಣಾಗುತ್ತಿದ್ದಾರೆ
ಮೆಟ್ರೋದಲ್ಲೂ ಜನವೋ ಜನ
ರಸ್ತೆಗಳಲ್ಲಿ ಮಾತ್ರವಲ್ಲ.. ಟ್ರಾಫಿಕ್‌ಗೆ ಬೇಸತ್ತು ನಾಗಸಂಧ್ರ ಮೆಟ್ರೋ ನಿಲ್ದಾಣದ ಬಳಿ ಇಳಿದು ಜನ ಮೆಟ್ರೋ ಸಂಚಾರದ ಮೊರೆ ಹೋಗುತ್ತಿದ್ದಾರೆ. ಈ ಹಿನ್ನಲೆ ನಾಗಸಂಧ್ರ ಮೆಟ್ರೋ ನಿಲ್ದಾಣ ಫುಲ್ ರಶ್ ಆಗಿದೆ. ಸರ್ಕಾರಿ ಬಸ್ಗಳಿಗೂ ಕೂಡ ಟ್ರಾಫಿಕ್ ಜಾಮ್ ಬಿಸಿ ತಟ್ಟಿದೆ. ಗಂಟೆಗಟ್ಟಲೆ ಬಸ್ಗಳು ಟ್ರಾಫಿಕ್ನಲ್ಲಿ ನಿಂತಿದ್ದವು. ಇದರಿಂದ ಪ್ರಯಾಣಿಕರು ಪರದಾಡುವಂತಾಯಿತು.
ಕೆಲ ಪ್ರಯಾಣಿಕರು ನಾಗಸಂದ್ರದಲ್ಲೇ ಬಸ್ನಿಂದ ಇಳಿದು ಮೆಟ್ರೋ ಮೂಲಕ ಬೆಂಗಳೂರು ನಗರದೊಳಗೆ ಆಗಮಿಸಿದರು. ಏಕಾಏಕಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮೆಟ್ರೋದತ್ತ ಮುಖ ಮಾಡಿದ್ದರಿಂದ ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ದಟ್ಟಣೆ ಉಂಟಾಗಿತ್ತು. ಪ್ರಯಾಣಿಕರು ಸರತಿ ಸಾಲಿನಲ್ಲಿ ನಿಂತು ನಿಲ್ದಾಣದ ಒಳಗೆ ಪ್ರವೇಶಿಸಿದರು.