ಮಂಗಳೂರು: ನೆರೆ ಜಿಲ್ಲೆ ಕಾಸರಗೋಡು ಸಮೀಪದ ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ ಕಾರಿನ ಮೇಲೆ ಯುವಕರ ತಂಡವೊಂದು ಇತ್ತೀಚೆಗೆ ದಾಳಿ ನಡೆಸಿದೆ. ಸ್ವಾಮೀಜಿ ಕಾಸರಗೋಡಿನ ಬೋವಿಕ್ಕಾನ-ಇರಿಯಣ್ಣಿ ಮಾರ್ಗಮಧ್ಯೆ ಕಾರಿನಲ್ಲಿ ಸಂಚರಿಸುತ್ತಿದ್ದಾಗ ದಾಳಿ ನಡೆದಿದೆ. ಕಾರ್ಯಕ್ರಮವೊಂದನ್ನು ಮುಗಿಸಿ ಮಠಕ್ಕೆ ತೆರಳುತ್ತಿದ್ದಾಗ ದಾಳಿ ಮಾಡಿದ ಯುವಕರು, ದೊಣ್ಣೆಯಿಂದ ಹಲ್ಲೆ ಮಾಡಿ ಕಾರಿನ ಗಾಜುಗಳನ್ನು ಒಡೆದುಹಾಕಿದ್ದಾರೆ.ಅದೃಷ್ಟವಶಾತ್, ಸ್ವಾಮೀಜಿ ಅಪಾಯದಿಂದ ಪಾರಾಗಿದ್ದಾರೆ.
ಹಿಂದೂಪರ ಸಂಘಟನೆಗಳು ಘಟನೆಯನ್ನು ಖಂಡಿಸಿದ್ದು, ದುಷ್ಕರ್ಮಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿವೆ. ಹಿಂದೂ ಐಕ್ಯ ವೇದಿಕೆ ಬೋವಿಕ್ಕಾನದಲ್ಲಿ ಪ್ರತಿಭಟನೆಗೆ ಕರೆ ನೀಡಿದೆ. ದಾಳಿ ಕುರಿತು ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿದೆ. ಜತೆಗೆ, ಸಚ್ಚಿದಾನಂದ ಭಾರತೀ ಸ್ವಾಮೀಜಿಗೆ ಹೆಚ್ಚಿನ ಭದ್ರತೆ ಒದಗಿಸುವಂತೆ ಮನವಿ ಮಾಡಿದೆ.
ಎಡನೀರು ಶ್ರೀಗಳ ಮೇಲೆ ದಾಳಿ ಯತ್ನಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಕೂಡಲೇ ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಬಂಧಿಸಿ ಅವರ ವಿರುದ್ಧ ಕೇರಳ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಶಾಂತಿ ಹಾಗೂ ಸಾಮರಸ್ಯದ ಮೂಲಕ ಹಿಂದೂ ಸಮಾಜದ ಪರ ಕೆಲಸ ಮಾಡುತ್ತಿರುವ ಸ್ವಾಮೀಜಿ ಮೇಲೆ ದುಷ್ಕರ್ಮಿಗಳು ನಡುರಸ್ತೆಯಲ್ಲಿಯೇ ಹಲ್ಲೆಗೆ ಯತ್ನಿಸಿರುವುದು ಗಂಭೀರ ವಿಚಾರವಾಗಿ. ಕೇರಳ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ದಕ್ಷಿಣ ಕನ್ನಡ ಬಿಜೆಪಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಆಗ್ರಹಿಸಿದ್ದಾರೆ.
ಎಡನೀರು ಸ್ವಾಮೀಜಿಗೆ ಸೂಕ್ತ ಭದ್ರತೆ ಕಲ್ಪಿಸಬೇಕು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ಗೆ ಬ್ರಿಜೇಶ್ ಚೌಟ ಆಗ್ರಹಿಸಿದ್ದಾರೆ.
ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಕೂಡ ಸ್ವಾಮೀಜಿ ಮೇಲಿನ ದಾಳಿ ಯತ್ನವನ್ನು ಖಂಡಿಸಿದ್ದಾರೆ. ಕೇರಳದ ಕಾನೂನು ಸುವ್ಯವಸ್ಥೆಯನ್ನು ಟೀಕಿಸಿದ ಶಾಸಕರು, ವಿಚ್ಛಿದ್ರಕಾರಕ ಮತ್ತು ಹಿಂದೂ ವಿರೋಧಿ ಅಂಶಗಳಿಂದ ಸವಾಲುಗಳು ಹೆಚ್ಚುತ್ತಿರುವುದು ಕೇರಳ ಸರ್ಕಾರದ ವೈಫಲ್ಯವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.
ಎಡನೀರು ಸಂಸ್ಥಾನದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಕಾರಿಗೆ ನಿನ್ನೆ ದಾಳಿ ನಡೆದಿದ್ದು ಈ ಘಟನೆಯನ್ನು ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಖಂಡಿಸಿದ್ದಾರೆ.
ಸಾರ್ವಜನಿಕ ಕಾರ್ಯಕ್ರಮದಿಂದ ಹಿಂದಿರುಗುವಾಗ ಬೋವಿಕಾನ – ಇರಿಯಣ್ಣಿ ಮಾರ್ಗ ಮಧ್ಯೆ ವಾಹನವನ್ನು ತಡೆದ ಪುಂಡರ ತಂಡವೊಂದು ತಗಾದೆ ಎಬ್ಬಿಸಿತ್ತು. ಇದೇ ದಾರಿಯಲ್ಲಿ ಕಾರ್ಯಕ್ರಮ ಮುಗಿಸಿ ಮರಳಿ ಬರುವಾಗ ಇರಿಯಣ್ಣಿಯಿಂದಲೇ ಹಿಂಬಾಲಿಸಿದ ಬಂದವರ ಪೈಕಿ ಬಾವಿಕೆರೆ ಎಂಬಲ್ಲಿ ದೊಣ್ಣೆಯಿಂದ ಕಾರಿನ ಗಾಜಿಗೆ ಹೊಡೆದರೆಂದೂ, ಕಾರಿನ ಗಾಜಿಗೆ ಹಾನಿಯಾಗಿದೆಯೆಂದೂ ತಿಳಿದುಬಂದಿದೆ. ಈ ಸಂದರ್ಭ ಸ್ವಾಮೀಜಿಯವರು ಕಾರು ನಿಲ್ಲಿಸದೇ ಶಾಂತರಾಗಿ ಮುಂದುವರಿದಿದ್ದಾರೆ.
ಎಡನೀರು ಸಂಸ್ಥಾನದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ವಾಹನದ ಮೇಲೆ ದುಷ್ಕರ್ಮಿಗಳ ದಾಳಿಯನ್ನು ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ವಿರೋಧಿಸಿದ್ದಾರೆ.
ಲಕ್ಷಾಂತರ ಹಿಂದೂಗಳು ಭಕ್ತಿಯಿಂದ ಆರಾಧಿಸುವ ಎಡನೀರು ಸಂಸ್ಥಾನದ ಸ್ವಾಮೀಜಿಗಳ ವಾಹನದ ಮೇಲಾದ ಆದ ದಾಳಿಯನ್ನು ಖಂಡಿಸುತ್ತಾ , ಅವರಿಗೆ ಸೂಕ್ತ ಭದ್ರತಾ ವ್ಯವಸ್ಥೆ ಕೇರಳ ಸರ್ಕಾರ ನೀಡಬೇಕೆಂದು ಅರುಣ್ ಪುತ್ತಿಲ ಒತ್ತಾಯಿಸಿದ್ದಾರೆ.