ಭಾರತದಲ್ಲಿ ಈಗ ಮತ್ತೊಂದು ಸುತ್ತಿನ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ವಿಲೀನ ಪ್ರಕ್ರಿಯೆ ಆರಂಭವಾಗಬಹುದು ಎನ್ನಲಾಗುತ್ತಿದೆ. ಪ್ರತಿಯೊಂದು ರಾಜ್ಯದಲ್ಲೂ ಒಂದು ಗ್ರಾಮೀಣ ಬ್ಯಾಂಕ್ಗೆ ಸಂಖ್ಯೆ ಸೀಮಿತಗೊಳಿಸುವ ಗುರಿ ಇದೆ. ಸದ್ಯ ದೇಶದ ವಿವಿಧೆಡೆ 43 ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿದ್ದು, ಅವುಗಳ ಸಂಖ್ಯೆಯನ್ನು 28ಕ್ಕೆ ಇಳಿಸುವ ಸಾಧ್ಯತೆ ಇದೆ. ಸರ್ಕಾರದ ವತಿಯಿಂದ ‘ಒಂದು ರಾಜ್ಯ ಒಂದು ಗ್ರಾಮೀಣ ಬ್ಯಾಂಕ್’ ಎನ್ನುವ ಗುರಿಯೊಂದಿಗೆ ಯೋಜನೆ ಸಿದ್ಧಪಡಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ನಬಾರ್ಡ್ ಜೊತೆಗೆ ಸರ್ಕಾರ ಸಮಾಲೋಚನೆ ನಡೆಸುತ್ತಿದೆ.
2004-05ರಲ್ಲಿ ಮೊದಲ ಬಾರಿಗೆ ಗ್ರಾಮೀಣ ಬ್ಯಾಂಕುಗಳ ವಿಲೀನ ಪ್ರಕ್ರಿಯೆಯನ್ನು ಸರ್ಕಾರ ಆರಂಭಿಸಿತು. ಈವರೆಗೆ ಮೂರು ಹಂತಗಳಲ್ಲಿ ಈ ಕೆಲಸ ನಡೆದಿದೆ. 196 ಇದ್ದ ಗ್ರಾಮೀಣ ಬ್ಯಾಂಕುಗಳ ಸಂಖ್ಯೆ 43ಕ್ಕೆ ಇಳಿದಿದೆ. ಈಗ ನಾಲ್ಕನೇ ಸುತ್ತಿನ ಪ್ರಕ್ರಿಯೆ ಸದ್ಯದಲ್ಲೇ ಆರಂಭವಾಗಬಹುದು.
ದೇಶದಲ್ಲಿರುವ ಪ್ರತಿಯೊಂದು ಗ್ರಾಮೀಣ ಬ್ಯಾಂಕುಗಳಲ್ಲಿ ನಿಯಮ ರೀತಿಯಲ್ಲಿ ಪಾಲುದಾರಿಕೆ ಇರುತ್ತದೆ. ಕೇಂದ್ರ ಸರ್ಕಾರ ಶೇ. 50ರಷ್ಟು ಪಾಲು ಹೊಂದಿರುತ್ತದೆ. ರಾಜ್ಯ ಸರ್ಕಾರದ ಪಾಲು ಶೇ. 15 ಮಾತ್ರವೇ ಇರುತ್ತದೆ. ಹಾಗೆಯೇ ಪ್ರತಿಯೊಂದು ಗ್ರಾಮೀಣ ಬ್ಯಾಂಕಿಗೂ ಪ್ರಾಯೋಜಿತ ನ್ಯಾಷನಲ್ ಬ್ಯಾಂಕ್ ಇರುತ್ತದೆ. ಈ ಸ್ಪಾನ್ಸರ್ ಬ್ಯಾಂಕ್ನ ಪಾಲು ಶೇ. 35ರಷ್ಟು ಇರುತ್ತದೆ.
ದೇಶದ ಎಲ್ಲಾ ರಾಜ್ಯಗಳಲ್ಲೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿವೆ. 12 ರಾಜ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ರೂರಲ್ ಬ್ಯಾಂಕ್ಗಳಿವೆ. ಇಂಥವನ್ನು ಒಂದು ಬ್ಯಾಂಕ್ಗೆ ವಿಲೀನಗೊಳಿಸಲಾಗುತ್ತದೆ.
ಕರ್ನಾಟಕದಲ್ಲಿ ಮೂರು ಗ್ರಾಮೀಣ ಬ್ಯಾಂಕುಗಳಿವೆ. ಬಳ್ಳಾರಿಯಲ್ಲಿ ಕೆನರಾ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್ ಇದೆ. ಮೈಸೂರಿನಲ್ಲಿ ಎಸ್ಬಿಐ ಪ್ರಾಯೋಜಕತ್ವದಲ್ಲಿ ಕಾವೇರಿ ಗ್ರಾಮೀಣ ಬ್ಯಾಂಕ್ ಇದೆ. ಧಾರವಾಡದಲ್ಲಿ ಕರ್ನಾಟಕ ವಿಕಾಸ್ ಗ್ರಾಮೀಣ ಬ್ಯಾಂಕ್ ಇದೆ. ಇದರ ಪ್ರಾಯೋಜಕ ಬ್ಯಾಂಕ್ ಸಿಂಡಿಕೆಟ್ ಬ್ಯಾಂಕ್. ಈ ಮೂರು ಬ್ಯಾಂಕನ್ನು ವಿಲೀನಗೊಳಿಸಿ, ಅದರ ಪ್ರಾಯೋಜಕತ್ವವನ್ನು ಎಸ್ಬಿಐ, ಕೆನರಾ ಬ್ಯಾಂಕ್ ಮತ್ತು ಸಿಂಡಿಕೇಟ್ ಬ್ಯಾಂಕ್ ಈ ಮೂರರಲ್ಲಿ ಒಂದಕ್ಕೆ ನೀಡಲಾಗುತ್ತದೆ.