ಚಿಕ್ಕಮಗಳೂರು : ಕಳೆದ ಕೆಲ ದಿನಗಳ ಹಿಂದೆ ಉಡುಪಿ ಜಿಲ್ಲೆಯಲ್ಲಿ ಮತ್ತೆ ನಕ್ಸಲರ ಓಡಾಟದ ಬಗ್ಗೆ ಮಾಹಿತಿ ದೊರೆತಿತ್ತು. ಇದೀಗ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಮತ್ತೆ ನಕ್ಸಲರ ಸದ್ದು ಕೇಳಿಬಂದಿದ್ದು, ಜಯಪುರ ಠಾಣಾ ವ್ಯಾಪ್ತಿಯ ಮನೆಗಳಿಗೆ ಮನೆಗಳಿಗೆ ಭೇಟಿ ನೀಡಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಆಮ್ಟೆ ಮತ್ತು ನಕ್ಸಲ್ ನಿಗ್ರಹ ಪಡೆ ಎಸ್ಪಿ ಜಿತೇಂದ್ರ ನೇತೃತ್ವದಲ್ಲಿ ತನಿಖೆ ಮಾಡಲಾಗಿದೆ.
ಅರಣ್ಯ ಒತ್ತುವರಿ ಮತ್ತು ಕಸ್ತೂರಿ ರಂಗನ್ ವರದಿ ಸಂಬಂಧ ಕೊಪ್ಪ ತಾಲೂಕಿನ ಯಡಗುಂದಿ ಗ್ರಾಮಕ್ಕೆ ನಕ್ಸಲರು ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಗ್ರಾಮದ ಪ್ರತಿ ಮನೆಯಲ್ಲೂ ಪೊಲೀಸರಿಂದ ಶೋಧ ಮಾಡಲಾಗಿದೆ. ಗ್ರಾಮಸ್ಥರಿಂದ ಎಎನ್ಎಫ್ ಮತ್ತು ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ.
ಇನ್ನು ಕೆರೆಕಟ್ಟೆ, ಕುದುರೆಮುಖ, ತನಿಕೋಡು ಚೆಕ್ಪೋಸ್ಟ್ ಭಾಗದಲ್ಲಿ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದ್ದು, ಉಡುಪಿ-ಚಿಕ್ಕಮಗಳೂರು ಗಡಿ ಭಾಗದಲ್ಲಿ ಸಿಬ್ಬಂದಿಗಳು ಫುಲ್ ಅಲರ್ಟ್ ಆಗಿದ್ದಾರೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಈದು ಗ್ರಾಮದಲ್ಲಿ ನಕ್ಸಲರ ಓಡಾಟದ ಶಂಕೆ ವ್ಯಕ್ತವಾಗಿತ್ತು. ಹಾಗಾಗಿ ನಕ್ಸಲ್ ನಿಗ್ರಹ ಪಡೆ ಕಾರ್ಯಾಚರಣೆ ಮಾಡಿದ್ದರು. ಕೆಲವು ದಿನಗಳಿಂದ ಅನುಮಾನಾಸ್ಪದ ವ್ಯಕ್ತಿಗಳು ಓಡಾಡುತ್ತಿದ್ದಾರೆ ಎಂಬ ವದಂತಿಗಳು ಹಬ್ಬಿದ್ದವು. ಈ ಬಗ್ಗೆ ಎಎನ್ಎಫ್ ಸಿಬ್ಬಂದಿ ಸ್ಥಳೀಯರನ್ನು ವಿಚಾಣೆ ಮಾಡಿದ್ದಾರೆ. ಆದರೆ ಸ್ಥಳೀಯರಿಂದ ಯಾವುದೇ ಮಾಹಿತಿ ದೊರೆತ್ತಿಲ್ಲ ಎಂಬುವುದು ಎಎನ್ಎಫ್ ಮೂಲಗಳು ತಿಳಿಸಿವೆ.
ನಕ್ಸಲರು ಪಶ್ಚಿಮ ಘಟ್ಟಗಳ ತಪ್ಪಲಿನ ಪ್ರದೇಶಗಳಲ್ಲಿ ನುಸುಳಿದ್ದಿರಬಹುದು ಎಂದು ಶಂಕಿಸಲಾಗಿದೆ. ಸದ್ಯ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ವಿವಿಧ ಅರಣ್ಯ ಪ್ರದೇಶಗಳಲ್ಲಿ ಅಧಿಕಾರಿಗಳು ಕಾರ್ಯಾಚರಣೆ ಮಾಡಿದ್ದಾರೆ. ಸದ್ಯ ಈದುವರೆಗೆ ನಕ್ಸಲ್ರ ಯಾವುದೇ ಸುಳಿವು ಪತ್ತೆಯಾಗಿಲ್ಲ. ಹೀಗಾಗಿ ಸಾರ್ವಜನಿಕರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಎಎನ್ಎಫ್ ಅಧಿಕಾರಿಗಳು ಸ್ಥಳೀಯರಿಗೆ ಧೈರ್ಯ ಹೇಳಿದ್ದಾರೆ.