ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಪಕ್ಷ ಬಿಜೆಪಿ ಅಕ್ರಮಗಳ ಬಗ್ಗೆ ಆರೋಪ ಮಾಡಿ ಇಕ್ಕಟ್ಟಿಗೆ ಸಿಲುಕಿಸುತ್ತಿರುವ ಮಧ್ಯೆಯೇ ಇದೀಗ ಬಿಜೆಪಿ ವಿರುದ್ಧ ರಾಜ್ಯ ಸರ್ಕಾರ ಮತ್ತೊಂದು ಬಾಣ ಬಿಡಲು ಸಜ್ಜಾಗಿದೆ.
ಬಿಜೆಪಿಯ ಏಟಿಗೆ ಎದುರೇಟು ಕೊಡಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದ್ದು, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅಧಿಕಾರಾವಧಿಯ ಮತ್ತೊಂದು ತನಿಖೆಗೆ ಕಾಂಗ್ರೆಸ್ ಮುಂದಾಗಿದೆ ಎಂದು ತಿಳಿದು ಬಂದಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಹಗರಣವನ್ನು ರಾಜ್ಯ ಸರ್ಕಾರ ಕೆದಕಿದ್ದು, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ನಡೆದ ಅಕ್ರಮದ ತನಿಖೆಗೆ ಆದೇಶ ನೀಡಿದೆ ಎಂದು ತಿಳಿದು ಬಂದಿದೆ.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ಅಕ್ರಮ ನಡೆದಿರುವ ಆರೋಪವಿದ್ದು, ಮಾನವಕೃಷಿ ಸಾಂಸ್ಕೃತಿಕ ಸಂಘದಲ್ಲಿ ನಡೆದ ಅಕ್ರಮದ ಬಗ್ಗೆ ತನಿಖೆಗೆ ಆದೇಶ ನೀಡಲಾಗಿದೆ. ಕ.ಕ.ಪ್ರ.ಮಂಡಳಿ ಅಕ್ರಮದ ವರದಿ ನೀಡುವಂತೆ ಅಪರ ಮುಖ್ಯಕಾರ್ಯದರ್ಶಿಗೆ ನಿರ್ದೇಶನ ನೀಡಲಾಗಿದ್ದು, 15 ದಿನದೊಳಗೆ ವರದಿ ನೀಡುವಂತೆ ಸೂಚನೆ ನೀಡಲಾಗಿದೆ.
ಕೃಷಿ ಸಾಂಸ್ಕೃತಿಕ ಸಂಘದ ಅವ್ಯವಹಾರದ ಬಗ್ಗೆ ತನಿಖೆಗೆ ನಿವೃತ್ತ ಐಎಎಸ್ ಸುಧೀರ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ತನಿಖೆ ಮಾಡಿ ಆರು ತಿಂಗಳೊಳಗೆ ವರದಿ ಸಲ್ಲಿಸುವಂತೆ ತಾಕೀತು ನೀಡಲಾಗಿದೆ. ಅಭಿವೃದ್ಧಿ ವಿಚಾರಕ್ಕೆ ನೀಡಿದ್ದ ಹಣದಲ್ಲಿ ಅಕ್ರಮ ನಡೆದಿರುವ ಆರೋಪವಿದ್ದು, ಸರ್ಕಾರದ ಆದೇಶ ನಿಯಮಗಳನ್ನ ಗಾಳಿಗೆ ತೂರಿ ಅಕ್ರಮ ಮಾಡಲಾಗಿದೆ. ಈ ಬಗ್ಗೆ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿದೆ.
ಈ ಹಿಂದೆ ದತ್ತಾತ್ರೇಯ ಪಾಟೀಲ್ ಅಧ್ಯಕ್ಷರಾಗಿದ್ದ ವೇಳೆ ಅಕ್ರಮ ನಡೆದಿದೆ ಎನ್ನಲಾಗಿದ್ದು ಆ ಮೂಲಕ ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದ ಕಾಲದ ಇನ್ನೊಂದು ಅಕ್ರಮದ ತನಿಖೆಗೆ ಆದೇಶ ನೀಡುವ ಮೂಲಕ ಹಿಂದಿನ ಬಿಜೆಪಿ ಸರ್ಕಾರದ ಹಗರಣವನ್ನು ರಾಜ್ಯ ಸರ್ಕಾರ ಕೆದಕಿದೆ.